ಬಜಪೆ: ದೇವಸ್ಥಾನದ ಕಾಣಿಕೆ ಹುಂಡಿ ಹಣ ಕಳವು ಪ್ರಕರಣ – ಅಂತಾರಾಜ್ಯ ಆರೋಪಿಯ ಬಂಧನ
ಬಜಪೆ: ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೊಲೀಸರು ಅಂತಾರಾಜ್ಯ ಆರೋಪಿತನನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ದಿನಾಂಕ 03-03-2026 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಬಾಗಿಲನ್ನು ಮುರಿದು ಒಳನುಗ್ಗಿದ ಆರೋಪಿಯು, ಮೂರು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ರೂ. 25,000/- ಹಣವನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿಯಾದ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25), ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿಯನ್ನು 31-03-2026 ರಂದು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ, ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಕಳವಾಗಿದ್ದ ಕಾಣಿಕೆ ಹುಂಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ಆರೋಪಿತನು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಕಳವು ಪ್ರಕರಣದಲ್ಲಿಯೂ ಭಾಗಿಯಾಗಿರುವುದು ತಿಳಿದುಬಂದಿದೆ. ಅಲ್ಲದೇ, ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ನಡೆದ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಕಳವು ಪ್ರಕರಣದಲ್ಲಿಯೂ ಆತ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತನು ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳ್ಳತನ ನಡೆಸಿ ಮತ್ತೆ ರಾಜ್ಯಕ್ಕೆ ತೆರಳಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಹೊಂದಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ ಅವರ ನೇತೃತ್ವದಲ್ಲಿ ಕ್ರೈಂ ಸಿಬ್ಬಂದಿಗಳಾದ ನೂತನ್, ರಾಜೇಶ್ ಮತ್ತು ಪ್ರಕಾಶ್ ಆರೋಪಿತನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.













