ಕಾಸರಗೋಡು: ಆ್ಯಸಿಡ್ ಸೇವಿಸಿ ದಂಪತಿ, ಮಗ ಆತ್ಮಹತ್ಯೆ; ಕಿರಿಯ ಪುತ್ರ ಗಂಭೀರ
ಕಾಸರಗೋಡು: ಒಂದೇ ಕುಟುಂಬದ ಮೂವರು ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಲತ್ತರ ಎಂಬಲ್ಲಿ ಗುರುವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ.
ಅಂಬಲತ್ತರ ಪಾರಕ್ಲಾಯಿಯ ಗೋಪಿ (60), ಪತ್ನಿ ಇಂದಿರಾ (57) ಮತ್ತು ಪುತ್ರ ರಂಜೇಶ್ (32) ಮೃತಪಟ್ಟವರು. ಗಂಭೀರ ಸ್ಥಿತಿಯಲ್ಲಿದ್ದ ಇನ್ನೋರ್ವ ಪುತ್ರ ರಾಕೇಶ್ ನನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಬಂಧಿಕರೋರ್ವರ ಮೊಬೈಲ್ ಗೆ ಕರೆ ಮಾಡಿದ್ದ ರಂಜೇಶ್, ತಮ್ಮನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದ ಎನ್ನಲಾಗಿದೆ. ಕೂಡಲೇ ಸ್ಥಳೀಯರು, ಕುಟುಂಬಸ್ಥರು ಸೇರಿ ನಾಲ್ವರನ್ನು ಆಸ್ಪತ್ರೆಗೆ ತಲಪಿಸಿದರೂ ಮೂವರು ಮೃತಪಟ್ಟರು ಎಂದು ತಿಳಿದು ಬಂದಿದೆ. ಆರ್ಥಿಕ ಮುಗ್ಗಟ್ಟು ಘಟನೆಗೆ ಕಾರಣ ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ತಿಳಿಸಿದೆ.
ರಂಜೇಶ್ ಹಾಗೂ ರಾಕೇಶ್ ಈ ಹಿಂದೆ ದುಬೈಯಲ್ಲಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದ ಇವರು, ಉದ್ಯಮ ನಡೆಸುತ್ತಿದ್ದರು. ಇದು ಯಶಸ್ವಿಯಾಗದೆ ಸಾಲದ ಹೊರೆ ಹೆಚ್ಚಿತ್ತು. ನಂತರದ ಸಹೋದರರು ಉದ್ಯಮ ನಿಲ್ಲಿಸಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಇವರು ಸಂಬಂಧಿಕರ ಮನೆಗಳಿಗೆ ಹಾಗೂ ಕ್ಷೇತ್ರ ದರ್ಶನಕ್ಕೆ ತೆರಳಿದ್ದರು.
ಅಂಬಲತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.