ಕುಂದಾಪುರ: ಮಳೆಯ ಅಬ್ಬರಕ್ಕೆ ಮೂರು ಮನೆಗಳು ಸಂಪೂರ್ಣ ಧರಶಾಹಿ!
- ಏಕಾಏಕಿ ಮನೆಗಳಿಗೆ ನುಗ್ಗಿದ ನೀರು. ಸುರಕ್ಷತಾ ದೃಷ್ಠಿಯಿಂದ ಸಂಬಂಧಿಕರ ಮನೆಗೆ ಜನರ ಸ್ಥಳಾಂತರ. ತಪ್ಪಿದ ಭಾರೀ ಅನಾಹುತ.
ಕುಂದಾಪುರ: ಬುಧವಾರ ತಡ ರಾತ್ರಿಗೆ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಮೂರು ಮನೆಗಳು ಸಂಪೂರ್ಣ ಧರಶಾಹಿಯಾದ ಘಟನೆ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಗದ್ದೆಮನೆ ವಠಾರದಲ್ಲಿ ನಡೆದಿದೆ.

ಮೊಳಹಳ್ಳಿ ಗ್ರಾಮದ ಕಂಬಳಗದ್ದೆ ಮನೆಯ ಪ್ರದೀಪ್ ಶೆಟ್ಟಿ, ಗೀತಾ ಶೆಟ್ಟಿ, ಪ್ರೇಮ ಶೆಟ್ಟಿ ಅವರ ಮನೆ ಸಂಪೂರ್ಣವಾಗಿ ಕುಸಿದು ನೆಲಸಮಗೊಂಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹೊಳೆಯನ್ನು ಸಮರ್ಪಕವಾಗಿ ಹೂಳೆತ್ತದೆ ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಒತ್ತಡದಿಂದಾಗಿ ಸಮೀಪದ ಮನೆಗಳಿಗೆ ನುಗ್ಗಿ ಜಲಾವೃತಗೊಂಡಿದೆ. ನದಿ ನೀರು ಏಕಾಏಕಿ ಮನೆಗೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಜಾನುವಾರುಗಳನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಬಿಡಲಾಗಿದೆ.
ನೆರೆ ನೀರು ನುಗ್ಗಿದ ಹಿನ್ನೆಲೆ ಮನೆಯಲ್ಲಿ ಮಲಗಿರುವ ಜನರು ಸಮೀಪದ ಸಂಬಂಧಿಕರ ಮನೆಗೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭವಿಸಬಹುದಾದ ಬಹುದೊಡ್ಡ ದುರಂತವೊಂದು ತಪ್ಪಿ ಹೋಗಿದೆ. ಪ್ರತಿ ಬಾರಿಯೂ ಮಳೆಗಾಲದಲ್ಲಿ ನೀರು ಮೇಲ್ಬಾಗಕ್ಕೆ ಬರುತ್ತಿದ್ದು, ಕಳೆದ ಬಾರಿ ಮಳೆಗಾಲದ ಸಂದರ್ಭದಲ್ಲಿ ಮನೆಯ ವರಾಂಡಕ್ಕೆ ನೀರು ನುಗ್ಗಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಆಗಮಿಸಿ ಸೂಕ್ತ ಪರಿಹಾರದ ಭರವಸೆಯನ್ನ ನೀಡಿದ್ದಾರೆ.













