ಮತ್ತೊಮ್ಮೆ ಕುಂದಾಪುರ, ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜ್ಯ ನಾಯಕರಿಗೆ ದೂರು?
ಕುಂದಾಪುರ: ಮತ್ತೊಮ್ಮೆ ರಾಜ್ಯ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರು ನಾಯಕರ ನಡುವಿನ ಭಿನ್ನಮತ ಭುಗಿಲೇಳುವ ಸಾಧ್ಯತೆಗಳು ಕಂಡು ಬರುತ್ತಿದೆ ಎನ್ನಲಾಗಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪನವರ ನೇತೃತ್ವದ ಪರಿವರ್ತನಾ ಯಾತ್ರೆ ಕುಂದಾಪುರಕ್ಕೆ ಬಂದಾಗ ಕುಂದಾಪುರದ ಪಕ್ಷೇತರ ಶಾಸಕ ಹಿಂದೆ ಬಿಜೆಪಿಯಲ್ಲಿ ಮುನಿಸಕೊಂಡು ಹೊರ ಬಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಮೂಲ ಬಿಜೆಪಿಗರ ನಡುವೆ ಸಂಘರ್ಷ ನಡೆದು ಹೊಕೈ ಹಂತಕ್ಕೆ ತಲುಪಿ ಯಡ್ಯೂರಪ್ಪ, ಸದಾನಂದಗೌಡ ಮತ್ತಿತರು ಮುಜುಗರಕ್ಕೀಡಾಗಿದ್ದರು. ಇದೇ ವೇಳೆ ಯಡ್ಯೂರಪ್ಪ ಕೂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಪರ ಬ್ಯಾಟಿಂಗ್ ಅವರೇ ಮುಂದಿನ ಚುನಾವಣಾ ಅಭ್ಯರ್ಥಿ ಎಂದು ಘೋಷಿಸಿದ್ದು, ಇದರಿಂದ ಹಾಲಾಡಿ ವಿರೋಧಿ ಬಣದ ಕಣ್ಣು ಕೆಂಪಾಗಿಸಿತ್ತು.
ಕಾರ್ಯಕ್ರಮದ ಬಳಿಕ ಬಿಜೆಪಿ ನಾಯಕರೇ ಯಡ್ಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಕುಂದಾಪುರ ಕ್ಷೇತ್ರಾಧ್ಯಕ್ಷರೇ ಬಿಜೆಪಿ ನಾಯಕರಾದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ ಹಾಗೂ ರಾಜು ಅವರ ಮೇಲೆ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ನಾಯಕರ ನಡುವಿನ ಭಿನ್ನಮತಕ್ಕೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು.
ಈಗ ಹೊಸ ಬೆಳವಣಿಗೆ ಎಂಬಂತೆ ಕುಂದಾಪುರ ಕ್ಷೇತ್ರದ ಹಿಂದಿನ ಸಲದ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಅವರು ಕ್ಷೇತ್ರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸರ್ವಾಧಿಕಾರಿಯ ಧೋರಣೆ ತೋರುತ್ತಿದ್ದು, ಕ್ಷೇತ್ರ ಬಿಜೆಪಿಯನ್ನು ಅವರು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಅವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕೆಲವೊಂದು ಟಿವಿ ಮಾಧ್ಯಮಗಳು ಈ ಕುರಿತು ಸುದ್ದಿ ಬಿತ್ತರಿಸಿವೆ. ಈ ಕುರಿತು ಕಿಶೋರ್ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಸಿದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಇದರೊಂದಿಗೆ ಕುಂದಾಪುರದ ಪಕ್ಕದ ಕ್ಷೇತ್ರವಾಗಿ ಬೈಂದೂರು ಕ್ಷೇತ್ರ ಕೂಡ ಇದರಿಂದ ಹೊರತಾಗಿಲ್ಲ. ಬೈಂದೂರು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವ ಸುಕುಮಾರ್ ಶೆಟ್ಟಿ ಹಾಗೂ ಇತ್ತೀಚೆಗೆ ಕಾಂಗ್ರೆಸಿನಿಂದ ಬಿಜೆಪಿಗೆ ಬಂದಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನಡುವೆ ಕೂಡ ನಡೆಯುತ್ತಿರುವ ಮುಸುಕಿನ ಗುದ್ದಾಟ ಜಗಜ್ಜಾಹೀರಾಗಿದೆ. ಮುಂದಿನ ವಿಧಾನಸಭಾ ಚುನವಾಣಾ ಅಭ್ಯರ್ಥಿಯಾಗುವತ್ತ ಕಣ್ಣಿಟ್ಟಿರುವ ಸುಕುಮಾರ್ ಶೆಟ್ಟಿ ಮತ್ತು ಜಯಪ್ರಕಾಶ್ ಹೆಗ್ಡೆ ನಡುವೆ ಕೂಡ ಪೈಪೋಟಿ ನಡೆಯುತ್ತಿದೆ. ಇಷ್ಟು ಸಮಯ ಬೈಂದೂರು ಬಿಜೆಪಿಯನ್ನು ಕಟ್ಟಿ ಬೆಳೆಸುತ್ತಿರುವ ಸುಕುಮಾರ್ ಶೆಟ್ಟಿಗೆ ಪೈಪೋಟಿ ನೀಡಲು ಎಂಬಂತೆ ಜಯಪ್ರಕಾಶ್ ಹೆಗ್ಡೆ ಕೂಡ ಬೈಂದೂರು ಕ್ಷೇತ್ರದಲ್ಲಿ ವ್ಯಾಪಕವಾಗಿ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದು ಇದು ಸುಕುಮಾರ್ ಶೆಟ್ಟಿಯವರಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ಸುಕುಮಾರ್ ಶೆಟ್ಟಿ ಕೂಡ ತನ್ನ ಆಪ್ತರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಯೂರಪ್ಪ ಅವರಿಗೆ ದೂರು ನೀಡಿ ಜಯಪ್ರಕಾಶ್ ಹೆಗ್ಡೆಯವರಿಗೆ ತನ್ನ ಕ್ಷೇತ್ರಕ್ಕೆ ಬರಲು ಅವಕಾಶ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಎರಡೂ ಕ್ಷೇತ್ರದ ನಾಯಕರ ನಡುವೆ ನಡೆಯುತ್ತಿರುವ ಭಿನ್ನಮತದ ಬಗ್ಗೆ ಸಾರ್ವಜನಿಕವಾಗಿ ನಾಯಕರೇ ಸೂಕ್ತವಾಗಿ ಸ್ಪಷ್ಟನೆ ನೀಡಬೇಕಾಗಿದ್ದು ಅದರ ಬಳಿಕವಷ್ಠೆ ಸರಿಯಾದ ಮಾಹಿತಿ ಸಾಧ್ಯ. ಒಟ್ಟಾರೆಯಾಗಿ ಬಿಜೆಪಿಯ ಭದ್ರಕೋಟೆಯಂತಿರುವ ಕುಂದಾಪುರ ಮತ್ತು ಬೈಂದೂರು ಕ್ಷೇತ್ರಗಳು ನಾಯಕರ ನಡುವಿನ ಗುದ್ದಾಟ, ಭಿನ್ನಮತ ರಾಜ್ಯದ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನು ರಾಜ್ಯ ನಾಯಕರು ಯಾವ ರೀತಿಯಲ್ಲಿ ಪರಿಹಾರ ಮಾಡುವರೋ ಕಾದು ನೋಡಬೇಕಾಗಿದೆ.













