ಶಿರೂರು ಶಾಲೆಯಲ್ಲಿ ವಿದ್ಯಾರ್ಥಿಗೆ ಥಳಿಸಿದ ವೀಡಿಯೋ ವೈರಲ್ – ಜಿಲ್ಲಾ NSUI ನಿಯೋಗ ಭೇಟಿ
ಬೈಂದೂರು: ತಾಲೂಕಿನ ಶಿರೂರಿನ ಗ್ರೀನ್ ವ್ಯಾಲಿ ಇಂಟರ್ ನ್ಯಾಷನಲ್ ಶಾಲೆ (ಸಿ ಬಿ ಎಸ್ ಇ) ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯಾದ ವೀಡಿಯೋ ವೈರಲ್ ಆಗಿರುವ ಕುರಿತಂತೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ಪದಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ಘಟನೆಯ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡರು.
ಈ ವೇಳೆ ಶಾಲೆಯ ಪ್ರಾಂಶುಪಾಲರನ್ನು ಭೇಟಿಯಾದ ನಿಯೋಗ ಘಟನೆಯ ಕುರಿತು ಸ್ಪಷ್ಟವಾದ ಮಾಹಿತಿಯನ್ನು ಪಡೆದುಕೊಂಡಿತು. ಈ ವೇಳೆ ಪ್ರಾಂಶುಪಾಲರು ಘಟನೆ ಆರು ತಿಂಗಳ ಹಿಂದೆ ನಡೆದಿದ್ದು ಇತ್ತಿಚೇಗೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದ ಕೂಡಲೇ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದ ಉಪನ್ಯಾಸಕ ವಿನಾಯಕ್ ಖಾರ್ವಿ ಎಂಬಾತನನ್ನು ಸಂಸ್ಥೆಯಿಂದ ವಜಾಗೊಳಿಸಿದ್ದು ವಿದ್ಯಾರ್ಥಿಯ ಕುಟುಂಬಕ್ಕೆ ಈ ಕುರಿತು ಮಾಹಿತಿ ಕೂಡ ನೀಡಲಾಗಿದೆ. ಅಲ್ಲದೆ ಮುಂದೆ ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಿಯೋಗ ಕಾಲೇಜು ಆಡಳಿತ ಮಂಡಳಿಗೆ ಆಗ್ರಹಿಸಿತು.
ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಮಾನವ ಹಕ್ಕು ಆಯೋಗ ಕೂಡ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ ಮತ್ತು ಎಚ್ಚರಿಕೆಯನ್ನು ನೀಡಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
ಈ ವೇಳೆ ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಯಾಸಿನ್ ಫುರ್ಖಾನ್, ಅನೀಶ್ ಪೂಜಾರಿ ಕುಂದಾಪುರ ತಾಲೂಕು ಅಧ್ಯಕ್ಷರಾದ ಸುಜನ್ ಶೆಟ್ಟಿ ಅವರು ಮಾತನಾಡಿ ಮುಂದೆ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಕಾಲೇಜಿನ ವಿರುದ್ದ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿಯೋಗದಲ್ಲಿ ಎನ್ ಎಸ್ ಯು ಐ ಪದಾಧಿಕಾರಿಗಳಾದ ಸಿರಾಜ್ ಶೇಖ್ ಮತ್ತು ಸುಮುಖ್ ಶೇರಿಗಾರ್ ಉಪಸ್ಥಿತರಿದ್ದರು.