ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ

Spread the love

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ

ಮುಂಬಯಿ : ಊರಿನಿಂದ ಪರವೂರಿಗೆ ಮುಂದಿನ ಭವಿಷ್ಯ ರೂಪಿಸಲು ನಾವು ಪ್ರಯಾಣಿಸುವಾಗ, ಹಿರಿಯರ ಆದೇಶದಂತೆ ನಾವು ನಂಬಿಕೊಂಡು ಬಂದಿರುವ ಕುಲದೇವರು ಹಾಗೂ ಗ್ರಾಮದೇವರ ಆಶೀರ್ವಾದವನ್ನು ಪಡೆದು ಬರುತ್ತೇವೆ. ಈ ರೀತಿ ಮುಂಬಯಿಯಂತಹ ಮಹಾನಗರದಲ್ಲಿ ಸಾಧನೆ ಮಾಡಿದವರು ಅನೇಕರು, ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಗೆ ಹಿಂದಿನಿಂದಲೂ ಎಲ್ಲರೂ ಸಹಕಾರ ನೀಡುತ್ತಾ ಬಂದಿದ್ದು, ಗರಡಿಯ ಪುನರ್ ನಿರ್ಮಾಣ ಕಾರ್ಯವು ಉನ್ನತ ಮಟ್ಟದಲ್ಲಿ ನಡೆಯುವುದರಲ್ಲಿ ಎಲ್ಲರೂ ಕೈಜೋಡಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿ ಸೇವಾ ಟ್ರಷ್ಟ್, ಮುಂಬಯಿಯ ಅದ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ವಿಶ್ವಾಸ ವ್ಯಕ್ತಪಡಿಸಿದರು.

ಇತಿಹಾಸ ಪ್ರಸಿದ್ದ ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯರು ಮತ್ತು ಅವರ ಆರಾಧ್ಯ ದೈವರಾದ ಶ್ರೀ ಬ್ರಹ್ಮ ಬೈದರನ್ನು ನಂಬಿ ಪೂಜಿಸುತ್ತಿದ್ದು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ ಸಮಾರಂಭವು ಎ. 5 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿತ್ಯಾನಂದ ಡಿ. ಕೋಟ್ಯಾನ್ ಅವರು ನಾಡಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರದಲ್ಲಿ ಮುಂಬಯಿಗರ ಕೊಡುಗೆ ಅಪಾರವಾಗಿದ್ದು, ಸುಮಾರು ಏಳುವರೆ ಕೋಟಿ ಅಂದಾಜುವೆಚ್ಚದ ಈ ಕಾರ್ಯಕ್ಕೆ ನಿಮ್ಮೆಲ್ಲರ ಭರವಸೆ ಹಾಗೂ ಪ್ರೀತಿ ವಿಶ್ವಾಸದೊಂದೆಗೆ ಮುಂದುವರಿಯುತ್ತಿದ್ದೇವೆ. ಈಗಾಗಲೇ ಎ. 1 ರಂದು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಗರಡಿಯ ಪುನರ್ ನಿರ್ಮಾಣ ಕೆಲಸಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಇದೇ ರೀತಿ ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸದೊಂದಿಗೆ, ಪ್ರಾಮಾಣಿಕತೆಯಿಂದ ನಾವು ಒಂದಾಗಿ ಕೋಟಿ ಚೆನ್ನಯರ ಆಶೀರ್ವಾದದೊಂದಿಗೆ ಈ ಕಾರ್ಯವನ್ನು ಉನ್ನತ ಮಟ್ಟದಲ್ಲಿ ಪೂರೈಸೋಣ ಎಂದರು.

ಕಾರ್ಯಕ್ರಮಕ್ಕೆ ಚಾಲನೆಯಿತ್ತು ಮಾತಾನಾಡಿದ ತೋನ್ಸೆ ಮೂಲದ ಖಾತ ಉದ್ಯಮಿ ತೋನ್ಸೆ ಎಂ. ಆನಂದ ಶೆಟ್ಟಿಯವರು ಯಾವುದೇ ಊರಲ್ಲಿ ಒಳ್ಳೆಯ ಜನರು, ದೇವಸ್ಥಾನವಿದ್ದಲ್ಲಿ ಆ ಊರು ಒಳ್ಳೆಯದಾಗುತ್ತದೆ. ಈ ಗರಡಿಯ ಜೀರ್ಣೋದ್ದಾರ ಮಾಡುವ ಯೋಗ, ಭಾಗ್ಯ ತೋನ್ಸೆಯವರಿಗೆ ಸಿಕ್ಕಿದೆ. ಶ್ರೀಮಂತ, ಬಡವ, ಜಾತಿ ಬೇದವಿಲ್ಲದ ಸಾಧ್ಯವಾದಷ್ಟು ಸಹಕರಿಸಿ ಈ ಧಾರ್ಮಿಕ ಕಾರ್ಯದಲ್ಲಿ ಬಾಗಿಯಾಗೋಣ. ನಮ್ಮ ಯಾವುದೇ ಕಾರ್ಯಕ್ಕೆ ನಮ್ಮ ದೈವ ದೇವರು ಮೊದಲು. ಆದುದರಿಂದ ನಾವೆಲ್ಲರೂ ಒಟ್ಟಾಗಿ ಈ ಪುಣ್ಯ ಕಾರ್ಯದಲ್ಲಿ ಬಾಗಿಯಾಗೋಣ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಗರಡಿಯ ಪುನರ್ ನಿರ್ಮಾಣಕ್ಕಾಗಿ ಮನವಿ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಗರಡಿಯ ಅರ್ಚಕರಾದ ಜಯಂತ ಎ. ಅಮೀನ್ ಅವರು ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಇತಿಹಾಸವನ್ನು ವಿವರವಾಗಿ ಪರಿಚಯಿಸಿದರು. 66 ಪ್ರಾಚೀನ ಗರಡಿಗಳಲ್ಲಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರಡಿಯು ಒಂದಾಗಿದ್ದು, ಇಂದಿನ ಅಗತ್ಯತೆಗಳಿಗೆ ಅನುಗುಣವಾಗಿ ಗರಡಿಯ ಜೀರ್ಣೋದ್ದಾರ ಕಾರ್ಯವನ್ನು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಈ ಮಹತ್ವದ ಧಾರ್ಮಿಕ ಕಾರ್ಯಕ್ಕೆ ಮುಂಬಯಿಗರ ಸಹಕಾರ ಅತ್ಯಂತ ಅಗತ್ಯವೆಂದರು

ಗರಡಿಯ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ಉಮೇಶ್ ಪೂಜಾರಿ ಬಡಾನಿಡಿಯೂರು, ಕಾರ್ಯದರ್ಶಿ ನಂದಕಿಶೋರ್, ಕೋಶಾಧಿಕಾರಿ ನ್ಯಾ. ಸಂದೀಪ ಶಂಕರ್ ಮಾತನಾಡಿ ನಮ್ಮ ಕಾಲದಲ್ಲಿ ಈ ಮಹತ್ವದ ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಸಹಕಾರ ನೀಡಬೇಕು ಎಂದರು. ಉದ್ಯಮಿ ಪ್ರಶಾಂತ್ ಸಿ ಪೂಜಾರಿ, ಕಲಾವಿದ, ಸಮಾಜ ಸೇವಕ ಲಕ್ಷಣ ಕಾಂಚನ್ ಗುಜ್ಜರಬೆಟ್ಟು ಕಾರ್ಯಕ್ರಮಕ್ಕೆ ಶುಭ ಕೋರಿದರು.

ನಾರಾಯಣ ಗುರುಗಳ ಮೂರ್ತಿಗೆ ಪೂಜೆಸಲ್ಲಿಸಿದ ನಂತರ ಸುಲೋಚನಾ, ಭಾರತಿ ಮತ್ತು ಕಸ್ತೂರಿ ಇವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ವೇದಿಕೆಯಲ್ಲಿ ಅತಿಥಿಗಳೊಂದಿಗೆ ಮುಂಬಯಿ ಸಮಿತಿಯ ಉಪಾಧ್ಯಕ್ಷರುಗಳಾದ ಡಿ. ಬಿ. ಅಮೀನ್, ಸಿ. ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಕೋಶಾಧಿಕಾರಿ ರವಿರಾಜ್ ಕಲ್ಯಾಣಪುರ್ ಮತ್ತು ಇತರ ಪದಾಧಿಕಾರಿಗಳೂ ಉಪಸ್ಥಿತರಿದ್ದರು.

ಮುಂಬಯಿ ಸಮಿತಿಯ ಇತರ ಸದಸ್ಯರುಗಳಾದ ಜೊತೆ ಕಾರ್ಯದರ್ಶಿ ಕರುಣಾಕರ ಬಿ. ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್, ಸದಸ್ಯರಾದ ಅಶೋಕ್ ಕೋಟ್ಯಾನ್, ರೂಪ್ ಕುಮಾರ್ ಕಲ್ಯಾಣ್ ಪುರ, ವಿಜಯ ಪಾಲನ್, ಸುರೇಶ್ ಅಂಚನ್, ಆನಂದ ಜತ್ತನ್, ಕ್ರಿಷ್ಣ ಪಾಲನ್, ವಿಠಲ್ ಎಸ್ ಪೂಜಾರಿ, ಸದಾನಂದ ಬಿ ಪೂಜಾರಿ, ಉದಯ ಎನ್ ಪೂಜಾರಿ, ಸಲಹೆಗಾರರಾದ ವಿ. ಸಿ. ಪೂಜಾರಿ, ಸೋಮ ಸುವರ್ಣ, ನವೀನ್ ಕುಮಾರ್ ಎಸ್ ಪೂಜಾರಿ ಗುಳಿಬೆಟ್ಟು, ಸಿಎ ಅಶ್ವಿನ್ ಎಸ್ ಸುವರ್ಣ, ಮಹಿಳಾ ಸದಸ್ಯರಾದ ಹೀರಾ ಡಿ. ಅಮೀನ್, ಕಸ್ತೂರಿ ಆರ್ ಕಲ್ಯಾಣಪುರ್, ಮೃದುಲ್ಲ ಎ. ಕೋಟ್ಯಾನ್, ಲಕ್ಷೀ ಡಿ. ಅಂಚನ್, ಸುಲೋಚನಾ ಆರ್. ಪೂಜಾರಿ ಜಾನಕಿ ಎ. ಕೋಟ್ಯಾನ್, ಸುಶೀಲ ವಿ. ಪೂಜಾರಿ, ಸವಿತಾ ನರೇಶ್ ಕೋಟ್ಯಾನ್ ಮೊದಲದವರು ಸಹಕರಿಸಿದರು.

ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಶೇಖರ ಗುಜ್ಜರೆಬೆಟ್ಟು ಕಾರ್ಯಕ್ರಮವನ್ನು ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವಂದನಾರ್ಪಣೆ ಮಾಡಿದರು.


Spread the love
Subscribe
Notify of

0 Comments
Inline Feedbacks
View all comments