ಎನ್‌ಎಂಪಿಎ ಶಾಲೆಯನ್ನು ವಿಲೀನಗೊಳಿಸಿದರೆ ಬೀದಿಗಿಳಿದು ಹೋರಾಟ: ಮಾಜಿ ಶಾಸಕ ಮೊಯ್ದಿನ್ ಬಾವಾ ಎಚ್ಚರಿಕೆ

Spread the love

ಎನ್‌ಎಂಪಿಎ ಶಾಲೆಯನ್ನು ವಿಲೀನಗೊಳಿಸಿದರೆ ಬೀದಿಗಿಳಿದು ಹೋರಾಟ: ಮಾಜಿ ಶಾಸಕ ಮೊಯ್ದಿನ್ ಬಾವಾ ಎಚ್ಚರಿಕೆ

ನವಮಂಗಳೂರು ಬಂದರು ಮಂಡಳಿ(NMPA) ಆಡಳಿತಕ್ಕೆ ಒಳಪಟ್ಟಿರುವ ಮತ್ತು ಕಳೆದ 40 ವರ್ಷಗಳಿಂದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಎನ್.ಎಂ.ಪಿ.ಎ. ಆಂಗ್ಲ ಮಾಧ್ಯಮ ಶಾಲೆಯನ್ನು ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಯತ್ನಕ್ಕೆ ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕಟ್ಟಡವಲ್ಲ, ಬದಲಾಗಿ ನವಮಂಗಳೂರು ಬಂದರಿಗಾಗಿ ತಮ್ಮ ಭೂಮಿಯನ್ನು ತ್ಯಾಗ ಮಾಡಿದ ಕುಟುಂಬಗಳ ಮಕ್ಕಳ ಭವಿಷ್ಯದ ಕೇಂದ್ರವಾಗಿದೆ. ಚಿತ್ರಾಪುರ, ಹೊಸಬೆಟ್ಟು, ಸುರತ್ಕಲ್, ಕಾಟಿಪಳ್ಳ ಮತ್ತು ಕೃಷ್ಣಾಪುರ ಭಾಗದ ನೂರಾರು ಬಡ ವಿದ್ಯಾರ್ಥಿಗಳು ಈ ಶಾಲೆಯನ್ನು ನೆಚ್ಚಿಕೊಂಡಿದ್ದಾರೆ. ಇಂತಹ ಪವಿತ್ರ ವಿದ್ಯಾಕೇಂದ್ರವನ್ನು ಮುಚ್ಚುವ ಯಾವುದೇ ಪ್ರಯತ್ನ ನಡೆದರೂ ನಾನು ಸುಮ್ಮನಿರಲಾರೆ. ಶಾಲೆಯನ್ನು ಉಳಿಸಲು ನಾನು ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕೆ ಸಿದ್ಧನಿದ್ದೇನೆ,” ಎಂದು ಗುಡುಗಿದರು.

ಶಾಲೆಯನ್ನು ವಿಲೀನಗೊಳಿಸುವ ಮಂಡಳಿಯ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಅವರು, “ಎನ್.ಎಂ.ಪಿ.ಎ. ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಯಾವುದೇ ಕಾರಣಕ್ಕೂ ಈ ಶಾಲೆಯನ್ನು ನಿಲ್ಲಿಸಬಾರದು ಅಥವಾ ವಿಲೀನಗೊಳಿಸಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಈ ಭಾಗದ ಜನರ ಭಾವನೆಗಳೊಂದಿಗೆ ಆಟವಾಡಬೇಡಿ. ಒಂದು ವೇಳೆ ಇಂತಹ ಪ್ರಯತ್ನ ಮುಂದುವರಿದರೆ, ಆ ಭಾಗದಲ್ಲಿ ಶಾಂತಿಯುತವಾಗಿ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ,” ಎಂದು ಎಚ್ಚರಿಸಿದರು.

“ಶಾಲಾ ಶೈಕ್ಷಣಿಕ ಸಾಲು ಆರಂಭವಾಗುವ ಸಮಯದಲ್ಲೂ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಇನ್ನೂ ಆರಂಭಿಸದೆ ಇರುವುದು ಖಂಡನೀಯ. ಕೂಡಲೇ ಮಂಡಳಿಯ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರು ಆದೇಶ ಹೊರಡಿಸಿ, ಒಂದನೇ ತರಗತಿಗೆ ಮಕ್ಕಳ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು. ಶಾಲಾ ಸಮಯದಲ್ಲಿ ವಿಳಂಬ ಮಾಡದೆ ತಕ್ಷಣವೇ ದಾಖಲಾತಿ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು,” ಎಂದು ಅವರು ಒತ್ತಾಯಿಸಿದರು.

ಖಾಸಗಿ ಶಾಲೆಗಳನ್ನು ಸರಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲು ಅವಕಾಶವಿಲ್ಲದಿದ್ದರೂ, ಎನ್.ಎಂ.ಪಿ.ಎ. ಮಂಡಳಿ ಇಂತಹ ಅವಿವೇಕದ ನಿರ್ಧಾರಕ್ಕೆ ಮುಂದಾಗಿರುವುದನ್ನು ಮೊಯ್ದಿನ್ ಬಾವಾ ಆಕ್ಷೇಪಿಸಿದರು. “ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಿಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ಶಾಲೆಯ ಸ್ಥಿತಿಗತಿಯನ್ನು ವಿವರಿಸಲಾಗಿದೆ. ಜೊತೆಗೆ ಮಾನ್ಯ ಶಿಕ್ಷಣ ಸಚಿವರ ಗಮನಕ್ಕೂ ಈ ವಿಚಾರವನ್ನು ತಂದಿದ್ದೇನೆ. ಈ ಹಿಂದೆ ಮುಚ್ಚಲ್ಪಟ್ಟ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಕೂಡ ಪುನರಾರಂಭಿಸಬೇಕು. ಬಡವರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವ ಯಾವುದೇ ನಡೆಯನ್ನು ನಾವು ಸಹಿಸುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಮಲಕರ, ಜಾರ್ಜ್ ವಿನ್ಸೆಂಟ್, ಮೊಹಮ್ಮದ್ ಇಮ್ರಾನ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments