ವಿದ್ಯಾರ್ಥಿ ಬಳಗ ಬಲಿಷ್ಠವಾದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ – ಮೊಹಮ್ಮದ್ ಮೊನು
ಮಂಗಳೂರು: ವಚನಕಾರರ ನೈತಿಕ ಅಂಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿ ಬಳಗ ಬಲಿಷ್ಠವಾದರೆ ಮಾತ್ರ ನಮ್ಮ ದೇಶ ಬಲಿಷ್ಠವಾಗುತ್ತದೆ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೊನು ಹೇಳಿದರು.
ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ, ಹಡಪದ ಅಪ್ಪಣ್ಣ ಇಂತಹ ಅದೆಷ್ಟು ವಚನಕಾರರ ಜೀವನಚರಿತ್ರೆಗಳ ಪರಿಚಯವಾಗುವುದು ಅತೀ ಮುಖ್ಯವಾಗಿದೆ. ಪಠ್ಯದ ವಿಷಯಗಳ ಜೊತೆಗೆ ಶಿವಶರಣರ ಮೌಲ್ಯಗಳನ್ನು ವಿದ್ಯಾರ್ಥಿಗಳು ತಿಳಿದಿರಬೇಕು ಎಂದು ಸರಕಾರಿ ಪದವಿ ಪೂರ್ವ ಮಹಿಳಾ ಕಾಲೇಜು, ಬಲ್ಮಠ, ಇಲ್ಲಿನ ಪ್ರಾಂಶುಪಾಲರಾದ ಮ್ಯಾರಿಟನ್ ಜೆ ಮಸ್ಕರೇನಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ವಚನಕಾರ ಬಸವಣ್ಣನ ಆತ್ಮೀಯ ಮಿತ್ರನಾಗಿ, ಸಮಾಜದ ಆಗು-ಹೋಗುಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಅನುಭಾವ ಚಿಂತನೆಗಳನ್ನು ತನ್ನ ವಚನಗಳಲ್ಲಿ ಸೇರಿಸಿಕೊಂಡ ಶಿವಶರಣ ಅಪ್ಪಣ್ಣರ ಬದುಕಿನ ಚಿತ್ರಣದ ಕುರಿತು ಸರಕಾರಿ ಪದವಿಪೂರ್ವ ಕಾಲೇಜು ಎರ್ಮಾಳು, ಉಡುಪಿಯ ಡಾ.ಜ್ಯೋತಿ ಚೇಳ್ಯಾರು ಉಪನ್ಯಾಸ ನೀಡಿದರು.
ಬಳಿಕ ಮಾತಾನಾಡಿದ ಅವರು ‘ಹಡಪದ’ ಎಂಬ ಪದದ ಅರ್ಥ (ತಾಂಬೂಲದ ಚೀಲ ಮತ್ತು ಕ್ಷೌರಿಕ)ವನ್ನು ತಿಳಿಸುತ್ತಾ, ಅಪ್ಪಣ್ಣನ ವಚನ ಚಿಂತನೆಯ ಪ್ರಾಮುಖ್ಯತೆ ಅಂದಿನ ಕಾಲಕ್ಕೆ ಸೀಮಿತವಾಗಿಲ್ಲದೆ ಪ್ರಸ್ತುತ ಕಾಲಮಾನಕ್ಕೆ ಹೊಂದಾಣಿಕೆಗೊಂಡಿದೆ. ಸಣ್ಣ ವಾಕ್ಯಗಳಿಂದ ವಚನಗಳನ್ನು ರಚಸಿ ತತ್ವ ನಿರೂಪಣೆಯನ್ನು ಸುಲಲಿತವಾಗಿ ತೋರಿ ಜನ ಸಾಮಾನ್ಯರಂತೆ ತಮ್ಮನ್ನು ಗುರುತಿಸಿಕೊಂಡಿದ್ದರು ಎಂದರು.
ವಚನ ಎಂಬುದು ಯಾವುದೇ ಜಾತಿ, ಧರ್ಮಗಳಿಗೆ ಮೀಸಲಾಗಿರುವುದಿಲ್ಲ. ಅಪ್ಪಣ್ಣನವರ ವಚನಗಳು ಕೇವಲ ಭಕ್ತಿಯುತವಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯ ವಚನಗಳಾಗಿ ಇಂದಿಗೂ ಕಾಣಿಸಿಕೊಳ್ಳುತ್ತಿವೆ. ಬದುಕಿನ ತಾತ್ವಿಕತೆಯನ್ನು, ವ್ಯಕ್ತಿತ್ವದ ವಿಶೇಷತೆಯನ್ನು ಇವರ ವಚನಗಳಿಂದ ನಾವು ಅರಿತುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕರು ರಾಜೇಶ್.ಜಿ, ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.