ದೇಶದಲ್ಲಿ ಗಾಂಧಿ ವಿಚಾರಧಾರೆಯಿಂದ ಮಾತ್ರ ಕಾಂಗ್ರೆಸ್ ಪಕ್ಷ ಕಟ್ಟಲು ಸಾಧ್ಯ : ಕಿಮ್ಮನೆ ರತ್ನಾಕರ್

Spread the love

ದೇಶದಲ್ಲಿ ಗಾಂಧಿ ವಿಚಾರಧಾರೆಯಿಂದ ಮಾತ್ರ ಕಾಂಗ್ರೆಸ್ ಪಕ್ಷ ಕಟ್ಟಲು ಸಾಧ್ಯ : ಕಿಮ್ಮನೆ ರತ್ನಾಕರ್

ಉಡುಪಿ: ಆರಂಭದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವಿಚಾರಧಾರೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ಜನರಿಗೆ ತಲುಪಿತ್ತು. ಈಗ ಗಾಂಧಿ ವಿಚಾರಧಾರೆಗಳು ಹಾಗೂ ಸೈದ್ದಾಂತಿಕ ನಿಲುವುಗಳನ್ನು ಕಾರ್ಯಕರ್ತರಿಗೆ ನಿರ್ಧಿಷ್ಟವಾಗಿ ತಲುಪಿಸುವ ಕಾರ್ಯವನ್ನು ಮುಖಂಡರು ಮಾಡಬೇಕು. ಇಲ್ಲದಿದ್ದರೆ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಕಷ್ಟಸಾಧ್ಯ. ಅಲ್ಲದೆ ದೇಶದ ಏಕತೆ, ಸಮಗ್ರತೆಗೆ ತೊಂದರೆ ಆಗಲಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರದೊಂದಿಗೆ ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶವನ್ನು ಸಂವಿಧಾನದ ಪೀಠಿಕೆ ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಿಜೆಪಿ ದೇಶವನ್ನು ಕಟ್ಟುವ ಬದಲು ಧರ್ಮ, ಜಾತಿಯನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದರಿಂದ ದೇಶ ಕಟ್ಟಲು ಸಾಧ್ಯವಿಲ್ಲ, ಬಿಜೆಪಿಯವರು ಇತಿಹಾಸದ ಬಗ್ಗೆ ಸುಳ್ಳು ಕಥೆಗಳನ್ನು ಹರಡಿಸುತ್ತಿದ್ದಾರೆ. ಅದನ್ನು ಸಮರ್ಥನೆ ಮಾಡುವ ಯಾವುದೇ ಐತಿಹಾಸಿಕ ಸಾಕ್ಷ್ಯಗಳಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿಯ ಬದುಕು, ಬರಹಗಳನ್ನು ಓದುವ ಕೆಲಸ ಮಾಡ ಬೇಕು ಎಂದು ಅವರು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಪ್ರತೀ ಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ನೀಡುವುದೇ ನಿಜವಾದ ಸಮಾಜವಾದ ದೇಶದಲ್ಲಿರುವ ಎಲ್ಲ ಧರ್ಮ, ಜಾತಿಯವರಿಗೆ ಧರ್ಮಗಳನ್ನು ಆಚರಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದೇ ಜಾತ್ಯತೀತತೆ, ಸಂವಿಧಾನ ಬರೆಯದಿದ್ದರೆ, ಪ್ರಜಾಪ್ರಭುತ್ವ ಇರುತ್ತಿರಲಿಲ್ಲ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಇಂದು ಬಿಜೆಪಿ ಕೇಂದ್ರ ಸರಕಾರ ಪ್ರಜಾ ಪ್ರಭುತ್ವದ ಆಶಯವನ್ನು ಶಿಥಿಲಗೊಳಿಸುತ್ತಿದೆ. ಚುನಾವಣಾ ಆಯೋಗ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಅಪಪ್ರಚಾರದ ಮೂಲಕ ದೇಶದ ಇತಿಹಾಸವನ್ನೇ ಬದಲಾಯಿಸಲು ಹೊರಟಿದೆ. ಅಭಿವೃದ್ದಿ ಅಂದರೆ ಕೇವಲ ರಸ್ತೆ, ಸೇತುವೆ ಕಟ್ಟಿ ಶೇ.40 ಕಮಿಷನ್ ಪಡೆಯುವುದಲ್ಲ, ಬದಲಾಗಿ ಮಾನವ ಸಂಪನ್ಮೂಲಕ್ಕೆ ಆರ್ಥಿಕ ಶಕ್ತಿ ತುಂಬುವುದು ಅಭಿವೃದ್ಧಿ ಎಂದು ತಿಳಿಸಿದರು.

ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಎಸ್ ನಾರಾಯಣ ಮಾತನಾಡಿ, ಪಠ್ಯಪುಸ್ತಕಗಳಲ್ಲಿ ಸಂವಿಧಾನ ಪರಿಚಯ ಆಗಲೇ ಬೇಕು. ಶಿಕ್ಷಣದಲ್ಲಿ ಅಳವಡಿಸಿದರೆ ಸಂವಿಧಾನದ ಶಕ್ತಿ ಏನು ಎಂಬುದು ಮುಂದಿನ ಪೀಳಿಗೆಗೆ ಅರ್ಥ ಆಗುತ್ತದೆ. ಅದು ಕರ್ನಾಟಕದಿಂದ ಆರಂಭವಾಗಬೇಕು ಎಂದರು.

ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಜನ್ಸಾಲೆ, ನಾರಾಯಣ ಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ, ಪ್ರಸಾದ್‌ ರಾಜ್ ಕಾಂಚನ್, ಉದಯ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ ದಿನೇಶ್ ಪುತ್ರನ್, ವರೋನಿಕಾ ಕರ್ನೆಲಿಯೊ, ಕಿಶನ್ ಹೆಗ್ಡೆ ಕೊಳ್ಳೆಬೈಲು, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಗೋಪಿನಾಥ್ ಭಟ್, ಶುಭದ್ ರಾವ್, ಶಂಕರ್ ಕುಂದರ್, ಹರಿಪ್ರಸಾದ್, ವೈ.ಸುಕುಮಾರ್, ಕಿರಣ್ ಹೆಗ್ಡೆ, ದಿನಕರ ಹೇರೂರು, ಅಣ್ಣಯ್ಯ ಶೇರಿಗಾ‌ರ್, ಕೃಷ್ಣ ಶೆಟ್ಟಿ ವಿಶ್ವಾಸ್ ಅಮೀನ್, ರೋಶನ್ ಶೆಟ್ಟಿ ನವೀನ್, ಚಂದ್ರ ಸುವರ್ಣ, ಪ್ರಶಾಂತ್ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮತಗಳ್ಳತನದ ಕುರಿತ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದರು. ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments