ಬಿಜಾಪುರ ಬಳಿಕ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ – ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ರಾಜ್ಯ ಸಚಿವ ಸಂಪುಟದ ಮುಂದಿನ ಸಭೆ ಬಿಜಾಪುರದಲ್ಲಿ ನಡೆಯಲಿದ್ದು, ಬಳಿಕ ಮಂಗಳೂರಿನಲ್ಲಿ ಸಭೆ ನಡೆಯಲಿದೆ. ಈ ಸಂದರ್ಭ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಿಲ್ಲೆಯ ಅಗತ್ಯ ಬೇಡಿಕೆಗಳ ಕುರಿತಂತೆ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ ಎಂದರು.
ಗುಲ್ಬರ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಸಭೆ ನಡೆದಿದೆ. ಮುಂದೆ ಬಿಜಾಪುರದಲ್ಲಿ ನಡೆಯ ಲಿದೆ. ಬಳಿಕ ಮಂಗಳೂರಿನಲ್ಲಿ ಸಭೆ ನಡೆಯಲಿದ್ದು, ಜಿಲ್ಲೆಯ ಹಲವು ಅಗತ್ಯ ಬೇಡಿಕೆಗಳು ಈಡೇರುವ ನಿರೀಕ್ಷೆ ಇದೆ ಎಂದವರು ಹೇಳಿದರು.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಗಣಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಉಸ್ತುವಾರಿ ಸಚಿವರು ಸೇರಿದಂತೆ ಸಭೆ ನಡೆದಿದೆ. ಸ್ಥಳೀಯ ಜನಪ್ರತಿನಿಧಿಗಳಿಂದ ಅಭಿಪ್ರಾಯ ನೀಡಲಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕಾಗಿದೆ. ಕೈಗಾರಿಕಾ ವಲಯ ಅಭಿವೃದ್ಧಿ ಸೇರಿದಂತೆ ಅಗತ್ಯ ಕ್ರಮ ಆಗಬೇಕಾಗಿದೆ ಎಂದರು
ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೋಟೆಪುರದಿಂದ ಬೋಳಾರವರೆಗೆ 1.5 ಕಿ.ಮೀ. ಉದ್ದದ 200 ಕೋಟಿ ರೂ. ವೆಚ್ಚದ ದ್ವಿಪಥ ಸೇತುವೆಗೆ ಸಂಬಂಧಿಸಿ ನಬಾರ್ಡ್ನಿಂದ ಅನುಮತಿ ದೊರೆಯಬೇಕಿದೆ ಎಂದವರು ಈ ಸಂದರ್ಭ ತಿಳಿಸಿದರು.
ಸೇತುವೆ ಜೊತೆ 33 ಕೋಟಿ ರೂ. ವೆಚ್ಚದಲ್ಲಿ 3 ಪ್ರವಾಸಿಗರ ವೀಕ್ಷಣಾ ಡೆಕ್ಗಳನ್ನು ನಿರ್ಮಿಸಲಾಗುವುದು, ಜೊತೆಯಲ್ಲೇ ಅಲ್ಲಿರುವ ದ್ವೀಪಕ್ಕೂ ಸಂಪರ್ಕ ಕಲ್ಪಿಸುವ ಯೋಜನೆಯಿದೆ. ಮುಂದೆ ರವಿವಾರಗಳಂದು ರಾತ್ರಿ ಕೆಲಗಂಟೆ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಿ, ಜನರು ಕುಟುಂಬದೊಂದಿಗೆ ಬಂದು ವೀಕ್ಷಣೆ ಮಾಡುವ ರೀತಿ ಇದನ್ನು ಅಭಿವೃದ್ಧಿ ಪಡಿಸಲಾಗುವುದು. ಸದ್ಯ ಸೇತುವೆಯ ತಾಂತ್ರಿಕ ವರದಿಯನ್ನು ಅನುಮೋದನೆ ಗಾಗಿ ನಬಾರ್ಡ್ಗೆ ಕಳುಹಿಸಿದೆ. ಅನುಮೋದನೆ ಸಿಕ್ಕಿದ ಬಳಿಕ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್ (ಸಿಪಿಎ)ಯ ಭಾರತೀಯ ಪ್ರಾದೇಶಿಕ ಸಮ್ಮೇಳನ ಈ ಬಾರಿ ಬೆಂಗಳೂರಿನಲ್ಲಿ ಸೆ. 11ರಿಂದ 14ರವರೆಗೆ ನಡೆಯಲಿದೆ. ಕಾಮನ್ವೆಲ್ತ್ನ 9 ದೇಶಗಳ ಸ್ಪೀಕರ್ಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಸಮ್ಮೇಳನದ ಬಳಿಕ ಸೆ. 14ರಂದು ಚಾಮುಂಡಿ ಹಿಲ್ಸ್, ಮೈಸೂರು ಅರಮನೆ ಮತ್ತು ಬೃಂದಾವನ ಗಾರ್ಡನ್ಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ
ಮೇಲುಸ್ತುವಾರಿಯಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಎಐ ಆಧಾರಿತ ಭದ್ರತಾ ವ್ಯವಸ್ಥೆಯನ್ನು ಒದಗಿಸಲು ಸಿದ್ಧತೆ ನಡೆಸಲಾಗಿದೆ. ಯೋಜನೆ ಸಿದ್ಧತೆ ನಡೆದಿದ್ದು, ಇನ್ಪೋಸಿಸ್ನಂತಹ ತಾಂತ್ರಿಕ ಸಂಸ್ಥೆಗಳ ನೆರವಿನೊಂದಿಗೆ ಎಐ ಆಧಾರಿತ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತದೆ. ಸ್ಥಳೀಯ ಕೈಗಾರಿಕೆ ಗಳು, ಆಸ್ಪತ್ರೆಗಳವರು ಈ ನಿಟ್ಟಿನಲ್ಲಿ ಸಹಕಾರ ನೀಡಿದರೆ ಯೋಜನೆ ಅತ್ಯಂತ ಕ್ಷಿಪ್ರಗತಿಯಲ್ಲಿ ಕಾರ್ಯಗತ ವಾಗಲಿದೆ ಎಂದು ಯು.ಟಿ.ಖಾದರ್ ಹೇಳಿದರು.
ಹಬ್ಬ ಆಚರಣೆಗಳ ಸಂದರ್ಭ ರೂಪಿಸಲಾಗುವ ಕೆಲವೊಂದು ನಿಯಮಗಳ ಜಾರಿ ಸಂದರ್ಭ ಅಧಿಕಾರಿಗಳು ಪ್ರಬುದ್ಧತೆಯಿಂದ ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ಜನರಿಗೆ ನೋವು ಆಗದಂತೆ ಕ್ರಮ ವಹಿಸಬೇಕು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
‘ಜಿಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲಿನ ಕೊರತೆಯ ಬಗ್ಗೆ ಸತತ ಮೂರು ಸಭೆಗಳನ್ನು ನಡೆಸಲಾಗಿದೆ. ಹಿಂದೆ ಕೆಂಪು ಕಲ್ಲು ಹಲವೆಡೆ ಪರವಾನಿಗೆ ಇಲ್ಲದೆ ತೆಗೆಯಲಾಗುತ್ತಿತ್ತು. ಅದಕ್ಕೆ ತಡೆ ನೀಡಲಾಗಿದೆ. ವ್ಯವಸ್ಥಿತವಾಗಿ ಕೆಂಪುಕಲ್ಲು ಜನಸಾಮಾನ್ಯರಿಗೆ ದೊರೆಯಬೇಕಾದರೆ ಅರ್ಜಿ ಕೊಟ್ಟು ತಿಂಗಳೊಳಗೆ ಪರವಾನಿಗೆ ದೊರೆಯು ವಂತಾಗಬೇಕು. ಇತರ ಕ್ವಾರಿಯ ರೀತಿಯಲ್ಲಿ ಕೆಂಪು ಕಲ್ಲಿಗೆ ರಾಜಧನ ವಿಧಿಸಬಾರದು. ಇಲ್ಲಿ ಮನೆ ಕಟ್ಟಲು ಕೆಂಪು ಕಲ್ಲೇ ಬೇಕಾಗುತ್ತದೆ. ಹಾಗಾಗಿ ರಾಜಧನ ಕಡಿಮೆ ಮಾಡಬೇಕೆಂಬ ಬಗ್ಗೆಯೂ ಚರ್ಚೆ ಆಗಿದೆ. ಕೆಂಪು ಕಲ್ಲು ತೆಗೆಯಲು ಅರ್ಜಿ ಬಂದಾಗ ಒಂದು ವಾರದೊಳಗೆ ಅಗತ್ಯ ಇಲಾಖೆಗಳಿಂದ ಜಂಟಿ ತಪಾಸಣೆ ನಡೆಸಿ ಕ್ರಮ ವಹಿಸಲು ಸೂಚಿಸ ಲಾಗಿದೆ. ಸೆ. 4ರಂದು ನಡೆಯಲಿರುವ ಸಭೆಯಲ್ಲಿ ನಿಯಮ ಸೇರಿದಂತೆ ಅಗತ್ಯ ಕ್ರಮಗಳಿಗೆ ಅನುಮೋದನೆ ದೊರೆಯಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.