ಪ್ರತಿಭಟನೆ ಮಾಡುವುದನ್ನು ಬಿಟ್ಟು ಅನುದಾನಕ್ಕಾಗಿ ಕರಾವಳಿ ಶಾಸಕರು ಧ್ವನಿ ಎತ್ತಲಿ – ಸಚಿವ ಖಾದರ್

ಪ್ರತಿಭಟನೆ ಮಾಡುವುದನ್ನು ಬಿಟ್ಟು ಅನುದಾನಕ್ಕಾಗಿ ಕರಾವಳಿ ಶಾಸಕರು ಧ್ವನಿ ಎತ್ತಲಿ – ಸಚಿವ ಖಾದರ್

ಮಂಗಳೂರು: ಕರಾವಳಿ ಜನರ ಹಿತರಕ್ಷಣೆಯ ಕಾಳಜಿ ಬಿಜೆಪಿ ಶಾಸಕರಿಗೆ ಇದ್ದರೆ ಅವರು ಸದನದಲ್ಲಿ ಬಜೆಟ್‌ನ ಕುರಿತು ಚರ್ಚೆ ಮಾಡಬೇಕು, ಕರಾವಳಿಯಲ್ಲಿ ಯಾವೆಲ್ಲಾ ಯೋಜನೆಗಳಿಗೆ ಅನುದಾನ ಬೇಕಾಗಿದೆ ಎಂದು ಸರ್ಕಾರವನ್ನು ಆಗ್ರಹಿಸಬೇಕೇ ವಿನಃ ಸದನದ ಬಾವಿಯಲ್ಲಿ ಕುಳಿತು ಕೇವಲ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಲಾದರೂ ಕರಾವಳಿ ಅಭಿವೃದ್ಧಿಗೆ ಸಂಬಂಧಿಸಿದ ಆಗ್ರಹಗಳನ್ನು ಮಂಡಿಸಿದಲ್ಲಿ ಬಜೆಟ್‌ ಉತ್ತರದಲ್ಲಿ ಸೇರಿಸಿಕೊಳ್ಳಬಹುದು. ಜಿಲ್ಲೆಯ ಅಭಿವೃದ್ಧಿ ಪರವಾಗಿ ಕರಾವಳಿ ಶಾಸಕರು ಮಾತನಾಡದೇ ಇದ್ದರೆ ಅದು ಜನತೆಗೆ ಮಾಡುವ ದ್ರೋಹವಾಗುತ್ತದೆ. ಬಜೆಟ್‌ ಮಂಡನೆ ಸಂದರ್ಭದಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಗಿಂತ ಬಿಜೆಪಿಗೆ ರಾಜಕೀಯವೇ ಮುಖ್ಯವಾಯಿತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗದ್ದಲ ಸೃಷ್ಟಿಸುವುದು ಆ ಪಕ್ಷದ ಉದ್ದೇಶವಾಗಿದೆ. ಆದ್ದರಿಂದ ಬಜೆಟ್‌ ಕುರಿತ ಚರ್ಚೆಯಲ್ಲಿ ಬಿಜೆಪಿ ಶಾಸಕರು ಭಾಗವಹಿಸುವ ಉತ್ಸಾಹವನ್ನೇ ತೋರದೇ ಸಭಾತ್ಯಾಗ ಮಾಡಿದರು’ ಎಂದು ಹೇಳಿದರು.

ಕರಾವಳಿಯಲ್ಲಿ ಕುಂಠಿತಗೊಳ್ಳುತ್ತಿ ರುವ ಭತ್ತದ ಕೃಷಿಗೆ ಉತ್ತೇಜನ ನೀಡಲು ಕೃಷಿಭಾಗ್ಯ ಪ್ಯಾಕೇಜ್‌, ಪಣಂಬೂರು ಮತ್ತು ಸಸಿಹಿತ್ಲು ಬೀಚ್‌ ಅಭಿವೃದ್ಧಿಗೆ ಅನುದಾನ, ಮಣಿಪಾಲ– ಕೊಣಾಜೆ ಆರೋಗ್ಯ ಮತ್ತು ಶಿಕ್ಷಣ ಕಾರಿಡಾರ್‌ಗೆ ಸಂಬಂಧಿಸಿ ಸಾಧ್ಯತಾ ವರದಿ ರಚನೆಗೆ ಅನುದಾನ, ಮೆಟ್ರೋ ರೈಲು ಯೋಜನೆಯ ಸಾಧ್ಯತಾ ವರದಿಗೆ ಅನುದಾನ ಇಡುವ ಮೂಲಕ ಮುಖ್ಯಮಂತ್ರಿ ದೂರದೃಷ್ಟಿಯ ಬಜೆಟ್‌ ಮಂಡಿಸಿದ್ದಾರೆ. ಮಳೆ ಬಂದಾಗ ನಗರಗಳಲ್ಲಿ ಕೃತಕ ನೆರೆ ಉಂಟಾಗುವುದನ್ನು ತಡೆಯಲು ರಾಜಕಾಲುವೆ ದುರಸ್ತಿಗೆ ಅನುದಾನ ಮೀಸಲಿಡಲಾಗಿದೆ. ಇಂತಹ ಹಲವಾರು ಯೋಜನೆಗಳ ಮೂಲಕ ಸಮಗ್ರ ಬಜೆಟ್‌ ರೂಪಿಸಿದ್ದಾರೆ’ ಎಂದು ಹೇಳಿದರು.

ಸ್ಪೀಕರ್‌ ನಿರ್ಧಾರ ಅಂತಿಮ: ಬಹು ಚರ್ಚಿತ ಆಡಿಯೋ ಪ್ರಕರಣಕ್ಕೆ ಸಂಬಂಧಿ ಸಿದಂತೆ ಅಂತಿಮ ನಿರ್ಧಾರವನ್ನು ಸ್ಪೀಕರ್‌ ಅವರೇ ತೆಗೆದುಕೊಳ್ಳಲಿದ್ದಾರೆ. ಆದರೆ ಧ್ವನಿಮುದ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷರು, ನ್ಯಾಯಾಧೀಶರ ಹೆಸರು ಉಲ್ಲೇಖ ಆಗಿರುವುದರಿಂದ ಈ ಕುರಿತು ಸಂಸತ್ತಿನಲ್ಲಿಯೂ ಚರ್ಚೆ ನಡೆಯಬೇಕಾಗಿದೆ ಎಂದು ಸಚಿವ ಖಾದರ್‌ ಆಗ್ರಹಿಸಿದರು.

ಹಲವು ತಿಂಗಳಿನಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಶಾಸಕರಿಗೆ ಆಮಿಷವೊಡ್ಡಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಸಫಲವಾಗದು. ಏನೇ ಗದ್ದಲ ಉಂಟಾದರೂ ಅವೆಲ್ಲವನ್ನೂ ನಿಭಾಯಿಸಿಕೊಂಡು, ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರ್ಕಾರವನ್ನು ಸುಭದ್ರವಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಆದರೆ ಸರ್ಕಾರದ ಸಹನೆಯು ಅದರ ದೌರ್ಬಲ್ಯ ಎಂದು ಬಿಜೆಪಿ ಪರಿಗಣಿಸಬಾರದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹರೀಶ್‌ ಕುಮಾರ್‌, ಪಾಲಿಕೆ ಸದಸ್ಯ ಎ.ಸಿ. ವಿನಯ್‌ರಾಜ್‌, ಕಾಂಗ್ರೆಸ್‌ ಮುಖಂಡರಾದ ಟಿ.ಎಂ. ಶಾಹೀದ್‌, ಮಿಥುನ್‌ ರೈ ಇದ್ದರು.