ದ.ಕ. ಜಿಲ್ಲೆಗೆ ಮಂಗಳೂರು ಮರು ನಾಮಕರಣಕ್ಕೆ ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸರಕಾರವನ್ನು ಆಗ್ರಹಿಸುವುದಾಗಿ ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿಯ ಮುಖಂಡ ದಯಾನಂದ ಕತ್ತಲ್ ಸಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ‘ಮಂಗಳೂರು’ ಎಂದು ಮರು ನಾಮಕರಣ ಮಾಡುವ ಹೋರಾಟಕ್ಕೆ ಸಮಿತಿ ರಚಿಸಲಾಗಿದೆ. ಇದರಲ್ಲಿ ಪದಾಧಿಕಾರಿಗಳ ನೇಮಕ ಮಾಡಿಲ್ಲ, ಪಕ್ಷಾತೀತವಾಗಿ ಎಲ್ಲರನ್ನೂ ಒಳಗೊಂಡ ಸಮಿತಿಯಾಗಿದೆ ಎಂದು ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ.
ಸಾರ್ವತ್ರಿಕವಾಗಿ ತುಳುನಾಡು ಎಂದು ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡನ್ನು ಒಳಗೊಂಡ ಭೂಭಾಗಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೆಸರು ಇತ್ತು. ಸುಮಾರು 2,000 ವರ್ಷಗಳ ಹಿಂದೆ ತಮಿಳಿನ ಸಂಗಂ ಸಾಹಿತ್ಯವಾದ ‘ಅಗನಾನೂರು’ ಎಂಬ ಕಾವ್ಯಮಾಲೆಯ 13ನೇ ಪದ್ಯದಲ್ಲಿ ತುಳುನಾಡು ಎಂಬ ಉಲ್ಲೇಖವಿರುವುದು ನಮ್ಮ ಪ್ರದೇಶದ ಪುರಾತನ ದಾಖಲೆಯಾಗಿದೆ. ಮುಂದೆ ಆಳುಪರು, ಪಲ್ಲವರು, ಹೊಯ್ಸಳರು, ವಿಜಯನಗರ, ಕೆಳದಿ ರಾಜರು ತುಳು ವಿಷಯ, ತುಳು ದೇಶ, ತುಳು ರಾಜ್ಯ ಎಂದು ನಮ್ಮ ಆವಿಭಜಿತ ಜಿಲ್ಲೆಗಳನ್ನು ಗುರುತಿಸಿರುವುದು ಇತಿಹಾಸದ ಪುಟಗಳಲ್ಲಿ ಸ್ಥಿರವಾಗಿರುವ ದಾಖಲೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಂಗಳೂರು ರಾಜ್ಯ, ಬಾರ್ಕೂರು ರಾಜ್ಯ ಎಂದು ಈಗಿರುವ ತುಳುನಾಡನ್ನು ವಿಭಾಗಿಸಿ ಆಡಳಿತಾತ್ಮಕವಾಗಿ ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ರಾಜ್ಯ’ವನ್ನಾಗಿಸಿರುವುದು ಮಂಗಳೂರು ಎಂಬ ಹೆಸರಿಗಿರುವ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಷ್ಟಲ್ಲದೆ ಅನೇಕ ವಿದೇಶಿ ವಿದ್ವಾಂಸರು ತಮ್ಮ ದಾಖಲೆಗಳಲ್ಲಿ ಮಂಗಳೂರನ್ನು ಉಲ್ಲೇಖಿಸಿರುತ್ತಾರೆ. 1931ರಲ್ಲಿ ಎಸ್.ಯು.ಪಣಿಯಾಡಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಜಿಲ್ಲೆ ಎಂಬ ಹೆಸರಿಡಬೇಕೆಂದು ಜಿಲ್ಲಾ ಪರಿಷತ್ ನಲ್ಲಿ ಮಂಡಿಸಿದಾಗ ಜಿಲ್ಲೆಗೆ ‘ಮಂಗಳೂರು’ ಎಂದು ಹೆಸರಿಡಬೇಕೆಂಬ ಕೂಗು ಅಲ್ಲಿನ ಪರಿಷತ್ ಸದಸ್ಯರಿಂದ ಬಂದಿತ್ತು ಎಂದು ಕತ್ತಲ್ ಸಾರ್ ಹೇಳಿದ್ದಾರೆ.
ನಮ್ಮ ಜಿಲ್ಲೆಗೆ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಹೆಸರುಗಳಿದ್ದವು. ಪೋರ್ಚುಗೀಸರು ಮತ್ತು ಬ್ರಿಟಿಷರು ನೀಡಿದ ಬಳುವಳಿ ಹೆಸರೇ ಕೆನರಾ. ಮುಂದೆ ಈ ಕೆನರಾ ವಿಭಜನೆಗೊಂಡು ‘ನಾರ್ತ್ ಕೆನರಾ’ ‘ಸೌತ್ ಕೆನರಾ’ ಆಗಿ ಮುಂದೆ ಇದು ಅಪಭ್ರಂಶವಾಗಿ ‘ಕನ್ನಡ’ವಾಗಿ ಬದಲಾಯಿತು ಎಂದವರು ತಿಳಿಸಿದರು.
ಮಂಗಳೂರು ಯಾಕೆ?
ವಿಜಯನಗರ ಅರಸರ ಕಾಲದಿಂದಲೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದ ಐತಿಹಾಸಿಕ ಹೆಸರು ಮಂಗಳೂರು ರಾಜ್ಯ. ಪ್ರಸಕ್ತ ತಾಲೂಕಿಗೆ ಸೀಮಿತವಾದ ಮಂಗಳೂರು ಹೆಸರನ್ನು ಇಡೀ ಜಿಲ್ಲೆಗೆ ಇಡಬೇಕೆಂದು ಪಕ್ಷಾತೀತವಾಗಿ ರಾಜಕಾರಣಿಗಳು ಸಾಮಾಜಿಕ ಚಿಂತಕರು ತುಳುವರು ಮತ್ತು ಧಾರ್ಮಿಕ ಮುಖಂಡರ ಬೇಡಿಕೆಯಾಗಿದೆ ಎಂದವರು ತಿಳಿಸಿದ್ದಾರೆ.
ತಾಲೂಕು ಕೇಂದ್ರದ ಹೆಸರನ್ನು ಇಡೀ ಜಿಲ್ಲೆಗೆ ಇಟ್ಟ ಸಾಕಷ್ಟು ಉದಾಹರಣೆಗಳಿವೆ. ಈಗಾಗಲೇ ಮಂಗಳೂರು ತಾಲೂಕಿ ಇರುವುದರಿಂದ ಈ ಹೆಸರನ್ನು ಜಿಲ್ಲೆಗೆ ಇಡುವುದರಿಂದ ಕಾನೂನಾತ್ಮಕ ತೊಡಕು ಇಲ್ಲದಿರುವುದು ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮಂಗಳೂರು ಹೆಸರಿನ ಕುರಿತು ಒಲವು ತೋರಿಸಿರುವುದು ಉತ್ತಮ ಬೆಳವಣಿಗೆ ಎಂದು ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಾಗೆಪಲ್ಲಿ ಹೆಸರು ಇದೀಗ ಭಾಗ್ಯ ನಗರವಾಗಿದೆ. ಅದೇರೀತಿ ಮಂಗಳೂರು ಪ್ರಾಚೀನವಾದ ಸಾಕಷ್ಟು ಉತ್ಪನ್ನಗಳ ಬ್ರ್ಯಾಂಡ್ ಮೂಲಕ ಖ್ಯಾತಿ ಪಡೆದಿದೆ. ಜಿಲ್ಲೆಯ ಎಲ್ಲರೂ ಒಪ್ಪುವಂತಹ ಹೆಸರು ಮಂಗಳೂರು. ಈಗಾಗಲೇ ಜಿಲ್ಲೆಯ ವಿಮಾನ ನಿಲ್ದಾಣ, ಬಂದರು, ವಿಶ್ವವಿದ್ಯಾಲಯ, ರೈಲ್ವೆ ಝೋನ್ ಗೆ ಮಂಗಳೂರು ಎಂದೇ ಹೆಸರು ಇದೆ.
ಮಂಗಳೂರು ಬ್ರಾಂಡ್ ನಿಂದ ಮುಂದೆ ಉದ್ದಿಮೆಗಳು, ಐಟಿ ಕಂಪನಿಗಳು ಮತ್ತು ಇತರ ಯೋಜನೆಗಳಿಗೆ ಸಹಕಾರಿ. ಬೆಂಗಳೂರಿನಷ್ಟೇ ಪ್ರಖ್ಯಾತಿ ಪಡೆಯಬಲ್ಲ ಸಾಮರ್ಥ್ಯವಿರುವ ಜಿಲ್ಲೆಯಾಗಿ ಬೆಳೆಯಲು ಬ್ರಾಂಡ್ ಮಂಗಳೂರು ಸಹಕಾರಿ
ವಸಾಹತುಶಾಹಿಗಳಾದ ಬ್ರಿಟಿಷರು, ಪೋರ್ಚುಗೀಸರು ನೀಡಿದ ಹೆಸರನ್ನು ಅಳಿಸಿ ದೇಸಿಯ ಹೆಸರು ಜಿಲ್ಲೆಗೆ ನೀಡಬೇಕೆಂಬ ಆಗ್ರಹ ಜಿಲ್ಲೆಯ ಬಹುತೇಕ ಜನರ ಬೇಡಿಕೆಯಾಗಿದೆ ಎಂದು ಸಮಿತಿಯ ಮುಖಂಡ ರಕ್ಷಿತ್ ಶಿವರಾಮ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಜಿಲ್ಲೆ ತುಳುಪರ ಹೋರಾಟ ಸಮಿತಿಯ ಮುಖಂಡರಾದ ಕಿರಣ್ ಕುಮಾರ್ ಕೋಡಿಕಲ್, ಬಿ.ಎ.ಮೊಯ್ದಿನ್ ಬಾವ, ಅಕ್ಷಿತ್ ಸುವರ್ಣ, ಕಸ್ತೂರಿ ಪಂಜ, ಪ್ರದೀಪ್ ಸರಿಪಲ್ಲ, ಭರತ್ ಕುಮಾರ್, ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.