ಪುತ್ತೂರು ಶಾಸಕರು ಇನ್ನೂ ಸಂಘಪರಿವಾರದ ಮನಸ್ಥಿತಿಯಲ್ಲೇ ಇದ್ದಾರೆ – ಎಸ್ ಡಿಪಿಐ
ಪುತ್ತೂರು: ಪುತ್ತೂರಿನ ಈಶ್ವರಮಂಗಲದಲ್ಲಿ ಅಕ್ಟೋಬರ್ 22 ರಂದು ನಡೆದ ಗೋಸಾಗಾಟಗಾರನ ಮೇಲಿನ ಶೂಟೌಟ್ ಪ್ರಕರಣದಲ್ಲಿ ಹಲವು ಗೊಂದಲಗಳಿದ್ದು, ಈ ಪ್ರಕರಣವನ್ನು ಸರಕಾರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಎಸ್.ಡಿ.ಪಿ.ಐ ಪಕ್ಷ ಒತ್ತಾಯಿಸಿದೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿ.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹಾಸನದ ಸಂತೆಯಿಂದ ಜಾನುವಾರುಗಳನ್ನು ಖರೀದಿಸಿ ಕೇರಳ ಕಡೆಗೆ ಈಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೋಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ವಾಹನವನ್ನು ನಿಲ್ಲಿಸದೆ ಪೋಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ್ದರು ಎಂದು ಪೋಲೀಸರು ತಮ್ಮ ಹೇಳಿಕೆಯನ್ನು ಈಗಾಗಲೇ ನೀಡಿದ್ದಾರೆ. ಆದರೆ ಘಟನಾ ಸ್ಥಳವನ್ನು ಪರಿಶೀಲಿಸಿದ ಎಸ್.ಡಿ.ಪಿ.ಐ ನಿಯೋಗಕ್ಕೆ ಕಂಡ ಮಾಹಿತಿ ಪ್ರಕಾರ ಕಾಲಿಗೆ ಗುಂಡೇಟು ತಾಗಿದಾಗ ಸುರಿದ ರಕ್ತದ ಕಲೆಗಳು ಈಚರ್ ವಾಹನದ ಮುಂಭಾಗದಲ್ಲಿದೆ. ಸಾಮಾನ್ಯವಾಗಿ ಪೋಲೀಸರು ಬೆನ್ನಟ್ಟಿದ ಸಂದರ್ಭದಲ್ಲಿ ವಾಹನ ಬಿಟ್ಟು ಹೋಗುವಾಗ ಎಲ್ಲರೂ ಹಿಮ್ಮುಖವಾಗಿ ಪಲಾಯನ ಮಾಡುತ್ತಾರೆ. ಯಾಕೆಂದರೆ ಮುಂಭಾಗದಲ್ಲಿ ಪೋಲೀಸ್ ವಾಹನ ಇರುವ ಕಾರಣಕ್ಕೆ ಯಾರೂ ಕೂಡಾ ಪೋಲೀಸರು ಇರುವ ಕಡೆಗೆ ಓಡುವ ಸಾಹಸವನ್ನು ಮಾಡೋದಿಲ್ಲ. ಆದರೆ ಈಶ್ವರಮಂಗಲದ ಬೆಳ್ಳಿ ಚಡವಿನಲ್ಲಿ ನಡೆದ ಘಟನೆಯಲ್ಲಿ ವಾಹನದ ಮುಂಭಾಗದಲ್ಲೇ ಪೋಲೀಸರು ಗುಂಡು ಹಾರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿಶ ಹೇಳಿಕೆ ನೀಡಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಪೋಲೀಸರು ಸೋಮೋಟೋ ಪ್ರಕರಣ ದಾಖಲಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಫಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಈ ಬಾರಿ ಕಾಲಿಗೆ ಗುಂಡು ಹಾರಿಸಿದ್ದಾರೆ, ಮುಂದೆ ಬೇರೆ ಕಡೆಗೂ ಗುಂಡು ಹಾಕಲಿದ್ದಾರೆ ಎನ್ನುವ ಮೂಲಕ ಪೋಲೀಸರಿಗೆ ಕೊಲ್ಲಲು ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಈ ಹೇಳಿಕೆಯನ್ನು ನೀಡಿರುವ ಶಾಸಕರು ಸಂಘಪರಿವಾರ ಮತ್ತು ಬಿಜೆಪಿ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ.
ಅಲ್ಪಸಂಖ್ಯಾತರ ಮತದಿಂದ ಗೆದ್ದಿರುವ ಶಾಸಕರು ನಿರಂತರವಾಗಿ ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಅವರನ್ನು ಕಾಂಗ್ರೇಸ್ ಪಕ್ಷದಿಂದ ಹೊರ ಹಾಕಬೇಕೆಂದು ಒತ್ತಾಯಿಸಿದರು,
ಅರುಣ್ ಕುಮಾರ್ ಪುತ್ತಿಲ ಓರ್ವ ಹಾರ್ಡ್ ಕೋರ್ ಕೋಮುವಾದಿಯಾಗಿದ್ದು, 25 ಕ್ಕೂ ಮಿಕ್ಕಿದ ಪ್ರಕರಣವು ಆತನ ಮೇಲಿದೆ. ಆತನನ್ನು ಗಡಿಪಾರು ಮಾಡಲು ಪೋಲೀಸರು ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿ ಪೋಲೀಸರ ಸಮ್ಮುಖದಲ್ಲೇ ಜಾನುವಾರುಗಳನ್ನು ವಾಹನದಿಂದ ಇಳಿಸುತ್ತಾರೆಂದರೆ ಪೋಲೀಸರಿಗೆ ಪುತ್ತಿಲರಂತಹ ಕೋಮುವಾದಿಯ ಸಹಾಯ ಯಾಕಾಗಿ ಅಗತ್ಯವಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ ಜಿಲ್ಲೆಯಲ್ಲಿ ಝ ಹಿಂದೆ ನಡೆದ ಹಲವಾರು ಗೋಸಾಗಾಟ ಪತ್ತೆ ಪ್ರಕರಣಗಳಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಪೋಲೀಸರು ಶಾಮೀಲಾಗಿರುವಂತಹ ಹಲವು ಪ್ರಕರಣಗಳಿದ್ದು, ಈ ಪ್ರಕರಣಗಳ ಸಾಲಿಗೆ ಇದೂ ಸೇರ್ಪಡೆಯಾಗಿದೆಯೋ ಅನ್ನುವ ಸಂಶಯ ಮೂಡುತ್ತಿದೆ ಎಂದ ಅವರು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ದಕ್ಷರಿದ್ದರೂ, ಅವರಿಗೆ ತಪ್ಪು ಮಾಹಿತಿಯನ್ನು ನೀಡಿಲಾಗಿದೆ ಎಂದು ಆರೋಪಿಸಿದ ಅವರು ಇದಕ್ಕೆ ಪೂರಕವಾಗಿ ಪೋಲೀಸ್ ಇನ್ಸ್ ಸ್ಪೆಕ್ಟರ್ ಗೆ ಎಸ್.ಪಿ ಚಾರ್ಜ್ ಮೆಮೋ ನೀಡಿದ್ದಾರೆ. ಈ ಕಾರಣಕ್ಕೆ ಪ್ರಕರಣವನ್ನು ಉನ್ನತ ಪೋಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಇಲ್ಲದೇ ಹೋದಲ್ಲಿ ಸರಕಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಅವರು ಒತ್ತಾಯಿಸಿದರು.












