ವಿಟ್ಲ: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ವಿಟ್ಲ: ಬಾವಿಗೆ ರಿಂಗ್ ಹಾಕುವಾಗ ಆಮ್ಲಜನಕ ಸಿಗದೆ ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ.
ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ (40 ವ) ಮತ್ತು ಮಲಾರ್ ನಿವಾಸಿ ಆಲಿ (24 ವ) ಎಂದು ಗುರುತಿಸಲಾಗಿದೆ.
ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದರು. ಬಾವಿಗೆ ಇಳಿದವನು ಮೇಲಕ್ಕೆ ಬಾರದೆ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದು, ಅವರೂ ಆಮ್ಲಜನಕದ ಕೊರತೆಯಾಗಿ ಮೃತಪಟ್ಟಿದ್ದಾರೆ.
ಬಳಿಕ ಸ್ಥಳೀಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರು ಎರಡು ಶವಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ಇಬ್ರಾಹಿಂ ಅವರು ಕಳೆದ ಇಪ್ಪತ್ತು ವರ್ಷದಿಂದ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು ಎಂದು ತಿಳಿದು ಬಂದಿದೆ.













