ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಹೊರಟಿದೆ: ಸಚಿವ ದಿನೇಶ್ ಗುಂಡೂರಾವ್

Spread the love

ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಹೊರಟಿದೆ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಹೊರಟಿದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.

ನಗರದಲ್ಲಿ ಮಾತನಾಡಿದ ಅವರು, ವಿಶೇಷ ಅಧಿವೇಶನ ಕರೆದು ಮುಖಭಂಗವಾಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದರು. ಮಹಿಳಾ ಮೀಸಲಾತಿಗೆ ಯಾರೂ ವಿರೋಧ ಇಲ್ಲ, 2023ರಲ್ಲಿ ಮಸೂದೆ ತರಲಾದಾಗ ಸರ್ವಾನುಮತದಿಂದ ಒಪ್ಪಿಕೊಂಡಿದ್ದೇವೆ. ಮಹಿಳಾ ಮೀಸಲಾತಿಗೂ ಕ್ಷೇತ್ರ ಪುನರ್ವಿಂಗಡನೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 33 ಶೇಕಡಾ ಮಹಿಳೆಯರಿಗೆ ಮೀಸಲಾತಿ ನೀಡಿದರೆ ಯಾವುದೇ ತೊಂದರೆ ಇಲ್ಲ. ಮಸೂದೆಯನ್ನು ಜಾರಿಗೆ ತರಬೇಕೆಂಬುದು ನಮ್ಮ ನಿಲುವು ಎಂದು ಹೇಳಿದರು. ಈ ಮಸೂದೆ ಮೊದಲು ಜಾರಿಗೆ ಬಂದಿದ್ದರೆ ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತಿತ್ತು ಎಂದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲಿನ ಭೀತಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಫಲಿತಾಂಶವನ್ನು ಯಾರೂ ಮುಂಚಿತವಾಗಿ ಹೇಳಲು ಸಾಧ್ಯವಿಲ್ಲ. “ನಾನು ಜ್ಯೋತಿಷಿ ಅಲ್ಲ” ಎಂದು ಹೇಳಿದರು.

ಪಕ್ಷದೊಳಗಿನ ಕೆಲ ಕ್ರಮಗಳು ಮತ್ತು ಚುನಾವಣಾ ಫಲಿತಾಂಶಕ್ಕೆ ಸಂಬಂಧವಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಚಿವ ಜಮೀರ್ ಅಹಮ್ಮದ್ ಅವರನ್ನು ಸ್ಥಾನದಿಂದ ಇಳಿಸುವ ಕುರಿತು ಹರಿದಾಡುತ್ತಿರುವ ಸುದ್ದಿ ಕೇವಲ ಊಹಾಪೋಹ ಎಂದರು.

ಜಮೀರ್ ಅಹಮ್ಮದ್ ಪಕ್ಷದ ಹಿರಿಯ ನಾಯಕರು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರು ಇದಕ್ಕೆ ಬೇರೆ ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ನಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ, ಎಲ್ಲ ಧರ್ಮದವರಿಗೂ ಸಮಾನ ಸ್ಥಾನವಿದೆ. ತಪ್ಪು ನಡೆದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯ ಬಗ್ಗೆ ಮಾತನಾಡಿದ ಸಚಿವರು, ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿವೆ ಎಂದು ಹೇಳಿದರು. ಹೈಕೋರ್ಟ್ ಆದೇಶದಂತೆ ಜೂನ್ ಒಳಗೆ ಚುನಾವಣೆ ನಡೆಸಬೇಕಿದೆ. ಅದರ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ ಎಂದರು.

ಚುನಾವಣೆ ಮುಂದೂಡಲು ಕಾಲಾವಕಾಶ ಕೇಳಲಾಗಿದೆ ಎಂಬ ಮಾಹಿತಿ ಇಲ್ಲ. ಹೈಕೋರ್ಟ್ ಜೂನ್ ಒಳಗೆ ನಡೆಸಲು ಸೂಚಿಸಿದರೆ ಅದೇ ರೀತಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ ತನಕ ಕಾಲಾವಕಾಶ ನೀಡಿದರೆ ಆ ಅವಧಿಯಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.


Spread the love
Subscribe
Notify of

0 Comments
Inline Feedbacks
View all comments