‘ಮಂಗಳೂರು ದಸರಾ’ ಭವ್ಯ ಶೋಭಾಯಾತ್ರೆ ಸಮಾರೋಪ
ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದ ಹಾಗೂ ಭಕ್ತಿ ಭಾವದ ಸಮ್ಮಿಲನದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ದ ಭವ್ಯ ಶೋಭಾಯಾತ್ರೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಆರಂಭಗೊಂಡು, ಶುಕ್ರವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು.
ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ಭವ್ಯ ಶೋಭಾಯಾತ್ರೆಯನ್ನು ಸಹಸ್ರಾರು ಜನರು ಕಣ್ಣುಂಬಿಕೊಂಡರು.
ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ಮೆರವಣಿಗೆ ನಡೆಯಿತು. ಆಗಾಗ ಸುರಿದ ಕೊಂಚ ಮಳೆಯ ಮಧ್ಯೆಯೂ ಭವ್ಯ ಶೋಭಾಯಾತ್ರೆಯನ್ನು ಸಹಸ್ರಾರು ಮಂದಿ ಕಣ್ಣುಂಬಿಕೊಂಡರು.
ಶ್ರೀ ಕ್ಷೇತ್ರ ಕುದ್ರೋಳಿಯಿಂದ ಗುರುವಾರ ಸಂಜೆ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್, ನಾರಾಯಣ ಗುರು ವೃತ್ತ, ಲಾಲ್ಬಾಗ್, ಬಲ್ಲಾಳ್ಬಾಗ್, ಪಿ.ವಿ.ಎಸ್. ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ಸ್ಟ್ರೀಟ್, ಅಳಕೆ ಮೂಲಕ ಮತ್ತೆ ಶ್ರೀ ಕ್ಷೇತ್ರ ತಲುಪಿತು. ನಗರದ ಸುಮಾರು 9 ಕಿ.ಮೀ. ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗಿಬಂತು.
ಅಲಂಕೃತ ಕೊಡೆಗಳು, ಜಾನಪದ ಕಲಾ ತಂಡಗಳು, ಭಜನ ತಂಡ, ವಾದ್ಯ-ಬ್ಯಾಂಡ್ ತಂಡಗಳು ಹಾಗೂ ವಿವಿಧ ಕಲಾ ಪ್ರಕಾರಗಳು ಶೋಭಾಯಾತ್ರೆಗೆ ಹೊಸ ರಂಗು ನೀಡಿದವು. ವಿವಿಧ ಸಂಘ ಸಂಸ್ಥೆಗಳು ಪ್ರವರ್ತಿಸಿದ ಹಲವು ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಚೆಲುವು ಹೆಚ್ಚಿಸಿದವು. ವಿಶೇಷವಾಗಿ ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿದವು. ನೃತ್ಯರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೊ ಮತ್ತು ನಾನಾ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ಆಪರೇಷನ್ ಸಿಂದೂರ ಬಿಂಬಿಸುವ ಸ್ತಬ್ದಚಿತ್ರ, ರಾಮಾಯಣ, ದೇವಸ್ಥಾನ ಸಹಿತ ವಿವಿಧ ಸ್ತಬ್ದಚಿತ್ರಗಳು ಗಮನ ಸೆಳೆಯಿತು.
ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನ ಜಾತ್ರೆಯೇ ನೆರೆದಿತ್ತು. ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.