ಚಿಕ್ಕಬಳ್ಳಾಫುರ: ತಂಗಿ ಮೇಲಿನ ಕೋಪಕ್ಕೆ ಆಕೆಯ ಆರು ವರ್ಷದ ಮಗನನ್ನು ಕೊಲೆ ಮಾಡಿ ಹೂತು ಹಾಕಿದ ಅಕ್ಕ

Spread the love

ಚಿಕ್ಕಬಳ್ಳಾಫುರ: ತಂಗಿ ಮೇಲಿನ ಕೋಪಕ್ಕೆ ಆಕೆಯ ಆರು ವರ್ಷದ ಮಗನನ್ನು ಕೊಲೆ ಮಾಡಿ ಹೂತು ಹಾಕಿದ ಅಕ್ಕ

ಚಿಕ್ಕಬಳ್ಳಾಪುರ: ಎಲೆ, ಅಡಿಕೆ ತಿನ್ನಿಸಿ 9 ತಿಂಗಳ ಮಗುವನ್ನು ಅಜ್ಜಿ ಕೊಲೆ ಮಾಡಿದ ಆರೋಪ ಗದಗದಲ್ಲಿ ಇತ್ತೀಚೆಗೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಚಿಕ್ಕಬಳ್ಳಾಪುರದಲ್ಲಿ  ತಾಲೂಕಿನ ಮುತಕದಹಳ್ಳಿ ಗ್ರಾಮದಲ್ಲಿ ತನ್ನ ಅನೈತಿಕ ಸಂಬಂಧಕ್ಕೆ ತಂಗಿ ಅಡ್ಡ ಬರುತ್ತಾಳೆಂದು ಆಕೆಯ ಆರು ವರ್ಷದ ಮಗನನ್ನು ಅಕ್ಕ ಕೊಲೆ ಮಾಡಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ಅಂಬಿಕಾ ಹಾಗೂ ಅನಿತಾ ಅಕ್ಕ ತಂಗಿಯರು. ಆದರೆ ಅಂಬಿಕಾ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ಅನಿತಾಗೆ ತಿಳಿದು ಬಂದಿದೆ. ಅದರಂತೆ ವಿರೋಧವೂ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಅಂಬಿಕಾ, ಅನಿತಾಳ ಆರು ವರ್ಷದ ಮಗ ಮಧುನನ್ನು ಕೊಲೆ ಮಾಡಿ ಮುತಕದಹಳ್ಳಿ ಗ್ರಾಮದ ಮಾವಿನ ತೋಪಿನಲ್ಲಿ ಹೂತು ಹಾಕಿದ್ದಾಳೆ. ಸ್ಥಳಕ್ಕೆ ಪೆರೆಸಂದ್ರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಎಸ್​ಪಿ ಡಿ.ಎಲ್.ನಾಗೇಶ, ತನ್ನ ಇಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿರುವ ಬಗ್ಗೆ ನಿನ್ನೆ ಅನಿತಾ ಎನ್ನುವವರು ದೂರು ನೀಡಿದ್ದರು. ಅನಿತಾ ಸ್ವತಃ ತನ್ನ ಅಕ್ಕ ಅಂಬಿಕಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಪತ್ತೆಯಾಗಿರುವ ಅಂಬಿಕಾಳನ್ನು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ ಎಂದರು.

ಪೊಲೀಸರಿಗೆ ಮಾಹಿತಿ ನೀಡಿದ ಆಟೋ ಚಾಲಕ
ಬೆಂಗಳೂರಿನ ಆಟೊ ಚಾಲಕರೊಬ್ಬರ ಮೂಲಕ ಆರೋಪಿ ಮಹಿಳೆ ಪತ್ತೆಯಾಗಿದ್ದಾಳೆ ಎಂದು ಎಸ್​ಪಿ ನಾಗೇಶ ಹೇಳಿದ್ದಾರೆ. ಮತ್ತೊಂದು ಹೆಣ್ಣು ಮಗುವಿನ ಜೊತೆ ಆಟೋದಲ್ಲಿ ತೆರಳುತ್ತಿದ್ದಾಗ ಆಟೋ ಚಾಲಕನಿಗೆ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ಆಕೆ ಮಹಿಳೆ ಫೋನ್​ನಲ್ಲಿ ಮಾತನಾಡುವುದನ್ನು ಗಮನಿಸಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಬಿಕಾಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರು ಪರೇಸಂದ್ರ ಪೊಲೀಸರಿಗೆ ಮಹಿಳೆಯನ್ನು ಒಪ್ಪಿಸಿದ್ದಾರೆ ಎಂದರು.

ಇತ್ತೀಚೆಗೆ, ಒಂಬತ್ತು ತಿಂಗಳ ಹಸುಗೂಸಿಗೆ ಎಲೆ, ಅಡಿಕೆ ತಿನ್ನಿಸಿ ಅಜ್ಜಿ ಕೊಲೆ ಮಾಡಿರುವ ಆರೋಪ ಗದಗ ಜಿಲ್ಲೆಯಲ್ಲಿ ಕೇಳಿಬಂದಿತ್ತು. ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ನವೆಂಬರ್ 22 ರಂದು ಈ ಹತ್ಯೆ ನಡೆದಿತ್ತು. ಮೂರು ದಿನಗಳ ನಂತರ ಮೃತ ಮಗುವಿನ ತಾಯಿ ನಾಗರತ್ನ ತನ್ನ ಅತ್ತೆ ಸರೋಜಾ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಗೆ ದೂರು ನೀಡಿ ಇವರೇ ನನ್ನ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಹೆರಿಗೆಯಾದ 5 ತಿಂಗಳ ಬಳಿಕ ನಾಗರತ್ನ ಗಂಡನ ಮನೆಗೆ ಬಂದಿದ್ದರು. ಈ ವೇಳೆ ಅತ್ತೆ ಸರೋಜಾ, ಇಷ್ಟು ಬೇಗ ಮಗು ಬೇಕಿತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಇದೇ ಕೋಪದಲ್ಲಿ ಮಗುವಿಗೆ ಅಡಕೆ ಹೋಳು, ಎಲೆ ತಿನ್ನಿಸಿ ಕೊಲೆ ಮಾಡಿದ್ದಾರೆ ಎಂದು ನಾಗರಾತ್ನ ಆರೋಪಿಸಿದ್ದರು. ನ.22ರಂದು ಮಗುವಿನ ಅಂತ್ಯಸಂಸ್ಕಾರ ನೆರವೇರಿತ್ತು. ನಾಗರಾತ್ನ ದೂರು ನೀಡಿದ ನಂತರ ಹೂತಿಟ್ಟ ಮಗುವಿನ ಮೃತದೇಹವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದರು.


Spread the love