ಪುತ್ತೂರು: ಅತ್ಯಾಚಾರ, ವಂಚನೆ ಪ್ರಕರಣ; ತಲೆಮರೆಸಿಕೊಂಡಿದ್ದ ಬಿಜೆಪಿ ಮುಖಂಡನ ಪುತ್ರ ಪೊಲೀಸ್ ವಶಕ್ಕೆ
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಪೊಲೀಸರು ಮೈಸೂರು ಸಮೀಪ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿದಿದ್ದಾರೆ
ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು, ಪ್ರಸ್ತುತ ಪದವಿ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ. ಗರ್ಭವತಿಯಾಗಿದ್ದ ಯುವತಿ ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಧ್ಯೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಕೃಷ್ಣ ಜೆ.ರಾವ್ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಸಂತ್ರಸ್ತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರಂಭದಲ್ಲಿ ಜೂ.11ಕ್ಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆ ಸಂದರ್ಭ ಆರೋಪಿ ಶ್ರೀಕೃಷ್ಣ ಜೆ.ರಾವ್ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರು, ಪುತ್ರನಿಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ವಿವಾಹ ಮಾಡಿಕೊಡುವುದಾಗಿ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು.
ಒಂದು ವೇಳೆ ಮಗ ವಿವಾಹಕ್ಕೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದೆಂದೂ ತಿಳಿಸಿದ್ದರು.ಆದರೆ ಆರೋಪಿ ಕೃಷ್ಣ ಜೆ. ರಾವ್ ಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪದ ಹಿನ್ನೆಲೆಯಲ್ಲಿ ಜು.24ರಂದು ಸಂತ್ರಸ್ತ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನ್ನ ವಿರುದ್ದ ದೂರು ದಾಖಲಾಗುತ್ತಲೇ ಆರೋಪಿ ಕೃಷ್ಣ ಜೆ.ರಾವ್ ನಾಪತ್ತೆಯಾಗಿದ್ದ. ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ಆತನ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಂದೆಡೆ, ಆರೋಪಿಯ ಬಂಧನಕ್ಕೆ ವ್ಯಾಪಕ ಆಗ್ರಹ ವ್ಯಕ್ತವಾಗತೊಡಗಿತು. ವಿವಿಧ ಪ್ರತಿಭಟನೆ, ಮನವಿ ಸಲ್ಲಿಕೆ ನಡೆದಿತ್ತು. ಸಂತ್ರಸ್ತೆಯ ಮನೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಸಂತೈಸಿದ್ದರು. ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚಾಗುತ್ತಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆ ತರುವ ನಿಟ್ಟಿನಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಿ.ಜಿ.ಜಗನ್ನಿವಾಸ್ ರಾವ್ ಅವರ ಆರೋಗ್ಯ ಸ್ಥಿತಿ ಕುರಿತು ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಆಸ್ಪತ್ರೆಗೆ ತೆರಳಿ ವೈದ್ಯರಿಂದ ಪಾಹಿತಿ ಪಡೆದುಕೊಂಡಿದ್ದರು.ಆರೋಪಿಯ ಇರುವಿಕೆಯ ಕುರಿತು ಮಾಹಿತಿ ಇದ್ದರೆ ತಿಳಿಸುವಂತೆ ಆತನ ಮನೆಯವರಿಗೆ ಪೊಲೀಸರು ತಿಳಿಸಿದ್ದರು. ಈ ವೇಳೆ ಆರೋಪಿ ಪರ ವಕೀಲರು ಮತ್ತು ಸಂಘಟನೆಯ ಕೆಲವು ಮುಖಂಡರೂ ಇದ್ದರು.
ಇದೀಗ ಆರೋಪಿ ಕೃಷ್ಣ ಜೆ.ರಾವ್ನನ್ನು ಪುತ್ತೂರಿನಿಂದ ತೆರಳಿದ್ದ ಪೊಲೀಸರ ತಂಡ ಮೈಸೂರು ಸಮೀಪ ಆರೋಪಿ ಇರುವುದನ್ನು ಪತ್ತೆ ಮಾಡಿ ಅಲ್ಲಿಂದ ವಶಕ್ಕೆ ಪಡೆದುಕೊಂಡು ಪುತ್ತೂರಿಗೆ ಕರೆ ತಂದಿದ್ದಾರೆ.
ಆರೋಗ್ಯದಲ್ಲಿ ಏರುಪೇರಾಗಿ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರೋಪಿ ಕೃಷ್ಣ ಜೆ.ರಾವ್ ನ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರು ಜು.4ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೇ ಪೊಲೀಸರ ತಂಡ ಅವರನ್ನೂ ತಮ್ಮ ಜೊತೆಗೆ ಕರೆದೊಯ್ದು ಆರೋಪಿಯನ್ನು ಬಂಧಿಸಿ ಕರೆತಂದಿದೆ
ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚಾಗುತ್ತಲೇ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದರು.ಈ ಮಧ್ಯೆ ಆರೋಪಿಯು ಇತರ ಮೂವರೊಂದಿಗೆ ಕಾರೊಂದರ ಒಳಗೆ ಇದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆರೋಪಿಯು ಪೊಲೀಸರ ವಶದಲ್ಲಿದ್ದಾನೆ.