ಮಂಗಳೂರು: ಅನಧಿಕೃತ ಕ್ಲಿನಿಕ್‍ಗೆ ಆರೋಗ್ಯ ಇಲಾಖೆ ದಾಳಿ, ಬೀಗಮುದ್ರೆ
ಮಂಗಳೂರು: ಅನಧಿಕೃತ ರಕ್ತ ಪರೀಕ್ಷೆ ಕೇಂದ್ರದ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಲ್ಯಾಬ್ ಗೆ ಬೀಗ ಜಡಿದಿದ್ದಾರೆ.
ಶರತ್ ಶೆಟ್ಟಿ ಎಂಬವರು ವಿಟ್ಲದಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಇಲ್ಲಿ ಅಃಅ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಲ್ಯಾಬ್‍ನಲ್ಲಿ ಬಂದಿರುವ ವರದಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ, ಬೇರೆಡೆ ರಕ್ತ ಪರೀಕ್ಷೆ ಮಾಡಿಸಿಕೊಂಡಿರುತ್ತಾರೆ. ಅಲ್ಲದೆ, ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಂಸ್ಥೆಯವರು ಸಹಿ ಮಾಡದೆ ವರದಿ ನೀಡಿದ್ದು, ಆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದೂರು ನೀಡಿದ್ದರು.
ಇದರನ್ವಯ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ/ ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿ ಇವರಿಗೆ ಜಂಟಿಯಾಗಿ ತನಿಖೆ ನಡೆಸಲು ಆದೇಶಿಸಲಾಗಿತ್ತು. ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿರುತ್ತಾರೆ.
ಈ ವರದಿಯ ಆಧಾರದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಆದೇಶದಂತೆ ಶನಿವಾರ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಅಧಿಕಾರಿ ಡಾ.ದೀಪಾ ಪ್ರಭು ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಮತ್ತು ಸಿಬ್ಬಂದಿಗಳು ವಿಟ್ಲ ಬದನಾಜೆ ರಕ್ಷಾ ಕ್ಲಿನಿಕ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅನಧಿಕೃತವಾಗಿ ಕೆ.ಪಿ.ಎಂ.ಇ.ಎ ನೋಂದಣಿ ಇಲ್ಲದೇ ಕ್ಲಿನಿಕ್ ನಡೆಸುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ರಕ್ಷಾ ಕ್ಲಿನಿಕ್‍ಗೆ ಬೀಗಮುದ್ರೆ ಮಾಡಿ ಮುಚ್ಚಲಾಗಿರುತ್ತದೆ. ವಿಟ್ಲ ಪೆÇೀಲಿಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಸಹಕರಿಸಿರುತ್ತಾರೆ.
ಮುಂದಿನ ದಿನಗಳಲ್ಲಿ ಕೆ.ಪಿ.ಎಂ.ಇ.ಎ ಕಾಯ್ದೆಯಡಿಯಲ್ಲಿ ಇಂತಹ ಅನಧಿಕೃತವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಜಿಲ್ಲೆಯಲ್ಲಿ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.













