ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆ ಉನ್ನತೀರಣ: ಎಂಫ್ರೆಂಡ್ಸ್‌ನ ಕಾರುಣ್ಯ ಯೋಜನೆ ಉದ್ಘಾಟಿಸಿದ ದಿನೇಶ್ ಗುಂಡೂರಾವ್ ಭರವಸೆ

Spread the love

ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆ ಉನ್ನತೀರಣ: ಎಂಫ್ರೆಂಡ್ಸ್‌ನ ಕಾರುಣ್ಯ ಯೋಜನೆ ಉದ್ಘಾಟಿಸಿದ ದಿನೇಶ್ ಗುಂಡೂರಾವ್ ಭರವಸೆ

ಕ್ಯಾಥ್‌ಲ್ಯಾಬ್, ಡೇ ಕೇರ್ ಕಿಮೋಥೆರಪಿ ಸಹಿತ ಅತ್ಯಾಧುನಿಕ ಚಿಕಿತ್ಸೆ ನೀಡುತ್ತಿರುವ ವೆನ್ಲಾಕ್ ಮತ್ತು ಪ್ರತಿದಿನ 18-20 ಹೆರಿಗೆ ನಡೆಯುತ್ತಿರುವ ಲೇಡಿಗೋಷನ್ ಆಸ್ಪತ್ರೆಗಳು ರಾಜ್ಯಕ್ಕೆ ಮಾದರಿಯಾಗಿದ್ದು, ಇವೆರಡನ್ನೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಜೊತೆಗಾರರಿಗೆ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾತ್ರಿ ಊಟ ವಿತರಿಸುವ ವಿಸ್ತರಿತ ಕಾರುಣ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಷ್ಟು ಸ್ವಚ್ಛ ಪರಿಸರ, ಗುಣಮಟ್ಟದ ಚಿಕಿತ್ಸೆ ಸರಕಾರಿ ವ್ಯವಸ್ಥೆಯಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ವೆನ್ಲಾಕ್‌ನಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಹೊರ ರೋಗಿ ವಿಭಾಗ ಸಿದ್ಧಗೊಳ್ಳುತ್ತಿದೆ. ಕೆಎಂಸಿಯಿಂದ 35 ಕೋಟಿ ರೂ. ಮೊತ್ತದ ಸೌಲಭ್ಯ ಬರಲಿದೆ. ಲೇಡಿಗೋಷನ್‌ನಲ್ಲಿ ಐಐಸಿಯು ನಿರ್ಮಾಣವಾಗಿದೆ. ಇದೆಲ್ಲವನ್ನು ಬಳಸಿಕೊಂಡು, ಇನ್ನಷ್ಟು ಸೌಲಭ್ಯ ಕಲ್ಪಿಸಿ ಉತ್ಕೃಷ್ಟ ಆಸ್ಪತ್ರೆಗಳಾಗಿ ಮಾರ್ಪಡಿಸುತ್ತೇವೆ ಎಂದು ಅವರು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರಕಾರದಿಂದ ಊಟ ಕೊಡುತ್ತಿದ್ದೇವೆ. ಅವರ ಜೊತೆ ಇರುವವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ. ಅವರು ಹೊರಗೆ ಹೋಗುವುದು ಕಷ್ಟ. ಇದನ್ನು ಮನಗಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಎಂಟು ವರ್ಷಗಳಿಂದ ನಿರಂತರ ರಾತ್ರಿ ಊಟ ನೀಡುವ ಎಂಫ್ರೆಂಡ್ಸ್ ಕಾರ್ಯ ಶ್ಲಾಘನೀಯ. ಅದನ್ನು ಲೇಡಿಗೋಷನ್‌ಗೂ ವಿಸ್ತರಿಸಿರುವುದು ಅಭಿಮಾನಪಡುವ ಪುಣ್ಯದ ಕೆಲಸ. ನಿಮ್ಮ ಜತೆ ನಾವಿದ್ದೇವೆ ಎಂದು ಸಚಿವರು ಹೇಳಿದರು.

ರೋಹನ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಅವರ ಪರವಾಗಿ ನಿರ್ದೇಶಕ ಡಿಯೋನ್ ಮೊಂತೇರೊ ಅವರಿಗೆ ಸಚಿವರು `ಕರುಣಾಳು ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಿದರು.

ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಶುಭ ಹಾರೈಸಿದರು.

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ, ಲೇಡಿಗೋಷನ್ ಆರ್‌ಎಂಒ ಡಾ.ಸುಧಾಕರ್, ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಕೊಶಾಧಿಕಾರಿ ಝುಬೇರ್ ಬುಳೆರಿಕಟ್ಟೆ, ಟ್ರಸ್ಟಿಗಳಾದ ಅನ್ವರ್ ಹುಸೇನ್, ಶೇಕ್ ಇಸಾಕ್, ಅಬೂಬಕರ್ ಪುತ್ತು, ಡಾ.ಮುಬಶ್ಶಿರ್, ಹಂಝ ಬಸ್ತಿಕೋಡಿ, ಮುಸ್ತಫಾ ಗೋಳ್ತಮಜಲು, ಬಶೀರ್ ಅಹ್ಮದ್, ಇಸ್ಮಾಯಿಲ್ ಕೋಲ್ಪೆ, ಇಬ್ರಾಹಿಂ ನಂದಾವರ, ಹಸೈನಾರ್ ಶಾಫಿ, ಮೊಹಮ್ಮದ್ ಸಫ್ವಾನ್ ವಿಟ್ಲ, ಮುಹಮ್ಮದ್ ಕುಂಞಿ ಟಾಪ್ಕೊ ಮತ್ತಿತರರು ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಕಾರುಣ್ಯ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಹನೀಫ್ ಗೋಳ್ತಮಜಲು ಸ್ವಾಗತಿಸಿದರು. ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಪ್ರಾಸ್ತಾವಿಕ ಮಾತನಾಡಿದರು. ಎಂಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಬಿ.ಎ.ಮೊಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments