ಮೂಡುಬಿದಿರೆಯ ಕಾಲೇಜು ಕ್ಯಾಂಟಿನ್‌ನ ಕೆಲಸಗಾರನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Spread the love

ಮೂಡುಬಿದಿರೆಯ ಕಾಲೇಜು ಕ್ಯಾಂಟಿನ್‌ನ ಕೆಲಸಗಾರನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಕ್ಯಾಂಟಿನ್‌ನಲ್ಲಿ ಕೆಲಸಗಾರ ಚೇತನ್‌ನನ್ನು ಐದು ವರ್ಷಗಳ ಹಿಂದೆ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿದಾನಂದ ಪರಶುನಾಯ್ಕರ್ ಎಂಬವನಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.

ಮೃತ ಚೇತನ್ ಮತ್ತು ಆರೋಪಿ ಚಿದಾನಂದ ಒಟ್ಟಿಗೆ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸದ ವಿಚಾರದಲ್ಲಿ ಇವರ ನಡುವೆ ತಕರಾರು ಉಂಟಾಗಿದ್ದು, 2020 ಅ.30ರಂದು ರಾತ್ರಿ ವಿದ್ಯಾಗಿರಿಯಲ್ಲಿರುವ ಕಾಲೇಜು ಸಿಬ್ಬಂದಿಯ ವಿಶ್ರಾಂತಿ ಕೊಠಡಿಗೆ ಅಕ್ರಮ ಪ್ರವೇಶ ಮಾಡಿದ ಚಿದಾನಂದನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಚೇತನ್ ಮೇಲೆ ಹಲ್ಲೆ ನಡೆಸಿದ್ದನು. ಆಗ ಅಲ್ಲೆ ಇದ್ದ ರಾಜೇಶ ಮತ್ತು ಶಂಕರ್ ಎಂಬವರು ಚೇತನ್‌ನ ರಕ್ಷಣೆಗೆ ಧಾವಿಸಿದ್ದರು. ಬಳಿಕ ಆರೋಪಿ ಚಿದಾನಂದನು ಚೇತನ್‌ಗೆ ಜೀವ ಬೆದರಿಕೆ ಹಾಕಿ ಆತನ ಕೈಯಲ್ಲಿದ್ದ ಮೊಬೈಲ್ ಪೋನ್‌ನನ್ನು ತೆಗದುಕೊಂಡು ಪರಾರಿಯಾಗಿದ್ದನು.

ಗಾಯಗೊಂಡ ಚೇತನನ್ನು ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಮೃತಪಟ್ಟಿದ್ದರು.

ಈ ಸಂಬಂಧ ರಾಜೇಶ್ ಪೂಜಾರಿ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ ಕುಮಾರ ಮತ್ತು ತನಿಖಾ ಸಹಾಯಕರಾದ ಕಾಂತಪ್ಪ ಸುಮಾರು 40 ಸಾಕ್ಷಿದಾರರನ್ನು ವಿಚಾರಿಸಿ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಜಗದೀಶ ಅವರು ಇದೀಗ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ಜ್ಯೋತಿ ನಾಯಕ್ ವಾದಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments