ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು ಲಭ್ಯ – ಪ್ರಶಾಂತ್ ಜತ್ತನ್ನ

Spread the love

ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳು ಲಭ್ಯ – ಪ್ರಶಾಂತ್ ಜತ್ತನ್ನ

ಉಡುಪಿ: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ ವಿವಿಧ ಸಾಲ ಯೋಜನೆಗಳು, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಸರಕಾರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯವನ್ನು ಇಟ್ಟುಕೊಂಡು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿದ್ದು ವಿಶೇಷ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಷ್ಠಾನಗೊಳಿಸುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ ಸಂಸ್ಥೆಗಳ ಬಲವರ್ಧನೆಗಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಿಗಮಕ್ಕೆ ರೂ 250 ಕೋಟಿ ಅನುದಾನ ಒದಗಿಸಿದ್ದಾರೆ.

ಇದಕ್ಕಿಂತ ಮೊದಲು ಕ್ರೈಸ್ತ ಅಭಿವೃದ್ಧಿ ಸಮಿತಿಯಾಗಿದ್ದ ಈ ಸಂಸ್ಥೆಯನ್ನು ಕ್ರೈಸ್ತ ನಿಗಮ ಸ್ಥಾಪನೆ ಮಾಡಲು ಸಮುದಾಯದ ನಾಯಕರಾದ ಕೆ ಜೆ ಜಾರ್ಜ್, ಐವನ್ ಡಿಸೋಜಾ, ಜೆ ಆರ್ ಲೋಬೊ, ಬೆಂಗಳೂರು ಮಹಾ ಧರ್ಮಾಧ್ಯಕ್ಷರು ಮತ್ತು ಅನೇಕ ನಾಯಕರುಗಳ ಪ್ರಯತ್ನದಿಂದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಅಲ್ಪಸಂಖ್ಯಾತ ಇಲಾಖೆ ಮಂತ್ರಿಗಳಾದ ಝಮೀರ್ ಅಹ್ಮದ್ ಖಾನ್ ಅವರ ಬೆಂಬಲದಿಂದ ಈ ನಿಗಮ ಪ್ರಾರಂಭವಾಗಿದೆ.

ಇದೀಗ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (KCCDC) ತನ್ನ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್ನ ಲೋಕಾರ್ಪಣೆಯನ್ನು 2025ರ ಅಕ್ಟೋಬರ್ 17ರಂದು ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ನೆರೆವೇರಿಸಿದ್ದು ನಿಗಮದಿಂದ ಸಿಗುವ ಎಲ್ಲಾ ರೀತಿಯ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳ ವಿವರ ಒಳಗೊಂಡಿದೆ.

ಸಾಲ ಹಾಗೂ ಸಹಾಯಧನ ಯೋಜನೆಗಳನ್ನು ವಿವರಿಸಿದ ಅವರು ಅರಿವು ವಿದ್ಯಾಭ್ಯಾಸ ಸಾಲ ಯೋಜನೆ – CET ಮತ್ತು NEET ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ. ₹50,000 ರಿಂದ ₹5.00 ಲಕ್ಷವರೆಗೆ ಸಾಲ ಯೋಜನೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ₹20.00 ಲಕ್ಷವರೆಗೆ ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಟ್ಯಾಕ್ಸಿ / ಸರಕು ಸಾಗಣೆ ವಾಹನ / ಆಟೋ ರಿಕ್ಷಾ ಖರೀದಿಗೆ ಸಹಾಯಧನದ ಸ್ವಾಲಂಬಿ ಸಾರಥಿ ಯೋಜನೆ. ಸಣ್ಣ ವ್ಯಾಪಾರ ಪ್ರಾರಂಭಿಸಲು ಅಥವಾ ವಿಸ್ತರಿಸಲು ಶ್ರಮಶಕ್ತಿ ಯೋಜನೆಯಡಿ ₹50,000 ಸಾಲ ನೀಡಲಾಗುತ್ತಿದ್ದು ಇದಕ್ಕೆ ₹25,000 ಸಹಾಯಧನ ಲಭ್ಯವಿದೆ ಎಂದರು.

ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ವಿವಾಹವಾಗದ ಮಹಿಳೆಯರ ಆರ್ಥಿಕ ಸಬಲಿಕರಣಕ್ಕಾಗಿ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ ₹50,000 ಸಾಲ ನೀಡಲಾಗುತ್ತಿದ್ದು ಇದಕ್ಕೆ ₹25,000 ಸಹಾಯಧನ ಲಭ್ಯವಿದೆ. ಸಣ್ಣ ವ್ಯಾಪಾರ/ಚಿಲ್ಲರೆ ಮಾರಾಟ / ರಿಪೇರಿ ಸೇವೆ ಪ್ರಾರಂಭಿಸಲು ವೃತ್ತಿ ಪ್ರೋತ್ಸಾಹ ಯೋಜನೆಯಡಿ (₹1.00 ಲಕ್ಷ ಸಾಲ ನೀಡಲಾಗುತ್ತಿದ್ದು ಇದಕ್ಕೆ ₹50,000 ಸಹಾಯಧನ ಲಭ್ಯವಿದೆ.

ಗಂಗಾ ಕಲ್ಯಾಣ ಯೋಜನೆ – ಬೋರ್ವೆಲ್ ತೋಡುವುದು, ಪಂಪ್ಸೆಟ್ ಅಳವಡಿಸುವುದು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು. ₹3.00 ಲಕ್ಷದಿಂದ ₹4.00 ಲಕ್ಷವರೆಗೆ ಸಹಾಯಧನ ನೀಡಲಾಗುತ್ತದೆ. ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆ ಪ್ರಾರಂಭಿಸಲು ನೇರ ವ್ಯವಹಾರ ಸಾಲ ಯೋಜನೆಯಡಿ ₹20.00 ಲಕ್ಷವರೆಗೆ ಸಾಲ ಒದಗಿಸಲಾಗುತ್ತದೆ. ಸ್ವ ಉದ್ಯೋಗ ಚಟುವಟಿಕೆ ಕೈಗೊಳ್ಳಲು ಮಹಿಳಾ ಸ್ವಸಹಾಯ ಸಂಘಗಳ ಸಹಾಯಧನ ಯೋಜನೆ , ₹2.00 ಲಕ್ಷವರೆಗೆ ಸಾಲ ನೀಡಲಾಗುತ್ತಿದ್ದು ಇದಕ್ಕೆ 50% ಸಹಾಯಧನ ಲಭ್ಯವಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಮುದಾಯ ಆಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು ನಿಗಮದ ವತಿಯಿಂದ ನಡೆಸಲಾಗುತ್ತದೆ ಎಂದರು.

ಸಮುದಾಯದ ಅಭಿವೃದ್ಧಿಿಗಾಗಿ ವಿವಿಧ ಯೋಜನೆಗಳನ್ನು ನಿಗಮದ ಮೂಲಕ ಅನುಷ್ಠಾನಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದ್ದು ಕ್ರೈಸ್ತ ಸಮುದಾಯದ ಜನರು ಇದರ ಲಾಭವನ್ನು ಪಡೆಯಬೇಕು ಎನ್ನುವುದು ನಮ್ಮ ವಿನಂತಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಯಕರುಗಳಾದ ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವರ್, ವಿನೋದ್ ಕ್ರಾಸ್ಟೋ, ಸದಾನಂದ ಕಾಂಚನ್, ಶರ್ಫುದ್ದೀನ್, ಚಾರ್ಲ್ಸ್ ಅಂಬ್ಲರ್, ಗ್ಲಾಡ್ಸನ್ ಉಪಸ್ಥಿತರಿದ್ದರು


Spread the love
Subscribe
Notify of

0 Comments
Inline Feedbacks
View all comments