ಮೂಲ್ಕಿ, ಕಡಬ ತಾ.ಗೆ ಅಗ್ನಿಶಾಮಕ ಠಾಣೆ ಮಂಜೂರು – ಗೃಹ ಸಚಿವ ಡಾ.ಜಿ.ಪರಮೇಶ್ವರ

Spread the love

ಮೂಲ್ಕಿ, ಕಡಬ ತಾ.ಗೆ ಅಗ್ನಿಶಾಮಕ ಠಾಣೆ ಮಂಜೂರು – ಗೃಹ ಸಚಿವ ಡಾ.ಜಿ.ಪರಮೇಶ್ವರ

ಮಂಗಳೂರು: ಮುಲ್ಕಿ ಮತ್ತು ಕಡಬ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಮಂಜೂರುಗೊಳಿಸಿದ್ದು, ಶೀಘ್ರದಲ್ಲಿ ಇದಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಅವರು ಬುಧವಾರ ಪಜೀರಿನಲ್ಲಿ ಉಳ್ಳಾಲ ತಾಲೂಕು ಅಗ್ನಿಶಾಮಕ ಠಾಣೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗ್ನಿಶಾಮಕ ಇಲಾಖೆಗೆ ತುರ್ತು ಸಂದರ್ಭ ನಿರ್ವಹಣೆಗೆ ರೂ. 50 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳ ಖರೀದಿಗೆ ಮಂಜೂರಾತಿ ನೀಡಲಾಗಿದೆ. 15 ವರ್ಷ ದಾಟಿದ ವಾಹನಗಳನ್ನು ಬಳಸುವಂತಿಲ್ಲ ಎಂಬ ನಿಯಮದಿಂದ ಅಗ್ನಿಶಾಮಕ ಇಲಾಖೆಯ ಹಲವು ವಾಹನಗಳು ನಿರುಪಯುಕ್ತವಾಗಿತ್ತು. ಇದರಿಂದ ಹೊಸ ವಾಹನಗಳ ಖರೀದಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಇಲಾಖೆಗೆ ಹೊಸ ಅಗ್ನಿಶಾಮಕ ವಾಹನಗಳ ಖರೀದಿಗೆ ರೂ. 50 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಲಾಖೆಗೆ ಅತೀ ಉದ್ದದ 90 ಮೀ. ಎತ್ತರದ ಏಣಿಯನ್ನು ಖರೀದಿಸಲಾಗಿದೆ. ಇದರಿಂದ ಎತ್ತರದ ಕಟ್ಟಡಗಳಲ್ಲಿ ಉಂಟಾಗುವ ದುರಂತಗಳ ಸ್ಥಳಗಳಿಗೆ ತುರ್ತಾಗಿ ತಲುಪಬಹುದಾಗಿದೆ. ಇದಲ್ಲದೆ ಆಧುನೀಕರಣ ಅಭಿವೃದ್ಧಿಯಿಂದ ಎದುರಾಗುವ ದುರಂತಗಳ ನಿರ್ವಹಣೆಗೆ ಸುಲಭವಾಗಬಹುದು ಎಂದು ಹೇಳಿದರು.

ಮಂಗಳೂರು ವಿಭಾಗದಲ್ಲಿ ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು, ರಾಸಾಯನಿಕ ಕೈಗಾರಿಕೆಗಳು ಮತ್ತು ಬಂದರು ಇರುವುದರಿಂದ ಇದಕ್ಕೆ ಸಂಬಂಧಿತ ದುರಂತಗಳ ನಿರ್ವಹಣೆಗಾಗಿ ಅಗ್ನಿಶಾಮಕ ಇಲಾಖೆಯನ್ನು ಸಶಕ್ತಗೊಳಿಸಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಹಲವೆಡೆ ಸಂಭವಿಸಿದ್ದು ಇದನ್ನು ನಿರ್ವಹಿಸಲು ಅಗ್ನಿಶಾಮಕ ಇಲಾಖೆಯನ್ನು ಪರಿಣಾಮಕಾರಿಯಾಗಿ ಸಜ್ಜುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಳ್ಳಾಲ ನೂತನ ಅಗ್ನಿಶಾಮಕ ಠಾಣೆಯಿಂದ ಈ ಭಾಗದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಇದನ್ನು ಮಾದರಿ ಅಗ್ನಿಶಾಮಕ ಠಾಣೆಯನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಉಳ್ಳಾಲ ಮತ್ತು ಕೋಣಾಜೆ ಪೆÇಲೀಸ್ ಠಾಣೆ ಕಟ್ಟಡವನ್ನು ನೂತನವಾಗಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಮುಡಾ ಅಧ್ಯಕ್ಷ ಸದಾಶಿವ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅಗ್ನಿಶಾಮಕ ಉಪ ನಿರ್ದೇಶಕ ಈಶ್ವರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ ತಿರುಮಲೇಶ್ ಸ್ವಾಗತಿಸಿದರು.


Spread the love
Subscribe
Notify of

0 Comments
Inline Feedbacks
View all comments