ಶಾಂತಿ, ಸುವ್ಯವಸ್ಥೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿ: ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕರೆ
ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ದೇವಸ್ಥಾನ, ಮಸೀದಿ, ಚರ್ಚ್ ಗಳ ಧಾರ್ಮಿಕ ಮುಖಂಡರು ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು. ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಮಾಜದ ಜನರಿಗೆ ಮನದಟ್ಟು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ನಗರದ ನೆಹರೂ ಮೈದಾನದಲ್ಲಿ ಆಕರ್ಷಕ ಪಥಸಂಚಲನದೊಂದಿಗೆ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಸಂದೇಶ ಭಾಷಣ ಮಾಡಿದರು.
ಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲೂ ಸಹ ಸಾಮರಸ್ಯ ಸಂದೇಶ ಸಾರುವತ್ತ ಕಲಾವಿದರು ಹೆಚ್ಚಿನ ಗಮನ ಹರಿಸಬೇಕು. ಹಿಂಸೆಗೆ ಅವಕಾಶ ನೀಡದೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಎಲ್ಲಾ ಮಹಾನ್ ಚೇತನಗಳಿಗೂ ನಮನ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ದೇಶಕ್ಕಾಗಿ ಹೋರಾಡಿದ ಎಲ್ಲ ಮಹಾನ್ ವ್ಯಕ್ತಿಗಳ ಆದರ್ಶ ನಮ್ಮ ಯುವಪೀಳಿಗೆಯಲ್ಲಿ ಮೇಳೈಸಬೇಕಿದೆ. ನಮ್ಮ ದೇಶ ಚೈತನ್ಯಯುತ ಅಭಿವೃದ್ಧಿ ಶೀಲ ರಾಷ್ಟ್ರವಾಗಬೇಕಾದರೆ ನಮ್ಮಲ್ಲಿ ಭಾರತೀಯತೆ, ದೇಶದ ಭವ್ಯತೆ-ದಿವ್ಯತೆ ಮತ್ತು ಪಾವಿತ್ರ್ಯತೆಗಳ ಅರಿವು, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಅವಕಾಶವಿಲ್ಲದೇ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಕೋಮು ಪ್ರಕರಣಗಳ ಮೂಲವನ್ನು ಅರಿಯಲು ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಮುಖಂಡರೊಂದಿಗೆ ಶಾಂತಿ ಸೌಹಾರ್ಧ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಮೂಡಿಬಂದ ಒಮ್ಮತದ ಅಭಿಪ್ರಾಯದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಪೊಲೀಸ್ ತಂಡಗಳು, ಸಶಸ್ತ್ರ ಮೀಸಲು ಪಡೆ, ಕೆಎಸ್ ಆರ್ ಪಿ, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳದ ವಿದ್ಯಾರ್ಥಿಗಳ ಶಿಸ್ತಿನ ಪಥ ಸಂಚಲನ ನಡೆಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಐಜಿಪಿ ಅಮಿತ್ ಸಿಂಗ್, ಎಸ್ಪಿ ಡಾ. ಅರುಣ್ ಕುಮಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ ಉಪಸ್ಥಿತರಿದ್ದರು.