ರಾಮಮಂದಿರದ ಹುಂಡಿ ಕಳವು ಪ್ರಕರಣ: ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ್ನು ಕೂಡಲೇ ವಜಾಗೊಳಿಸಿ : ಸೊರಕೆ

Spread the love

ರಾಮಮಂದಿರದ ಹುಂಡಿ ಕಳವು ಪ್ರಕರಣ: ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ್ನು ಕೂಡಲೇ ವಜಾಗೊಳಿಸಿ : ಸೊರಕೆ

ಮಂಗಳೂರು: ರಾಮಮಂದಿರದ ಹುಂಡಿ ಕಳವು ಪ್ರಕರಣದ ಹಿನ್ನೆಲೆಯಲ್ಲಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ್ನು ಕೂಡಲೇ ವಜಾ ಮಾಡಬೇಕು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಒತ್ತಾಯಿಸಿದ್ದಾರೆ.

ಶ್ರೀ ಶಂಕರಾಚಾರ್ಯ ಸ್ವಾಮೀಜಿ, ಸುಪ್ರೀ ಕೋರ್ಟ್ ನ್ಯಾಯಾಧೀಶರು ಮತ್ತು ಭಕ್ತರನ್ನು ಒಳಗೊಂಡ ಹೊಸ ಟ್ರಸ್ಟ್ ನ್ನು ರಚಿಸಬೇಕು. ಆರ್ ಎಸ್ ಎಸ್, ವಿಎಚ್ ಪಿ ಮತ್ತು ಬಿಜೆಪಿಯವರು ಕೋಟ್ಯಂತರ ರಾಮ ಭಕ್ತರ ನಂಬಿಕೆಗೆ ಆಘಾತವನ್ನುಂಟು ಮಾಡಿದ್ದಾರೆ. ಪ್ರಕರಣದ ಬಗ್ಗೆ ಐಟಿ, ಇಡಿ, ಸಿಬಿಐ ಮೌನವಾಗಿವೆ. ತಾನೋರ್ವ ಚೌಕಿದಾರ್ ಎನ್ನುವ ಪ್ರಧಾನಮಂತ್ರಿಯವರು ನೇಮಿಸಿದ ಉಪಚೌಕಿದಾರ ಟ್ರಸ್ಟಿಗಳಿಂದಲೇ ಕಳವು ನಡೆದಿದೆ. ರಾಮಮಂದಿರದ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ ಎಂದು ಅವರು ಬುಧವಾರದಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

YouTube player

1989ರಿಂದ ಬಿಜೆಪಿ ರಾಮಮಂದಿರ ವಿಚಾರವನ್ನು ಚುನಾವಣೆಗೆ ಬಳಸಿಕೊಂಡು ಬಂದಿದೆ. ಬಿಜೆಪಿಯವರು ಪುತ್ತೂರಿನಲ್ಲಿಯೂ ಇಟ್ಟಿಗೆಗಳನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿ ಕಾಣಿಕೆ ಪಡೆದುಕೊಂಡಿದ್ದರು. ಆದರೆ ಆಗ ನನಗೆ ಗೆಲುವಾಗಿತ್ತು. ರಾಮಮಂದಿರ ವಿವಾದದ ಬಗ್ಗೆ ನ್ಯಾಯಾಲಯದಲ್ಲಿಯೇ ತೀರ್ಮಾನವಾಗಿಬೇಕು ಎಂಬುದು ಕಾಂಗ್ರೆಸ್ ನ ನಿಲುವು ಕೂಡ ಆಗಿತ್ತು ಎಂದು ಸೊರಕೆ ಹೇಳಿದರು.

ಭೂಮಿ ಮಾರಾಟದಲ್ಲಿಯೂ ಟ್ರಸ್ಟ್ ನವರು ಒಳಒಪ್ಪಂದ ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ಭಕ್ತಾಭಿಮಾನಿಗಳು ನೀಡಿರುವ ಕಾಣಿಕೆಯನ್ನು ಕೂಡ ಕಳವು ಮಾಡಲಾಗಿದೆ. ಕರ್ನಾಟಕದಲ್ಲಿಯೂ ಆ ಬಂಗಾರವನ್ನು ತಂದು ಕರಗಿಸಿರುವ ದೂರಿದೆ. ಕರಾವಳಿಯಲ್ಲಿಯೂ ರಾಮದೇವರನ್ನು ನಿರಂತರವಾಗಿ ಆರಾಧಿಸಿಕೊಂಡು ಬರಲಾಗಿದೆ. ಆದರೆ ಬಿಜೆಪಿಯವರು ರಾಮ ದೇವರ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ ಎಂದು ಸೊರಕೆ ಹೇಳಿದರು.


Spread the love
Subscribe
Notify of

0 Comments