ಲೋಕಸಭೆ ಚುನಾವಣೆ :ಚಿಕ್ಕಮಗಳೂರಿನಿಂದಲೇ ಸ್ಪರ್ಧೆ, ತುಮಕೂರಿಗೆ ಬರಲ್ಲ: ಶೋಭಾ ಕರಂದ್ಲಾಜೆ

Spread the love

ಲೋಕಸಭೆ ಚುನಾವಣೆ :ಚಿಕ್ಕಮಗಳೂರಿನಿಂದಲೇ ಸ್ಪರ್ಧೆ, ತುಮಕೂರಿಗೆ ಬರಲ್ಲ: ಶೋಭಾ ಕರಂದ್ಲಾಜೆ
 

ತುಮಕೂರು: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು- ಉಡುಪಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ’ ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ಇಲ್ಲಿಗೆ ಬಂದು ಸ್ಪರ್ಧೆ ಮಾಡುವುದಿಲ್ಲ’ ಎಂದರು.

‘ಕಳೆದ ಬಾರಿ ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆ ಆಗಿದ್ದು, ಈ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಕ್ಷೇತ್ರ ಬದಲಿಸುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಬರ ಪರಿಹಾರದ ನೆರವು ಬೇಕಾದರೆ ರಾಜ್ಯ- ಕೇಂದ್ರ ಸರ್ಕಾರದ ಹೆಸರಿನಲ್ಲಿ ಜಂಟಿಯಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಖಾತೆ ತೆರೆದ ತಕ್ಷಣವೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಯಾಗುತ್ತಿರುವ ಯಾವುದೇ ಯೋಜನೆಗಳಲ್ಲಿ ಅನುದಾನ ಸಿಗಬೇಕಾದರೆ ಇನ್ನು ಮುಂದೆ ಜಂಟಿ ಖಾತೆ ತೆರೆಯುವುದು ಕಡ್ಡಾಯ. ಈ ಬಗ್ಗೆ ನೀತಿ ಆಯೋಗ ಸ್ಪಷ್ಟವಾಗಿ ಸೂಚನೆ ನೀಡಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೂ ಸಾಕಷ್ಟು ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಹಣ ನೀಡುವುದಿಲ್ಲ. ಕೇಂದ್ರದ ಹಣ ವೆಚ್ಚವಾಗಿದ್ದರೂ ಹಣ ಕೊಡದೆ ರಾಜ್ಯ ಸತಾಯಿಸುತ್ತದೆ. ಇದರಿಂದ ಯೋಜನೆ ಜಾರಿ ಮಾಡುವುದು ಕಷ್ಟಕರವಾಗುತ್ತದೆ. ಹಾಗಾಗಿ ಜಂಟಿ ಖಾತೆ ಕಡ್ಡಾಯ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ, ಅನುದಾನ ನೀಡುವ ವಿಚಾರದಲ್ಲಿ ಯಾವುದೇ ರಾಜ್ಯಕ್ಕೂ ತಾರತಮ್ಯ ಮಾಡುತ್ತಿಲ್ಲ. ಇದರಲ್ಲಿ ರಾಜಕೀಯ ಬೆರೆಸುತ್ತಿಲ್ಲ. ಎಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದಿದರೆ, ದೇಶ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಹಾಗಾಗಿ ರಾಜ್ಯಕ್ಕೆ ಯಾವುದೇ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಖಾದ್ಯ ತೈಲ ಆಮದು ಅನಿವಾರ್ಯ: ವಿದೇಶಗಳಿಂದ ಖಾದ್ಯ ತೈಲ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ದೇಶದ ಒಟ್ಟು ಖಾದ್ಯ ತೈಲ ಬೇಡಿಕೆಯಲ್ಲಿ ಶೇ 20ರಷ್ಟು ನಮ್ಮಲ್ಲಿ ಉತ್ಪಾದನೆ ಆಗುತ್ತಿದೆ. ಶೇ 80ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಖಾದ್ಯ ತೈಲ ಆಮದು ನಿಲ್ಲಿಸುವಂತೆ ರೈತರು, ಸಚಿವರು ಮಾಡಿದ ಒತ್ತಾಯಕ್ಕೆ ಸ್ಪಂದಿಸಿದ ಅವರು, ‘ದೇಶದಲ್ಲಿ ಹಿಂದೆ 12.50 ಲಕ್ಷ ಎಕರೆ ಪ್ರದೇಶದಲ್ಲಿ ಎಣ್ಣೆ ಕಾಳು ಬೆಳೆಯಲಾಗುತಿತ್ತು. ಈಗ 3.50 ಲಕ್ಷ ಎಕರೆಗಳಿಗೆ ಕುಸಿದಿದೆ. ಬೇಡಿಕೆ ಪೂರೈಸಲು ಆಮದು ಅನಿವಾರ್ಯವಾಗಿದೆ. ಉತ್ಪಾದನೆ ಹೆಚ್ಚಾದರೆ ಆಮದು ಕಡಿಮೆ ಮಾಡಬಹುದು’ ಎಂದರು


Spread the love