ಲಾಕ್ ಡೌನ್ : ತಾನು ಉಳಿತಾಯ ಮಾಡಿದ ಹಣದಿಂದ 140 ಮನೆಗೆ ಅಕ್ಕಿ ನೀಡಿ ಮಾನವೀಯತೆ ಮೆರೆದ ಶಾರದಕ್ಕ!
ಉಡುಪಿ: ಕರೋನಾ ಮಹಾಮಾರಿಯ ಜೊತೆ ಸಮಾಜ ಸೇವೆಯ ಹೆಸರಲ್ಲಿ ಪ್ರಚಾರಕ್ಕಾಗಿ ಹಾತೊರೆಯುವವರ ಹಾವಳಿಯೂ ಹೆಚ್ಚುತ್ತಿದೆ. ಆದರೆ ಇಲ್ಲೊಬ್ಬ ಮಹಾತಾಯಿ ತನ್ನ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ, ವರ್ಷವಿಡೀ ಉಳಿತಾಯ ಮಾಡಿದ್ದ ಅಲ್ಪಸ್ವಲ್ಪ ಹಣದಲ್ಲಿ ಅಕ್ಕಿ ಖರೀದಿಸಿ ಯಾವ ಸದ್ದು ಗದ್ದಲವೂ ಇಲ್ಲದೆ ಸೈಲೆಂಟಾಗಿ ಬಡವರಿಗೆ ಹಂಚಿದ್ದಾರೆ.
ಹಾಗಂತ ಇವರೇನೂ ರಾಜಕಾರಣಿಯಲ್ಲ ಸಮಾಜಸೇವಕಿಯೂ ಅಲ್ಲ. ಮಲ್ಪೆ ಬಂದರೆ ನೊಳಗೆ ಮೀನು ಮಾರಾಟ ಮಾಡುವ ಓರ್ವ ಸಾಮಾನ್ಯ ಮಹಿಳೆ. ಹೆಸರು ಶಾರದಾ. ನೆಟ್ಟಗೆ ಇಬ್ಬರು ಕಾಲುಚಾಚಿ ಮಲಗಲೂ ಸಾಧ್ಯವಿಲ್ಲದಷ್ಟು ಸಣ್ಣ ಗುಡಿಸಲಿನಲ್ಲಿ ಇವರು ವಾಸ ಮಾಡುತ್ತಿದ್ದಾರೆ.

ದಿನಕ್ಕೆ 500 ರೂಪಾಯಿ ದುಡಿಯುವ ಇವರಿಗೆ ತಿಂಗಳ ಖರ್ಚು ಕಳೆದು ಐದಾರು ಸಾವಿರ ಉಳಿತಾಯ ಮಾಡಲು ಸಿಕ್ಕಿದರೆ ಅದೇ ದೊಡ್ಡ ಮೊತ್ತ. ಕರೋನಾ ಎಮರ್ಜೆನ್ಸಿ ಯಿಂದ ತನ್ನ ಅಕ್ಕಪಕ್ಕದ ಮನೆಯವರು ಕೆಲಸವಿಲ್ಲದೇ ಖರ್ಚಿಗೆ ದುಡ್ಡಿಲ್ಲದೇ ಅಕ್ಕಿಗಾಗಿ ಪರದಾಡುತ್ತಿದ್ದ ಸುದ್ದಿ ಕೇಳಿ ಶಾರದಾ ಅವರ ಮಾತೃ ಹೃದಯ ಕರಗಿದೆ. ಕೂಡಲೇ ತನ್ನ ಬಳಿ ಉಳಿಸಿಕೊಂಡಿದ್ದ ಮೂವತ್ತು ಸಾವಿರ ಹಣದಲ್ಲಿ 700 ಕೆಜಿ ಅಕ್ಕಿ ತಂದು ಮಲ್ಪೆ ನೆರ್ಗಿ ಪ್ರದೇಶದ ಅಂಬೇಡ್ಕರ್ ಕಾಲನಿಯ ನಿವಾಸಿಗಳಿಗೆ ತಲಾ 5 ಕೆಜಿ ಯಂತೆ ಹಂಚಿದ್ದಾರೆ. ನನ್ನ ಬಳಿ ಇದ್ದ ದುಡ್ಡೆಲ್ಲಾ ಖರ್ಚಾಯ್ತು ಇಲ್ಲಾಂದ್ರೆ ಇನ್ನಷ್ಟು ಮನೆಗಳಿಗೆ ಅಕ್ಕಿ ಕೊಡುತ್ತಿದ್ದೆ ಎಂದು ಶಾರದಕ್ಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.


ಶಾರದಕ್ಕ ಅವರ ಬಳಿ ಅಕ್ಕಿ ಹಂಚುವಾಗ ಫೋಟೋ ತೆಗೆಯಲಿಲ್ವೆ ಎಂದು ಕೇಳಿದಾಗ ನಾನು ಬಡವರ ಹಸಿವೆಗೆ ಅಕ್ಕಿ ಹಂಚಿರೋದು ಫೋಟೋ ತೆಗಿಸಿಕೊಳ್ಳೋದಿಕ್ಕೆ ಅಲ್ಲ ಎಂದು ಮುಗ್ದವಾಗಿ ಉತ್ತರಿಸಿದ್ದಾರೆ. ಸ್ವಂತ ಮನೆ ಇಲ್ಲದಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಶಾರದಾ ಅವರ ಔದಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.













