ಗಾಂಧಿ ಹಂತಕ ಗೋಡ್ಸೆಯನ್ನು ಬಿಜೆಪಿ ವೈವಭವೀಕರಿಸುತ್ತಿದೆ – ಎಮ್ ಎ ಗಫೂರ್

ಗಾಂಧಿ ಹಂತಕ ಗೋಡ್ಸೆಯನ್ನು ಬಿಜೆಪಿ ವೈವಭವೀಕರಿಸುತ್ತಿದೆ – ಎಮ್ ಎ ಗಫೂರ್

ಉಡುಪಿ: ಬಿಜೆಪಿ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾತೂ ರಾಮ್ ಗೋಡ್ಸೆಯನ್ನು ವೈಭವೀಕರಿಸುತ್ತಿದೆ. ಆತನಿಗೆ ದೇಶಭಕ್ತನ ಪಟ್ಟ ಕಟ್ಟುವ ಕೆಲಸ ಮಾಡುತ್ತಿದೆ. ಆ ಮೂಲಕ ದೇಶದ ಜನರಲ್ಲಿ ಹಿಂಸೆಯ ಭಾವನೆ ಬೆಳೆಸುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ ಗಫೂರ್ ಆರೋಪಿಸಿದ್ದಾರೆ.

ಅವರು ಶನಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಗಿರಿ ಕಾಂಗ್ರೆಸ್ ಭವನದ ಎದುರು ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ಗೋಡ್ಸೆಯನ್ನು ದೇಶಭಕ್ತರೆಂದು ಬಿಂಬಿಸುವ ಬಿಜೆಪಿ ಮುಖಂಡರಾದ ನಳಿನ್ ಕುಮಾರ್ ಕಟೀಲ್, ಅನಂತ ಕುಮಾರ್ ಹೆಗಡೆ, ಸಾದ್ವಿ ಪ್ರಜ್ಞಾ ಸಿಂಗ್ ವಿರುದ್ಧ ಆಯೋಜಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾತ್ಮ ಗಾಂಧಿ, ಅಹಿಂಸಾ ತತ್ವದಡಿಯಲ್ಲಿ ದೇಶವನ್ನು ಕಟ್ಟಬಹುದು ಎಂಬುವುದನ್ನು ತೋರಿಸಿಕೊಟ್ಟರು. ಅದರಿಂದಲೇ ಈಗಲೂ ಇಡೀ ಜಗತ್ತು ಅವರನ್ನು ಗೌರವದಿಂದ ಕಾಣುತ್ತಿದೆ. ಆದರೆ ಬಿಜೆಪಿಯ ಕೆಲ ನೀತಿಕೆಟ್ಟ ಸಂಸದರು ಹಾಗೂ ನಾಯಕರು ಗೋಡ್ಸೆ ಯನ್ನು ದೇಶಭಕ್ತನೆಂದು ಬಿಂಬಿಸುವ ಮೂಲಕ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.

ಯುವಜನಾಂಗಕ್ಕೆ ಆದರ್ಶ ಮೌಲ್ಯಗಳನ್ನು ತಿಳಿಸಿಕೊಟ್ಟು, ಮಾರ್ಗದರ್ಶನ ಮಾಡಬೇಕಾದ ಬಿಜೆಪಿ ಸಂಸದರು ಹಾಗೂ ನಾಯಕರು ಅವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೆಲಿಯೋ, ಮುರಳಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮುಖಂಡರಾದ ಭಾಸ್ಕರ್ ರಾವ್ ಕಿದಿಯೂರು, ಸರಳ ಕಾಂಚನ್, ಸುನೀತಾ ಶೆಟ್ಟಿ, ರೋಶನಿ ಒಲಿ ವೇರಾ, ಪ್ರಖ್ಯಾತ್ ಶೆಟ್ಟಿ, ಹಬೀಬ್ ಅಲಿ, ರಮೇಶ್ ಕಾಂಚನ್, ಇಕ್ಬಾಲ್ ಮನ್ನಾ, ಜನಾರ್ದನ ಭಂಡಾರ್ಕರ್, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.