ಧರ್ಮಸ್ಥಳದಲ್ಲಿ ಹೂತು ಹಾಕಲಾದ ಯಾವುದೇ ಕಳೇಬರವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ: ದ.ಕ ಎಸ್ಪಿ ಡಾ. ಕೆ ಅರುಣ್
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿಯ ಪರವಾಗಿ ಬಂದ ವಕೀಲರುಗಳು ಯಾವುದೇ ಕಳೇಬರವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ಕಳೇಬರದ ಫೊಟೋಗಳನ್ನು ಮಾತ್ರ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ:39/2025 ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ದೂರುದಾರರ ವಕೀಲರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯನ್ನು ನೋಡಿ, ಹಲವರು ದೂರಿನಲ್ಲಿ ಉಲ್ಲೇಖಿಸಿರುವ ಕಳೇಬರದ ಕುರಿತು ವಿಚಾರಿಸಿರುವುದಾಗಿ ತಿಳಿಸಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸದ್ರಿ ದೂರಿಗೆ ಸಂಬಂಧಿಸಿದಂತೆ, ಈವರೆಗೆ ಪೊಲೀಸ್ ಠಾಣೆಗೆ ತಲೆಬುರುಡೆ ಹಾಗೂ ಅವಶೇಷದ ಕೆಲಭಾಗಗಳಿರುವ ಎರಡು ಫೋಟೋಗಳ ಕಲರ್ ಜೆರಾಕ್ಸ್ ಪ್ರತಿಯನ್ನು ಮಾತ್ರ ಸಲ್ಲಿಸಿರುತ್ತಾರೆ. ಇದನ್ನು ಹೊರತುಪಡಿಸಿದಂತೆ ಯಾವುದೇ ಕಳೇಬರವನ್ನು ಈವರೆಗೆ ಪೊಲೀಸ್ ಠಾಣೆಗೆ ನೀಡಿರುವುದಿಲ್ಲ. ದೂರುದಾರರ ಪರವಾಗಿ ವಕೀಲರು ದೂರು ಸಲ್ಲಿಸುವ ವೇಳೆ ಕಳೇಬರವನ್ನು ಮುಂದಿನ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.