ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನ ಸಂಚಾರ ಸಮಸ್ಯೆಗೆ ತುರ್ತು ಪರಿಹಾರಕ್ಕೆ ರೈಲ್ವೆ ಅಧಿಕಾರಿಗಳಿಗೆ ಸಂಸದ ಕ್ಯಾ. ಚೌಟ ಸೂಚನೆ

Spread the love

ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನ ಸಂಚಾರ ಸಮಸ್ಯೆಗೆ ತುರ್ತು ಪರಿಹಾರಕ್ಕೆ ರೈಲ್ವೆ ಅಧಿಕಾರಿಗಳಿಗೆ ಸಂಸದ ಕ್ಯಾ. ಚೌಟ ಸೂಚನೆ

ಮಂಗಳೂರು: ನಗರದ ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನಲ್ಲಿ ಪದೇಪದೇ ಗೂಡ್ಸ್‌ ರೈಲು ಹಾಗೂ ಖಾಲಿ ಪ್ಯಾಸೆಂಜರ್‌ ರೈಲು ಹಾದು ಹೋಗುವುದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ಹಾಗೂ ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ತುರ್ತಾಗಿ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳೂರು ವ್ಯಾಪ್ತಿಯ ರೈಲ್ವೆ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಸಂಸದರು, ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌ನಲ್ಲಿ ದಿನನಿತ್ಯ ಹತ್ತಾರು ಬಾರಿ ಗೂಡ್ಸ್‌ ಹಾಗೂ ಪ್ಯಾಸೆಂಜರ್‌ ರೈಲುಗಳು ಮಂಗಳೂರು ಸೆಂಟ್ರಲ್‌ನಿಂದ ಬಂದರ್‌ ಗೂಡ್ಸ್‌ ಶೆಡ್‌ಗೆ ಹಾದು ಹೋಗುವ ವೇಳೆ ರೈಲ್ವೆ ಗೇಟ್‌ ಹಾಕುವುದರಿಂದ ಜನರು ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿಯಿದೆ. ಹೀಗಾಗಿ, ಈ ಕೂಡಲೇ ರೈಲ್ವೆಗೇಟ್‌ ಬಳಿ ರೈಲು ಓಡಾಡುವ ಸಮಯದ ಬಗ್ಗೆ ಎಲ್‌ಇಡಿ ಡಿಸ್‌ಪ್ಲೇ ಬೋರ್ಡ್‌ ಹಾಕಬೇಕು. ಅಲ್ಲದೆ, ಕಚೇರಿ ವೇಳೆಯಲ್ಲಿ ಈ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ತಡೆ ಹಿಡಿಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಕ್ಯಾ. ಚೌಟ ಅವರು ಸೂಚಿಸಿದ್ದಾರೆ.

ಪಾಂಡೇಶ್ವರ ಲೆವಲ್‌ ಕ್ರಾಸಿಂಗ್‌ನಲ್ಲಿ ಪದೇಪದೇ ಗೇಟ್‌ ಹಾಕುವುದರಿಂದ ಈ ಭಾಗದಲ್ಲಿ ಓಡಾಡುವ ಸಾರ್ವಜನಿಕರು ಹಲವಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿರುವಾಗ, ಈ ಲೆವೆಲ್‌ ಕ್ರಾಸಿಂಗ್‌ನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯತೆಯಿಂದ ಒಂದು ಸಮಗ್ರ ವರದಿಯನ್ನು ತಯಾರಿಸಬೇಕು. ಆ ವರದಿ ಆಧರಿಸಿ ರೈಲ್ವೆ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ-ಮಾರ್ಗೋಪಾಯಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ಕ್ಯಾ. ಚೌಟ ಅವರು ಸಲಹೆ ನೀಡಿದ್ದಾರೆ.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಮೂಲಕ ದಿನಕ್ಕೆ 10ರಿಂದ 15 ಸಲ ಖಾಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಬಂದರು ಯಾರ್ಡ್ ಗೆ ಹೋಗುವುದರಿಂದ ಪ್ರತಿ ಬಾರಿ 15 ರಿಂದ 20 ನಿಮಿಷ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಉದ್ಯೋಗಿಗಳು, ಆಂಬುಲೆನ್ಸ್ ಮತ್ತಿತರ ತುರ್ತು ಸೇವೆ ವಾಹನಗಳಿಗೆ ಅಡಚಣೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ನನಗೆ ದೂರು ಬಂದಿದ್ದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ರೈಲು ಬರುವ ಸಮಯವನ್ನು ಆಯಾ ಪ್ರದೇಶಗಳಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದರೆ ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊಯಿಗೆ ಬಜಾರ್ ಲೆವೆಲ್ ಕ್ರಾಸಿಂಗ್ ಬಳಿಯೂ ಇದೇ ರೀತಿಯಲ್ಲಿ ಟ್ರಾಫಿಕ್‌ ಸಮಸ್ಯೆಯಾಗುತ್ತಿರುವ ಕಾರಣ ಯಾರ್ಡ್‌ ಅನ್ನೇ ಸ್ಥಳಾಂತರಿಸುವ ಬಗ್ಗೆ ಹಾಗೂ ಬೇರೆಡೆ ಸೂಕ್ತ ಜಾಗ ನಿರ್ಧರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಿರಿಯ ಅಭಿಯಂತರ ನರೇಶ್ ಶೆಣೈ, ಪ್ರಮುಖರಾದ ಧರ್ಮರಾಜ್, ರವಿಶಂಕರ್ ಮಿಜಾರು, ನಿತಿನ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments