ರಾಜ್ಯಕ್ಕೆ ಮೊದಲು! ಜಿಲ್ಲೆಯ ಒಟ್ಟು 207 ಜಂಕ್ಷನ್ಗಳಲ್ಲಿ 601 ಸಿಸಿ ಕ್ಯಾಮರಾ ಅಳವಡಿಕೆ – ಎಸ್ಪಿ ಹರಿರಾಮ್ ಶಂಕರ್
ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯು “ಉಡುಪಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್” ಇವರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಒಟ್ಟು 207 ಜಂಕ್ಷನ್‌ಗಳಲ್ಲಿ 601 ಕ್ಯಾಮರಾಗಳನ್ನು ಅಳವಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಅವರು ಸೋಮವಾರ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಪರಾಧ ಚಟುವಟಿಕೆಗಳನ್ನು ತಡೆಯಲು ಜಿಲ್ಲೆಯ ಆಯ್ದ ನಗರ, ಪೇಟೆ ಪ್ರದೇಶಗಳಲ್ಲಿ ರಾತ್ರಿ ಗಸ್ತಿನ ವ್ಯವಸ್ಥೆಯನ್ನು ಹಮ್ಮಿಕೊಂಡು, ಆ ಮೂಲಕ ಮುಕ್ತವಾಗಿ ಕಳ್ಳತನ, ಮಹಿಳಾ ದೌರ್ಜನ್ಯ, ಮಾದಕ ವ್ಯಸನಿಗಳ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ, ವಾಣಿಜ್ಯ ಸಂಸ್ಥೆಗಳು, ಒಂಟಿ ಮನೆ ನಿವಾಸಿಗಳು ಹಾಗೂ ಹಿರಿಯ ನಾಗರೀಕರ ಸುರಕ್ಷತೆಯ ದೃಷ್ಟಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಅಡಿಯಲ್ಲಿ ನೇಮಕಗೊಂಡ ಸೆಕ್ಯೂರಿಟಿ ಗಾರ್ಡ್ ರಾತ್ರಿ 10 ಘಂಟೆಯಿಂದ ಬೆಳಿಗ್ಗೆ 06:00 ಘಂಟೆಯವರೆಗೆ ತನಗೆ ನಿಯೋಜಿಸಿದ ಸ್ಥಳದಲ್ಲಿ ಗಸ್ತು ತಿರುಗಾಡಿಕೊಂಡಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಘಟನೆ ಕಂಡು ಬಂದಲ್ಲಿ ತಕ್ಷಣ ಬೀಟ್ ಪೊಲೀಸರಿಗೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡತಕ್ಕದ್ದು. ನೇಮಕಗೊಂಡ ಸೆಕ್ಯೂರಿಟಿ ಗಾರ್ಡ್‌ಗೆ ಸಂಭಾವನೆಯನ್ನು ಸದ್ರಿ ಗಾರ್ಡ್ ಯಾವ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಆ ಸರಹದ್ದಿನ ನಾಗರೀಕರು ಭರಿಸುತ್ತಾರೆ.
ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ನಗರ, ಶಿರ್ವಾ ಮತ್ತು ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ 02 ಕಡೆ ಹಾಗೂ ಕುಂದಾಪುರ, ಹೆಬ್ರಿ, ಕಾರ್ಕಳ ನಗರ, ಹಿರಿಯಡ್ಕ, ಶಂಕರನಾರಾಯಣ ಮತ್ತು ಬ್ರಹ್ಮಾವರ ಠಾಣಾ ಸರಹದ್ದಿನ ತಲಾ 01 ಕಡೆಗಳಲ್ಲಿ ಒಟ್ಟು 12 ಕಡೆಗಳಲ್ಲಿ “ದೃಷ್ಟಿ ಯೋಜನೆ”ಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಭಾಗಗಳಲ್ಲಿ ಇನ್ನೂ 21 ಕಡೆಗಳಲ್ಲಿ ಆರಂಭಿಸಲಾಗುವುದು.
ಈ ಸಿಸಿಟಿವಿ ಅಳವಡಿಕೆಯ ಯೋಜನೆಯ ವೆಚ್ಚ ಸುಮಾರು 2.5 ಕೋಟಿ ಆಗಬಹುದೆಂದು ಅಂದಾಜಿಸಲಾಗಿದೆ. ಇದರ ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳು, ಮತೀಯ ಕಲಹದ ಸ್ಥಳಗಳು ಹಾಗೂ ಆಯಕಟ್ಟಿನ ಸ್ಥಳಗಳಾದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಳ, ಹೊಸ್ಮಾರು, ಸಚ್ಚರಿಪೇಟೆ, ಕಾರ್ಕಳ ನಗರ ಪೊಲೀಸ ಠಾಣಾ ವ್ಯಾಪ್ತಿಯ ಸಾಣೂರು, ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೆಶ್ವರ, ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ, ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ದಳಿ, ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲ್ ಗಂಗೊಳ್ಳಿ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಪೆ ಬೀಚ್ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣಗಳಲ್ಲಿ ಒಟ್ಟು 10 ಎ.ಎನ್.ಪಿ.ಆರ್. (Automatic Number Plate Reader) ಕ್ಯಾಮರಾಗಳನ್ನು ಅಳವಡಿಸಲಾಗುವುದು.
ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕ ಜಂಕ್ಷನ್, ಕರಾವಳಿ ಜಂಕ್ಷನ್, ಇಂದ್ರಾಳಿ ಬ್ರಿಡ್ಜ್, ಸಂತೆಕಟ್ಟೆ ಜಂಕ್ಷನ್, ಸರ್ವಿಸ್ ಬಸ್ ನಿಲ್ದಾಣ ಮತ್ತು ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಎಮ್‌ಕೋಡಿ ಜಂಕ್ಷನ್ ಮತ್ತು ಕಂಡ್ಲೂರು ಪೇಟೆ ಹಾಗೂ ಕಾರ್ಕಳ ಉಪವಿಭಾಗ ವ್ಯಾಪ್ತಿಯ ಬಾರಾಡಿ ಮತ್ತು ನಾರಾವಿ ಸ್ಥಳಗಳಲ್ಲಿ ಒಟ್ಟು 10 ಉತ್ತಮ ಗುಣಮಟ್ಟದ ಕೆಮರಾಗಳನ್ನು ಅಳವಡಿಸಲಾಗುವುದು. ಈ ರೀತಿಯಲ್ಲಿ ಅನುಷ್ಟಾನಗೊಂಡ ಕೆಮರಾಗಳ ವೀಕ್ಷಣೆಯನ್ನು ಸ್ಥಳೀಯ ಸಂಬಂಧಪಟ್ಟ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ನಿರಂತರವಾಗಿ ವೀಕ್ಷಣೆ ನಡೆಸಲಾಗುವುದು ಎಂದರು.
ಗೃಹ ಸಚಿವರ ನಿರ್ದೇಶನದ ಮೇರೆಗೆ ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಬೀಟ್ ಪೊಲೀಸ್ ಸಿಬ್ಬಂದಿ ಹಾಗೂ ಠಾಣಾಧಿಕಾರಿಯವರು ತಮ್ಮ ವ್ಯಾಪ್ತಿಯಲ್ಲಿ ಬರುವ ಸಂಕೀರ್ಣದಲ್ಲಿರುವ ಮನೆಗಳು ಹಾಗೂ ಪ್ರತ್ಯೇಕವಾಗಿ ಇರುವ ಮನೆಗಳಿಗೆ ಭೇಟಿ ನೀಡಿ, ಅವರೊಂದಿಗೆ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಈಗಾಲಗೇ 22000 ಮನೆಗಳನ್ನು ಭೇಟಿ ಮಾಡಿದ್ದು ಅವರಿಗೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಕಂಡು ಬಂದಲ್ಲಿ ಕೂಡಲೇ ಮೇಲಾಧಿಕಾರಿಯವರ ಗಮನಕ್ಕೆ ತಂದು ಅವರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹಿಸುತ್ತಾರೆ. ಒಂದು ವೇಳೆ ಸಮಸ್ಯೆಯು ಇತರ ಇಲಾಖೆಗೆ ಸಂಬಂಧಪಟ್ಟಿದ್ದಲ್ಲಿ, ಕೂಡಲೇ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ, ಅವರ ಸಮಸ್ಯೆಗಳಿಗೆ ಶೀಘೃ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ “ನಶೆಯಿಂದ ಉಷೆಯೆಡೆಗೆ, ನಶೆಮುಕ್ತ ಭಾರತದತ್ತ ನಮ್ಮ ಚಿತ್ತ”ಎಂಬ ಧ್ಯೇಯ ವಾಕ್ಯದೊಂದಿಗೆ ದಿನಾಂಕ 24/07/2025ರಂದು ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ ರಚಿಸಲಾದ “ANTI DRUG AND AWARENESS COMMITTEE (ADAC)” ಕಮಿಟಿಯು ಉಡುಪಿ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಶುಭಾರಂಭಗೊಂಡಿರುತ್ತದೆ.
ಕಾಲೇಜಿನ ಮುಖ್ಯಸ್ಥರು ಹಾಗೂ ಪೊಲೀಸ್ ಇಲಾಖೆಯು ಸಂಪರ್ಕದಲ್ಲಿದಾಗ ವಿದ್ಯಾರ್ಥಿಗಳು ಮಾದಕ ವಸ್ತುವಿನ ಬಲೆಗೆ ಬೀಳಲು ಹಿಂಜರಿಯಬಹುದು. ಆದ್ದರಿಂದ ಪ್ರತಿಯೊಂದು ಕಾಲೆಜುಗಳಲ್ಲಿ “ANTI DRUG AND AWARENESS COMMITTEE (ADAC)”ಯನ್ನು ಪ್ರಾರಂಭಿಸಲಾಗಿರತ್ತದೆ. ಈ ಕಮಿಟಿಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಇಬ್ಬರು ಸ್ಟಾಫ್ ಹಾಗೂ ಪ್ರತಿ ತರಗತಿಯಿಂದ ಒರ್ವ ವಿದ್ಯಾರ್ಥಿಗಳಿರಬೇಕು ಅದರಲ್ಲಿ ಕನಿಷ್ಟ ಇಬ್ಬರು ವಿದ್ಯಾರ್ಥಿನಿಯರನ್ನು ಹೊಂದಿರಬೇಕು. ಸದ್ರಿ ಕಮಿಟಿಗೆ ಸರಹದ್ದಿನ ಠಾಣಾಧಿಕಾರಿ ಅಂದರೆ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪನಿರೀಕ್ಷಕರು,(ಕಾನೂನು ಮತ್ತು ಸುವ್ಯವಸ್ಥೆ) ರವರು ನೋಡಲ್ ಅಧಿಕಾರಿಯಾಗಿರುತ್ತಾರೆ. ಪ್ರತೀ ತಿಂಗಳು ಕಮಿಟಿ ಮೀಟಿಂಗ್ ಹಾಗೂ ಒಂದಾದರೂ ಜಾಗೃತಿ ಕಾರ್ಯಕ್ರಮ, ವಾಕಥಾನ್ ಮುಂತಾದ ಸರಳ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಗಿರುತ್ತದೆ. ಸದ್ರಿ ಮಿಟಿಂಗ್‌ಗೆ ಸರಹದ್ದಿನ ಠಾಣೆಯಿಂದ ಯಾರನ್ನಾದರೂ ಕರೆಯಿಸತಕ್ಕದ್ದು ಹಾಗೂ ಪ್ರತೀ 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿಯವರನ್ನು ಮೀಟಿಂಗ್‌ಗೆ ಕರೆಯಿಸುವಂತೆ ತಿಳಿಸಲಾಗಿರುತ್ತದೆ.
ಪ್ರತೀ ಕಾಲೇಜಿನಲ್ಲಿ ತ್ರೈಮಾಸಿಕವಾಗಿ 10% ವಿದ್ಯಾರ್ಥಿಗಳನ್ನು Randomly ಆಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಬಗ್ಗೆ ಪಾಸಿಟಿವ್ ಬಂದಲ್ಲಿ ಮಾಹಿತಿಯನ್ನು ನೋಡಲ್ ಅಧಿಕಾರಿಯವರಿಗೆ ನೀಡಲಾಗಿರುತ್ತದೆ. ಯಾವುದೇ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಅಂಶ ಕಂಡುಬಂದಲ್ಲಿ ಅವರವರ ಮಾಹಿತಿಯನ್ನು ಗೌಪ್ತವಾಗಿರಿಸಿ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಮನಪರಿವರ್ತನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಮುನ್ನ ಲಗ್ತೀಕರಿಸಿರುವ ಒಪ್ಪಿಗೆ ಪತ್ರವನ್ನು (Consent Form) ಪಡೆದುಕೊಳ್ಳುವಂತೆ ಸೂಚಿಸಲಾಗಿರುತ್ತದೆ. DHO ರವರು ವೈಧ್ಯಕೀಯ ತಪಾಸಣೆ ನಡೆಸಲು ತಮ್ಮ ನುರಿತ ಸಿಬ್ಬಂದಿ ತಂಡದೊಂದಿಗೆ ನಿಗದಿ ಪಡಿಸುವ ಸ್ಥಳಗಳಲ್ಲಿ ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಿದ್ದಾರೆ. ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆಯಾಯ ಕಾಲೇಜಿನ ಆಡಳಿತ ಮಂಡಳಿಯವರೆ ನಿರ್ವಹಿಸುವಂತೆ ತಿಳಿಸಲಾಗಿರುತ್ತದೆ. ಅಗತ್ಯವಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯವರ ಸಹಕಾರ ಪಡೆದುಕೊಳ್ಳುವಂತೆಯೂ ಕೂಡ ಸೂಚಿಸಲಾಗಿರುತ್ತದೆ.
ವಿದ್ಯಾರ್ಥಿಗಳ ರಕ್ತದಲ್ಲಿ ಡಗ್ಸ್ ಸೇವನೆ ಬಗ್ಗೆ ಪಾಸಿಟಿವ್ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಕೌಸಿಲಿಂಗ್ ಗೆ ಒಳಪಡಿಸುವುದು, ವಿದ್ಯಾರ್ಥಿಗಳಿಗೆ ಡ್ರಗ್ಸ್ ನೀಡುತ್ತಿರುವ ಪೆಡ್ಲರ್ ಬಗ್ಗೆ ಮಾಹಿತಿ ಪಡೆದುಕೊಂಡು ನೋಡಲ್ ಅಧಿಕಾರಿಗೆ ಮಾಹಿತಿ ನೀಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು, ಇತರ ವಿದ್ಯಾರ್ಥಿಗಳು ಡ್ರಗ್ಸ್ ಸೇವನೆಯಿಂದ ಮುಕ್ತಗೊಳಿಸಲು ಸಹಕಾರಿಯಾಗುತ್ತದೆ ಎನ್ನುವುದಾಗಿ ತಿಳಿಸಲಾಗಿರುತ್ತದೆ.
ಜಿಲ್ಲಾ ಮಟ್ಟದ ಪೊಲೀಸ್ ನೋಡಲ್ ಅಧಿಕಾರಿಯಾಗಿ ಡಿವೈಎಸ್‌ಪಿ ಸೆನ್ ಪೊಲೀಸ್ ಠಾಣೆ (8277989100) ರವರಿದ್ದು, ಯಾವುದೇ ಇತರೆ ಉಪಯುಕ್ತ ಮಾಹಿತಿ ಬಗ್ಗೆ ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿರುತ್ತದೆ.
ಜಿಲ್ಲೆಯ ಎಲ್ಲಾ 120 ಪಿ.ಯು. ಕಾಲೇಜು ಹಾಗೂ 46 ವೃತ್ತಿಪರ ಕಾಲೇಜು ಸೇರಿದಂತೆ ಒಟ್ಟು 166 ಕಾಲೇಜುಗಳಲ್ಲಿ Anti – Drug and Awareness Committee (ADAC) ಯನ್ನು ರಚನೆ ಮಾಡಲಾಗಿದೆ. ಈ ಕಮಿಟಿಯು ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ ದಂಡಾಧಿಕಾರಿಯವರು, ಉಡುಪಿ ಜಿಲ್ಲೆ, ಉಡುಪಿರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದರು.