ಮಾದರಿಯಾಗಬೇಕಾದ ಶಾಸಕರು ಪಡಿತರ ಚೀಟಿ ರದ್ದು ಕುರಿತು ಸುಳ್ಳು ಹೇಳುವುದನ್ನು ಬಿಟ್ಟು ಸತ್ಯವನ್ನು ಜನತೆಗೆ ತಿಳಿಸಲಿ : ರಮೇಶ್ ಕಾಂಚನ್ 

Spread the love

ಮಾದರಿಯಾಗಬೇಕಾದ ಶಾಸಕರು ಪಡಿತರ ಚೀಟಿ ರದ್ದು ಕುರಿತು ಸುಳ್ಳು ಹೇಳುವುದನ್ನು ಬಿಟ್ಟು ಸತ್ಯವನ್ನು ಜನತೆಗೆ ತಿಳಿಸಲಿ : ರಮೇಶ್ ಕಾಂಚನ್ 

ಉಡುಪಿ: ಕರ್ನಾಟಕದಲ್ಲಿ 7.76 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳಿವೆ ಎಂದು ಗುರುತಿಸಿರುವ ಕೇಂದ್ರ ಬಿಜೆಪಿ ಸರಕಾರ ಅಂತಹ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆಯನ್ನು ನೀಡಿದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ ತನ್ನನ್ನು ಗೆಲ್ಲಿಸಿ ಕಳುಹಿಸಿದ ಜನರಿಗೆ ಸತ್ಯವನ್ನು ತಿಳಿಸುವ ಬದಲು ಸುಳ್ಳು ಮಾಹಿತಿ ನೀಡಿ ಅನರ್ಹ ಪಡಿತರ ಚೀಟಿಗಳನ್ನು ರಾಜ್ಯ ಸರಕಾರ ರದ್ದು ಮಾಡಲು ಹೊರಟಿದೆ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕೇಂದ್ರದ ಬಿಜೆಪಿ ಸರಕಾರದ ಸೂಚನೆಯಂತೆ ಪಡಿತರ ಚೀಟಿಗಳಲ್ಲಿ 5.80 ಲಕ್ಷ ಅನರ್ಹ ಬಿ.ಪಿ.ಎಲ್ ಫಲಾನುಭಾವಿಗಳ ಚೀಟಿಯನ್ನು ಈ ತಿಂಗಳ 30ರೊಳಗೆ ರದ್ದುಪಡಿಸಲು ಸೂಚಿಸಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಈ ನಿರ್ಧಾರವು ಬಡವರ ವಿರೋಧಿ ಧೋರಣೆಯಾಗಿದೆ. ಸರ್ಕಾರದ ಮಾನದಂಡಗಳ ಪ್ರಕಾರ 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಲು ಅನರ್ಹರು. ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿ.ಬಿ.ಡಿ.ಟಿ) ವರದಿ ಪ್ರಕಾರ ಕರ್ನಾಟಕದಲ್ಲಿ ಅಂತಹ 5.80 ಲಕ್ಷ ಫಲಾನುಭವಿಗಳಿದ್ದಾರೆ. ಆದರೆ ರಾಜ್ಯ ಸರ್ಕಾರದ ‘ಕುಟುಂಬ ತಂತ್ರಾಂಶ’ ಗುರುತಿಸಿರುವ ಪ್ರಕಾರ ಅಂತಹ ಫಲಾನುಭವಿಗಳ ಸಂಖ್ಯೆ 10.09 ಲಕ್ಷ ಎಂದು ಆಹಾರ ಇಲಾಖೆ ತಿಳಿಸಿದೆ.

ಕುಟುಂಬದಲ್ಲೊಬ್ಬರು ಆದಾಯ ತೆರಿಗೆ ಪಾವತಿದಾರರು, ಕಂಪನಿಗಳಲ್ಲಿ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಜಿ.ಎಸ್.ಟಿ ಸಂಖ್ಯೆ ಹೊಂದಿರುವ ಒಟ್ಟು 25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಬಿ.ಪಿ.ಎಲ್ ಚೀಟಿ ಹೊಂದಲು ಅನರ್ಹರು. ಅಂತಹ ಸಂಶಯಾಸ್ಪದ ಫಲಾನುಭವಿಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರವು ಅಂಥವರು ಹೊಂದಿರುವ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಈ ತಿಂಗಳ 30ರ ಒಳಗೆ ರದ್ದು ಪಡಿಸುವಂತೆ ಎಲ್ಲಾ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿದೆ.

ಕೇಂದ್ರ ಸರಕಾರದ ತೆರಿಗೆ ಮಂಡಳಿ ವರದಿ ಪ್ರಕಾರ ಕರ್ನಾಟಕದಲ್ಲಿ 5.80 ಲಕ್ಷ ಜನರು ಬಿ.ಪಿ.ಎಲ್ ಕಾರ್ಡ್ ಪಡೆಯಲು ಅರ್ಹರಲ್ಲ. ಆದರೆ ಕಾರ್ಡ್ ರದ್ದು ಮಾಡುವ ಈ ಕ್ರಮ ಸರಿಯಾದ ಮಾರ್ಗವಲ್ಲ. ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಇದಕ್ಕಾಗಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಕರ್ನಾಟಕ ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿ ಸಂಸದರು ಕೇವಲ ದೆಹಲಿಗೆ ಹೋಗಿ ಕುರ್ಚಿ ಬಿಸಿ ಮಾಡಿ ಬರುವುದನ್ನು ಬಿಟ್ಟು ಕೇಂದ್ರ ಬಿಜೆಪಿ ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ವಿರೋಧಿಸುವ ಕೆಲಸ ಮಾಡಬೇಕಾಗಿದೆ.

ಕೇಂದ್ರ ಸರಕಾರ ಪ್ರತಿ ಬಾರಿ ರಾಜ್ಯದ ಜನತೆಗೆ ಮೋಸ ಮಾಡಿಕೊಂಡು ಬಂದಿದ್ದು ರಾಜ್ಯ ಸರಕಾರವು ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿದೆ ಎಂದು ಸುಳ್ಳು ಹೇಳಿ ಜನರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಿರುವುದು ಸಾಕ್ಷಿಯಾಗಿದೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಗ್ಯಾರಂಟಿ ಯೋಜನೆಗೊಸ್ಕರ ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿರುವುದು ಎಂದು ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಿ ಸಾಧ್ಯವಾದರೆ ಉಡುಪಿ ಜಿಲ್ಲೆಯ ಶಾಸಕರು ಹಾಗೂ ಸಂಸದರು ಸೇರಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅನರ್ಹ ಬಿ.ಪಿ.ಎಲ್ ಕಾರ್ಡ್ ರದ್ದತಿಯ ಈ ಜನವಿರೋಧಿ ನಡೆಯನ್ನು ಕೈ ಬಿಡುವಂತೆ ಆಗ್ರಹಿಸಲಿ. ಕೇಂದ್ರ ಸರಕಾರದ ಈ ನಡೆಯು ಅವರಿಗೆ ತಿರುಗುಬಾಣವಾಗಲಿದೆ. ಮಾನ್ಯ ಶಾಸಕರಿಗೆ ವಾಸ್ತವವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರ ಬಗ್ಗೆ ಕಾಳಜಿಯಿದ್ದರೆ ಕೇಂದ್ರ ಸರ್ಕಾರದ ಈ ನಡೆಯನ್ನು ಕೈಬಿಡುವಂತೆ ಮನವಿ ಮಾಡಲಿ. ಕೇಂದ್ರದ ಬಡವರ ವಿರೋಧಿ ನೀತಿಯ ವಿರುದ್ದ ಕಾಂಗ್ರೆಸ್ ಪ್ರತಿಭಟಿಸಲಿದೆ. ಬಿಜೆಪಿಗರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಬಿಜೆಪಿ ಸರ್ಕಾರವು ಸೃಷ್ಟಿಸಿದ ಗೊಂದಲದ ವಾತಾವರಣವನ್ನು ಮನವಿ ಮಾಡಿ ಸರಿಪಡಿಸಿ ತಮ್ಮ ದಮ್ಮು ತಾಕತ್ತನ್ನು ತೋರಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments