ರಾಜ್ಯಪಾಲರನ್ನು ಅವಮಾನಿಸಿದ್ದು ಕೈ ಪಕ್ಷದ ಸೈದ್ಧಾಂತಿಕ ದಿವಾಳಿತನ, ಹತಾಶೆಯ ಪರಾಕಾಷ್ಠೆ : ಸಂಸದ ಕ್ಯಾ. ಚೌಟ

Spread the love

ರಾಜ್ಯಪಾಲರನ್ನು ಅವಮಾನಿಸಿದ್ದು ಕೈ ಪಕ್ಷದ ಸೈದ್ಧಾಂತಿಕ ದಿವಾಳಿತನ, ಹತಾಶೆಯ ಪರಾಕಾಷ್ಠೆ : ಸಂಸದ ಕ್ಯಾ. ಚೌಟ

ಮಂಗಳೂರು: ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿಯೇ ಘನವೆತ್ತ ರಾಜ್ಯಪಾಲರನ್ನು ಅವಮಾನಿಸಿದ ಇಂದಿನ ಘಟನೆಯು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದಿವಾಳಿತನ ಮತ್ತು ಹತಾಶೆಯನ್ನು ಬಿಂಬಿಸುತ್ತಿದೆ. ಸಂವಿಧಾನದಡಿಯಲ್ಲೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಇಂದು ಅದೇ ಸಂವಿಧಾನದ ಕಗ್ಗೊಲೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಜಂಟಿ ಅಧಿವೇಶನ ವೇಳೆ ರಾಜ್ಯಪಾಲರನ್ನು ತಡೆದು ಅಗೌರವದಿಂದ ನಡೆದುಕೊಂಡು ಕಾಂಗ್ರೆಸ್‌ನವರ ಮಾನಸಿಕತೆಯನ್ನು ಟೀಕಿಸಿರುವ ಕ್ಯಾ. ಚೌಟ ಅವರು, ನಿರಂತರವಾಗಿ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಾ ಬಂದಿರುವ ಕಾಂಗ್ರೆಸ್ ಸರ್ಕಾರ, ಈಗ ತನ್ನ ಸುಳ್ಳಿನ ಪ್ರಚಾರಕ್ಕೆ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನೂ ಬಳಸಿಕೊಳ್ಳಲು ಮುಂದಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ತನ್ನ ಆಡಳಿತಾತ್ಮಕ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ರಾಜ್ಯಪಾಲರ ಮೂಲಕವೇ ಸುಳ್ಳುಗಳನ್ನು ಹೇಳಿಸಲು ಸರ್ಕಾರ ಹಠಕ್ಕೆ ಬಿದ್ದಿತ್ತು. ಆದರೆ, ಸತ್ಯಕ್ಕೆ ದೂರವಾದ ಸರ್ಕಾರದ ‘ಸುಳ್ಳಿನ ಕಂತೆ’ಗಳನ್ನು ಓದಲು ರಾಜ್ಯಪಾಲರು ನಿರಾಕರಿಸಿದಾಗ, ಅವರನ್ನು ಸದನದ ಒಳಗೇ ಅವಮಾನಿಸಿರುವುದು ಸಂವಿಧಾನದ ಆಶಯಗಳಿಗೆ ಮಾಡಿದ ದೊಡ್ಡ ಅಪಚಾರ. ಕೇವಲ ಅಧಿಕಾರಕ್ಕಾಗಿ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್, ಇಂದು ಪವಿತ್ರವಾದ ವಿಧಾನಮಂಡಲವನ್ನೇ ತನ್ನ ‘ಸುಳ್ಳಿನ ಕಾರ್ಖಾನೆ’ಯನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.

ಸದನ ಎನ್ನುವುದು ಕಾನೂನು ರೂಪಿಸುವ ಪವಿತ್ರ ಸ್ಥಳವೇ ಹೊರತು ಬೆದರಿಕೆ ಹಾಕುವ ಅಖಾಡವಲ್ಲ. ಐವನ್ ಡಿಸೋಜಾ ಅವರು ಈ ಹಿಂದೆ ರಾಜ್ಯಪಾಲರಿಗೆ ‘ಬಾಂಗ್ಲಾದೇಶದ ಹಿಂದಿನ ಪ್ರಧಾನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎನ್ನುವ ಬೆದರಿಕೆ ಹಾಕಿದ್ದರು. ಇಂದು ಅದೇ ಬೆದರಿಕೆ ಸಂಸ್ಕೃತಿ ಮುಂದುವರಿದಿದ್ದು, ಬಿ.ಕೆ. ಹರಿಪ್ರಸಾದ್ ಕೂಡ ರಾಜ್ಯಪಾಲರನ್ನು ಅಡ್ಡಗಟ್ಟಲು ಪ್ರಯತ್ನಿಸಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ಸತ್ಯ-ನ್ಯಾಯ, ಶಿಷ್ಟಾಚಾರದ ತಳಹದಿಯ ಮೇಲೆ ನಡೆಯಬೇಕಾದ ಸದನದಲ್ಲಿ, ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರ ಮೂಲಕವೇ ಸುಳ್ಳು ನುಡಿಸಲು ಹೊರಟ ಸರ್ಕಾರದ ನಡೆ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ. ಕಾಂಗ್ರೆಸ್ ಪಕ್ಷದ ಈ ದರ್ಪ ಮತ್ತು ಹೈಕಮಾಂಡ್ ಸಂಸ್ಕೃತಿಯ ಅಟ್ಟಹಾಸವನ್ನು ಕರ್ನಾಟಕದ ಜನತೆ ಕ್ಷಮಿಸುವುದಿಲ್ಲ. ರಾಜ್ಯಪಾಲರ ಹುದ್ದೆಗೆ ನೀಡಬೇಕಾದ ಕನಿಷ್ಠ ಗೌರವವನ್ನೂ ನೀಡದ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕ್ಯಾ. ಚೌಟ ಅವರು ಕಿಡಿಕಾರಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments