ಪತ್ರಕರ್ತರು ಸತ್ಯದ ಪರವಾಗಿರಬೇಕು: ಸಭಾಧ್ಯಕ್ಷ ಯು.ಟಿ. ಖಾದರ್ ಸಲಹೆ
ಬೀದರ : ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದ್ದು, ಪತ್ರಕರ್ತರ ಪೆನ್ನು ಸದಾಕಾಲ ಸತ್ಯದ ಪರವಾಗಿರಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಅಭಿಪ್ರಾಯಪಟ್ಟರು.
ಬೀದರ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಝೀರಾ ಕನ್ವೆನ್ಶನ್ ಹಾಲ್‌ನಲ್ಲಿ ಏಪ್ರಿಲ್ 12ರಂದು ನಡೆದ 40ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ಮತ್ತು ದೇಶ ನಿರ್ಮಾಣದಲ್ಲಿ ಪತ್ರಕರ್ತರು ಮಹತ್ವದ ಪಾತ್ರವಹಿಸುತ್ತಾರೆ. ಆದ್ದರಿಂದ ಅವರ ಬರವಣಿಗೆ ಸತ್ಯದ ನೆಲೆಯಲ್ಲಿ ಇರಬೇಕು ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮ ದೇಶದ ಪ್ರಬಲ ಶಕ್ತಿಯಾಗಿದ್ದು, ಪತ್ರಕರ್ತರು ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರಿಗೆ ಪ್ರೇರಣೆಯಾಗುವಂತಹ ಬರವಣಿಗೆಯ ಸಾಮರ್ಥ್ಯ ಪತ್ರಕರ್ತರಲ್ಲಿ ಇರಬೇಕು ಎಂದು ಹೇಳಿದರು.
ರಾಜಕೀಯ ಮತ್ತು ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಂತಿದ್ದು, ಎರಡೂ ಉತ್ತಮವಾಗಿದ್ದಾಗ ಮಾತ್ರ ಸಮಾಜವು ಸಮೃದ್ಧವಾಗಲು ಸಾಧ್ಯ. ಪತ್ರಿಕೆಗಳು ಕೇವಲ ಟೀಕೆ ಅಥವಾ ಹೊಗಳಿಕೆಗೆ ಸೀಮಿತವಾಗದೆ, ಉತ್ತಮ ಕಾರ್ಯ ಮಾಡುವವರಿಗೆ ಪ್ರೇರಣೆ ನೀಡುವ ಕೆಲಸ ಮಾಡಬೇಕು. ಯಾವಾಗಲೂ ಪ್ರಾಮಾಣಿಕ ಸತ್ಯವನ್ನು ಪ್ರತಿಪಾದಿಸುವುದು ಮುಖ್ಯ ಎಂದು ಹೇಳಿದರು.
ಕಣ್ಣು ಮತ್ತು ಕಿವಿ ತೆರೆದು ಸಮಾಜವನ್ನು ಸಮಗ್ರವಾಗಿ ಅರಿತಾಗಲೇ ಒಬ್ಬ ಉತ್ತಮ ಪತ್ರಕರ್ತನಾಗಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಬೀದರ ಜಿಲ್ಲೆ ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದು, ಇಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆದಿರುವುದು ಸಂತಸ ತಂದಿದೆ ಎಂದರು. ತನಿಖಾ ಪತ್ರಿಕೋದ್ಯಮ ಈಗ ಕಡಿಮೆಯಾಗುತ್ತಿರುವುದನ್ನು ಉಲ್ಲೇಖಿಸಿ, ಈ ಬಗ್ಗೆ ಪತ್ರಕರ್ತರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರ ರಕ್ಷಣೆಯ ವಿಷಯದಲ್ಲಿ ಸರ್ಕಾರ ಬದ್ಧವಾಗಿದ್ದು, ಮಾಧ್ಯಮದ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪತ್ರಕರ್ತರು ಕೊಡುಗೆ ನೀಡಬೇಕು ಎಂದು ಅವರು ತಿಳಿಸಿದರು.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರು ಮಾತನಾಡಿ, ಪತ್ರಿಕೋದ್ಯಮ ಹೊಸ ತಿರುವು ಪಡೆದುಕೊಂಡಿದ್ದು, ಮಾಧ್ಯಮವನ್ನು ಕಪಿಮುಷ್ಟಿಯಲ್ಲಿಡಬಾರದು. ಧೈರ್ಯ ಹಾಗೂ ಎದೆಗಾರಿಕೆಯಿಂದ ವೃತ್ತಿ ನಿರ್ವಹಿಸಿದಾಗ ಪತ್ರಿಕಾವೃತ್ತಿಯ ಗೌರವ ಹೆಚ್ಚುತ್ತದೆ ಎಂದರು.
ಮುಖಂಡರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ, ಪತ್ರಿಕಾವೃತ್ತಿ ಇಂದಿನ ದಿನಗಳಲ್ಲಿ ಕಷ್ಟಕರವಾಗಿದ್ದು, ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು. ಪತ್ರಕರ್ತರ ಸಂಘದ ಸ್ಥಾಪಕರಾದ ಡಿ.ವಿ.ಜಿ ಅವರ ಸೇವೆಯನ್ನು ಸ್ಮರಿಸಬೇಕು ಎಂದರು.
ಸಮಾರಂಭದಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಡಾ. ಸಿದ್ದು ಪಾಟೀಲ, ಮಾರುತಿರಾವ್ ಮೂಳೆ, ರಾಜ್ಯ ಮಾಹಿತಿ ಆಯುಕ್ತರಾದ ಬಿ. ವೆಂಕಟಸಿಂಗ್, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಮುಖಂಡರಾದ ರಮೇಶ್ ಪಾಟೀಲ, ಶಕುಂತಲಾ ಬೆಲ್ದಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಸ್ವಾಗತಿಸಿದರು.













