ಕರಾವಳಿ ಉತ್ಸವ ಹಿನ್ನಲೆ: ತಣ್ಣೀರುಬಾವಿ ಬೀಚ್ ಸುತ್ತಮುತ್ತ ವಾಹನ ಸಂಚಾರದಲ್ಲಿ ಮಾರ್ಪಾಡು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವದ ಪ್ರಯುಕ್ತ ತಣ್ಣೀರುಬಾವಿ ಬೀಚ್ನಲ್ಲಿ ಜನವರಿ 3 ಮತ್ತು 4ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್ ಹಾಗೂ ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕೊಟ್ಟಾರಚೌಕಿ–ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಅವಧಿಯಲ್ಲಿ ಕುದುರೆಮುಖ ಜಂಕ್ಷನ್ನಿಂದ ತಣ್ಣೀರುಬಾವಿ ಬೀಚ್ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ ಎಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲೇ ನಿಲ್ಲಿಸಬೇಕಾಗಿದೆ.
ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆ ಕುರಿತ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಾಗೂ ಕಾರ್ಯಕ್ರಮ ಆರಂಭಕ್ಕೂ ಮುಂಚಿತವಾಗಿ ಬಂದು ನಿಗದಿತ ಸ್ಥಳಗಳಲ್ಲಿ ವಾಹನ ನಿಲ್ಲಿಸುವಂತೆ ಮನವಿ ಮಾಡಲಾಗಿದೆ.
ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳು:
1. ಫೀಜಾ ಕ್ರಿಕೆಟ್ ಗ್ರೌಂಡ್ (ಹೋಟೆಲ್ ನಿತ್ಯಾಧರ ಮುಂಭಾಗ)
2. ಡೆಲ್ಟಾ ಮೈದಾನ ಪಾರ್ಕಿಂಗ್
3. ರಫ್ತಾರ್ ಪಾರ್ಕಿಂಗ್
4. ಬೆಂಗ್ರೆ ತಣ್ಣೀರುಬಾವಿ ಮಸೀದಿ ಪಾರ್ಕಿಂಗ್
5. ಕಟ್ಟೆ ಗ್ರೌಂಡ್ ಪಾರ್ಕಿಂಗ್
6. ದೋಸ್ತ್ ಗ್ರೌಂಡ್
7. ಫಾತಿಮಾ ಚರ್ಚ್ ಪಾರ್ಕಿಂಗ್
8. ಎ.ಜೆ. ಶೆಟ್ಟಿ ಅವರ ಗ್ರೌಂಡ್ (ಎಸ್.ಇ.ಝ್ ರಸ್ತೆ)
ಇದಲ್ಲದೆ, ಕಾರ್ಯಕ್ರಮಕ್ಕೆ ಬರುವವರು ತಮ್ಮ ಅನುಕೂಲಕ್ಕಾಗಿ ಸುಲ್ತಾನ್ ಬತ್ತೇರಿಯಿಂದ ಫೇರಿ ಸೇವೆಯನ್ನು ಬಳಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ರಸ್ತೆಯಲ್ಲಿ ಅನಾವಶ್ಯಕವಾಗಿ ನಿಲ್ಲದೇ ಶಿಸ್ತನ್ನು ಕಾಪಾಡಿ, ಪೊಲೀಸರು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.













