ಮಂಗಳೂರು ಪೊಲೀಸರಿಂದ ಕುಖ್ಯಾತ ಅಂತರ್‌ರಾಜ್ಯ ವಾಹನ ಹಾಗೂ ಸರಗಳ್ಳತನ ಆರೋಪಿಯ ಬಂಧನ
ಮಂಗಳೂರು: ಮಂಗಳೂರು ನಗರ ಪೊಲೀಸರು ಅಂತರ್‌ರಾಜ್ಯ ಮಟ್ಟದಲ್ಲಿ ವಾಹನ ಕಳವು ಮತ್ತು ಸರಗಳ್ಳತನಕ್ಕೆ ಸಂಬಂಧಿಸಿದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಎರಡು ಚಿನ್ನದ ಸರಗಳು ಸೇರಿ ಸುಮಾರು ₹5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ತಿರುವನಂತಪುರಂ ನಿವಾಸಿ ಆದಿತ್ ಗೋಪಾನ್ @ಮುತ್ತು ಕೃಷ್ಣ (32) ಎಂದು ಗುರುತಿಸಲಾಗಿದೆ
ನವೆಂಬರ್ 21, 2025ರಂದು ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷದ ವಯೋವೃದ್ಧ ಮಹಿಳೆಯ ಚಿನ್ನದ ಸರ ಕಸಿದುಕೊಂಡ ಪ್ರಕರಣವು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡು, ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.
ಡಿಸೆಂಬರ್ 4, 2025ರಂದು ಕದ್ರಿ ಜೋಗಿ ಮಠದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, KA19 HC 6946 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸಂಶಯಾಸ್ಪದವಾಗಿ ಬರುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ, ಅದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ವಾಹನವೆಂದು ಪತ್ತೆಯಾಯಿತು. ವಿಚಾರಣೆಯಲ್ಲಿ ಆರೋಪಿಯೇ ವಯೋವೃದ್ಧರು ಮತ್ತು ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ಮಾಡುತ್ತಿದ್ದನೆಂಬುದು ಹೊರಬಂದಿದೆ.
ಆತನನ್ನು ಡಿಸೆಂಬರ್ 5ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗೆ 3 ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ತನಿಖೆಯಲ್ಲಿ ಆರೋಪಿ ಕೆಳಕಂಡ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸ್ ಅಧಿಕಾರಿಗಳಿಗೆ ತಿಳಿದುಬಂದಿದೆ:
21-11-2025: ಕದ್ರಿ ಬಟ್ಟಗುಡ್ಡೆ — 1.5 ಪವನ್ ಚಿನ್ನದ ಸರ ಸುಲಿಗೆ
27-09-2025: ಮುಲ್ಕಿ — ಒಂಟಿ ಮಹಿಳೆಗೆ ಚೂರಿ ತೋರಿಸಿ 2 ಪವನ್ ಚಿನ್ನದ ಸರ ಸುಲಿಗೆ
ಬೈಂದೂರು ಠಾಣಾ ವ್ಯಾಪ್ತಿ — ದ್ವಿಚಕ್ರ ವಾಹನ ಕಳವು
ಕುಂದಾಪುರ — ದ್ವಿಚಕ್ರ ವಾಹನ ಕಳವು
ಸುರತ್ಕಲ್ — ಚೊಕ್ಕಬೆಟ್ಟು ಬಳಿ ದ್ವಿಚಕ್ರ ವಾಹನ ಕಳವು
ಸುರತ್ಕಲ್ — ಅಗರಮೇಲು ಬಳಿ ದ್ವಿಚಕ್ರ ವಾಹನ ಕಳವು
ಇವುಗಳ ಆಧಾರದ ಮೇಲೆ ಆರೋಪಿಯಿಂದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡು–ಕರ್ನಾಟಕ–ಕೇರಳ ನಡುವೆ ಸಂಚರಿಸುತ್ತಿದ್ದ ಅಂತರ್‌ರಾಜ್ಯ ಕುಖ್ಯಾತ ಕಳ್ಳ
ಆರೋಪಿ ತಮಿಳುನಾಡಿನಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದ 4 ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸ ಕಳೆದಿದ್ದಾನೆ.
ಜೈಲಿನಿಂದ ಬಿಡುಗಡೆಯಾದ ನಂತರ ರೈಲು ಪ್ರಯಾಣವನ್ನು ಬಳಸಿಕೊಂಡು ದೇಶದಾದ್ಯಂತ ಸಂಚರಿಸುತ್ತಿದ್ದ, ರೈಲ್ವೇ ನಿಲ್ದಾಣಗಳ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸರಗಳ್ಳತನ ನಡೆಸುತ್ತಿದ್ದ. ಬಳಿಕ ಮತ್ತೆ ರೈಲಿನಲ್ಲಿ ಬೇರೆ ಕಡೆಗೆ ತೆರಳಿ ತಲೆಮರೆಸಿಕೊಳ್ಳುತ್ತಿದ್ದನು.
ವಿಶೇಷ ತಂಡದ ನಿಖರ ಕಾರ್ಯಾಚರಣೆಯಿಂದ ಪ್ರಕರಣ ತ್ವರಿತವಾಗಿ ಪತ್ತೆಯಾಗಿದ್ದು, ಆರೋಪಿಯ ಅಪರಾಧ ಸರಪಳಿ ಬಹಿರಂಗಗೊಂಡಿದೆ.
ಈ ಕಾರ್ಯಾಚರಣೆಯನ್ನು ಮಂಗಳೂರು ಪೂರ್ವ ಠಾಣಾ ನಿರೀಕ್ಷಕ ಅನಂತ ಪದ್ಮಾನಾಭ, ಕದ್ರಿ ಠಾಣಾ ಸಿಬ್ಬಂದಿಗಳೊಂದಿಗೆ ಯಶಸ್ವಿಯಾಗಿ ನಡೆಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2025ರ ಒಳಗಾಗಿ 72 ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 57 ವಾಹನಗಳನ್ನು ಪತ್ತೆ ಮಾಡಲಾಗಿದೆ. ಕೇವಲ 15 ವಾಹನಗಳ ಪತ್ತೆ ಬಾಕಿಯಿದೆ. ಪತ್ತೆ ಪ್ರಮಾಣ 79% ಆಗಿದ್ದು, ಇದು ಗಮನಾರ್ಹ ಸಾಧನೆಯಾಗಿದೆ.
ಮಂಗಳೂರು ನಗರ ಪೊಲೀಸ್ ಇಲಾಖೆಯ ಈ ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಗರದಲ್ಲಿ ಕಾನೂನುಸುವ್ಯವಸ್ಥೆಯನ್ನು ಬಲಪಡಿಸಿದೆ.













