ಬೆಂಗಳೂರಿನಲ್ಲಿ ಹಾಡಹಗಲೇ ಎಟಿಎಂ ವಾಹನ ಹೈಜಾಕ್, 7.11 ಕೋಟಿ ರೂ. ದರೋಡೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆಯಾಗಿರುವ ಘಟನೆ ನಡೆದಿದೆ. ಇಂದು (ನವೆಂಬರ್ 19) ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್, ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು ಬರೋಬ್ಬರಿ 7.11 ಕೋಟಿ ರೂ ದೋಚಿಕೊಂಡು ಪರಾರಿಯಾಗಿದೆ. ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹೊರಟಿದ್ದ ಹಣ ಇದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್ನ ಬಳಿ ತಡೆದು ಹಣ ದೋಚಿಕೊಂಡು ಎಸ್ಕೇಪ್ ಆಗಿದೆ.
ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ಹಾಕಲೆಂದು GJ 01 HT 9173 ಸಂಖ್ಯೆ ವಾಹನ ಹಣ ತುಂಬಿಕೊಂಡು ತೆರಳುತ್ತಿತ್ತು. ಈ ವೇಳೆ ಜಯದೇವ ಡೇರಿ ಸರ್ಕಲ್ನಲ್ಲಿ ಇನ್ನೋವಾದಲ್ಲಿ ಬಂದ ಆರೇಳು ಜನರ ಗ್ಯಾಂಗ್, ಎಟಿಎಂ ವಾಹನ ತಡೆದು ನಾವು ಆರ್ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದಾರೆ. ಗನ್ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಅಲ್ಲೇ ಇಳಿಸಿ ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್ಗೆ ಕರೆದೊಯ್ದಿದ್ದಾರೆ.
ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ್ ಪಿಲ್ಲರ್ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ದರೋಡಕೋರರು,ನಾವು ಆರ್ ಬಿ ಐ ನವರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ನೀವು ನಿಯಮ ಉಲ್ಲಂಘಿಸಿದ್ದೀರಿ. ಪೊಲೀಸ್ ಠಾಣೆಗೆ ಬನ್ನಿ ಎಂದು ಹಣ ಇದ್ದ ಸಿಎಂಎಸ್ ವಾಹನ ಹೈಜಾಕ್ ಮಾಡಿ ತಂದಿದ್ದಾರೆ. ನಂತರ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್ ಫ್ಲೈಓವರ್ನಲ್ಲಿ ವಾಹನ ನಿಲ್ಲಿಸಿ ಹಣವನ್ನು ತಮ್ಮ ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.
ಎಟಿಎಂ ವಾಹನದಲ್ಲಿ ಒಟ್ಟು ನಾಲ್ಕು ಜನ ಸಿಎಂಎಸ್ ಸಿಬ್ಬಂದಿ ಇದ್ದರು. ಓರ್ವ ಡ್ರೈವರ್,ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದು, ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ. ಇನ್ನು ಫಿಂಗರ್ ಪ್ರಿಂಟ್ ತಂಡ ಹಾಗೂ ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕೆ ಆಗಮಿಸುತ್ತಿದೆ, ತನಿಖೆ ಚುರುಕುಗೊಂಡಿದೆ.
ದರೋಡೆಕೋರರು ತಂದಿದ್ದ ಇನ್ನೋವಾ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಿಡಿಸಿರುವುದು ಬೆಳಕಿಗೆ ಬಂದಿದೆ. ಹೌದು..KA 03 NC 8052 ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಆದ್ರೆ, KA 03 NC 8052 ಸಂಖ್ಯೆಯ ಮೂಲ ಕಾರು ಮಾರುತಿ ಸುಜುಕಿ ಎಂದು ತಿಳಿದುಬಂದಿದೆ. ಇದರಿಂದ ಈ ಗ್ಯಾಂಗ್ ಪಕ್ಕಾ ಪ್ಲ್ಯಾನ್ ಮಾಡಿಯೇ ಈ ಕೃತ್ಯ ಎಸಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಹಣ ದರೋಡೆ ಮಾಡಿ ಗ್ಯಾಂಗ್, ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಡೇರಿ ಸರ್ಕಲ್, ಕೋರಮಂಗಲ, ಸೋನಿ ವರ್ಡ್ ಜಂಕ್ಷನ್, ದೊಮ್ಮಲೂರು, ಮಾರತ್ತಹಳ್ಳಿ, ವೈಟ್ ಫಿಲ್ಡ್ ಮಾರ್ಗವಾಗಿ ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ದರೋಡೆಕೋರರ ಗ್ಯಾಂಗ್ ಬೆನ್ನುಬಿದ್ದಿದ್ದಾರೆ.
ಇಷ್ಟೊಂದು ದೊಡ್ಡ ಮಟ್ಟದ ದರೋಡೆಯಾಗಿರುವ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲರ್ಟ್ ಆಗಿದ್ದು, ನಗರದಲ್ಲಿ ಹೈಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ಅಲ್ಲದೇ ಆರೋಪಿಗಳು ಬೆಂಗಳೂರು ಬಿಟ್ಟು ಹೋಗದಂತೆ ನಗರದ ಗಡಿಪ್ರದೇಶದಲ್ಲಿ ಬ್ಯಾರಿಕೆಡ್ ಹಾಕಿ ವಾಹನ ಪರಿಶೀಲನೆ ಮಾಡುವಂತೆ ಸಂದೇಶ ರವಾನಿಸಿದ್ದಾರೆ.













