ಶ್ರದ್ದಾ ಭಕ್ತಿಯಿಂದ ನೆರೆದ ಜನ ಸಾಗರದೊಂದಿಗೆ ಸಸಿಹಿತ್ಲು ಶ್ರೀ ಭಗವತೀ ದೇವಿಗೆ ಅದ್ದೂರಿಯ ಬ್ರಹ್ಮಕಲಶೋತ್ಸವ
ಮುಂಬಯಿ: ನಾನು ನೂರಾರು ಕಡೆ ಬ್ರಹ್ಮಕಲಶೋತ್ಸವದ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ಹೊಂದಿದ್ದೆ. ಆದರೆ ಇಲ್ಲಿ ಯಾವುದೇ ರೀತಿಯ ಕುಂದು ಕೊರತೆ ಇಲ್ಲದೆ ಅದ್ಭುತವಾದ ರೀತಿಯಲ್ಲಿ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗಿದೆ. ಎಲ್ಲಾ ಸಮಾಜ ಬಾಂಧವರು ಜೊತೆಯಾಗಿ ತೀಯಾ ಸಮಾಜದ ನೇತೃತ್ವದ ಈ ಭಗವತೀ ದೇವಸ್ಥಾನದಲ್ಲಿ ಭಾಗಿಯಾಗಿದ್ದು ಇದಕ್ಕೆ ಮಿಗಿಲಾದ ಸಾಮರಸ್ಯ ಇನ್ನೊಂದಿಲ್ಲ ಎಂದು ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನುಡಿದರು.


ಮಾ. 8 ರಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ನಡೆದ ಐದು ದಿನಗಳ ಬ್ರಹ್ಮಕಲಶೋತ್ಸವ ಸಮಾರಂಭದ ಕೊನೆಯ ದಿನದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಾನು ರಾಜಕೀಯವಾಗಿ ಜವಾಬ್ದಾರಿಯಿಂದ ಮುಕ್ತನಾಗಬೇಕೆಂದಿದ್ದೇನೆ, ಅದೇ ರೀತಿ ಸಾರ್ವಜನಿಕವಾಗಿ ಕೂಡ ಮುಕ್ತವಾಗಬೇಕೆಂಬ ಆಲೋಚನೆಯಲ್ಲಿದ್ದಾಗ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ನನಗೆ ಬಹಳ ಆತ್ಮೀಯರಾದ ತಂಡವು ನನ್ನನ್ನು ಪ್ರೀತಿಯಿಂದ ಸಂಪರ್ಕಿಸಿದಾಗ ನಾನು ಅದಕ್ಕೆ ಒಪ್ಪಿದೆ. ದೇವಸ್ಥಾನದ ಪ್ರತಿಯೊಬ್ಬ ಕಾರ್ಯಕರ್ತರ ಭಕ್ತಿಪೂರ್ವಕ ಸೇವೆ ಅದ್ದೂರಿಯ ಬ್ರಹ್ಮಕಲಶೋತ್ಸವಕ್ಕೆ ಕಾರಣವಾಗಿದೆ. ಆದುದರಿಂದ ನನಗೆ ಸಿಕ್ಕಿದ ಕಿರೀಟ ಸನ್ಮಾನವನ್ನು ಹಗಲು ರಾತ್ರಿ ಇಲ್ಲಿ ಕೆಲಸ ಮಾಡಿದ ಎಲ್ಲರಿಗೂ ಅರ್ಪಿಸುತ್ತಿದ್ದೇನೆ. ಭಗವತೀ ಶಕ್ತಿಯು ಮಾತೃಶಕ್ತಿಯ ಸ್ವರೂಪಿಣಿ. ಭಗವತಿಯ ಸೇವೆ ಮಾಡುವ ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಇಲ್ಲಿನ ಮುಂದಿನ ಅಭಿವೃದ್ದಿ ಕಾರ್ಯಕ್ಕೂ ನನ್ನಿಂದಾಗುವ ಸಹಾಯ ನಾನು ಮಾಡಬಲ್ಲೆ ಎಂದರು.
ಆಡಳಿತ ಮೊಕ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಚಡ ಮಾತನಾಡುತ್ತಾ ಆರು ತಿಂಗಳ ಹಿಂದೆ ಭಗವತಿಯ ಅನುಮತಿಯಂತೆ ಕಾರ್ನವರು ನನಗೆ ಜವಾಬ್ದಾರಿಯನ್ನು ವಹಿಸಿ ಕೊಟ್ಟಿದ್ದರು. ನನ್ನ ಶಾಲಾ ಜೀವನದಲ್ಲಿ ಪ್ರತಿದಿನ ಮೂರು ಬಾರಿಯಾದರೂ ದೇವಸ್ಥಾನಕ್ಕೆ ಬರುತ್ತಿದ್ದೆ. ದೇವಸ್ಥಾನವು ಜೀರ್ಣೋದ್ದಾರವಾಗಬೇಕಾಗಿದ್ದು ಅದಕ್ಕೆ ಸರಿಯಾದ ವ್ಯಕ್ತಿಗಳನ್ನು ನೇಮಿಸಿ ಅಲ್ಪಾವಧಿಯಲ್ಲೇ ಎಲ್ಲ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಇದಕ್ಕೆ ನಳಿನ್ ಕುಮಾರ್ ಕಟೀಲ್, ವೇದಪ್ರಕಾಶ್ ಶ್ರೀಯಾನ್ ರಂತ ಅನೇಕರ ಪ್ರೋತ್ಸಾಹವೂ ಸಿಕ್ಕಿದ್ದು ಮಾತೆ ಭಗವತಿಯ ಇಚ್ಚೆಯಂತೆ ಎಲ್ಲಾ ಕಾರ್ಯವು ಯಶಸ್ವಿಯಾಗಿದೆ ಎಂದರು.

ಮಂಗಳೂರಿನ ಶಾಸಕರಾದ ಡಾ. ಭರತ್ ಶೆಟ್ಟಿ ವೈ, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ , ದೇವಿ ಪ್ರಸಾದ್ ಶೆಟ್ಟಿ ಐಕಳ ಭಾವ, ಶ್ರೀ ಭಗವತೀ ದೇವಸ್ಥಾನ ಕಲೀನದ ಆಡಳಿತ ಮೊಕ್ತೇಸರ ಕುಮಾರ ಸ್ವಾಮಿ, ಉಳ್ಳಾಲ ಚಿರುಂಭ ಭಗವತೀ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಉಲ್ಲಾಲ್, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಸೂರಜ್ ಬಂಗೇರ ಮುಂಬೈ, ಚಕ್ರವರ್ತಿ ಸೂಲಿಬೆಲೆ, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಚಡ, ದೇವಸ್ಥಾನದ ಸಮಿತಿಯ ಕಾರ್ಯಾಧ್ಯಕ್ಷ ವಾಮನ ಇಡ್ಯಾ, ಮುಂಬಯಿ ಸಮಿತಿಯ ಅಧ್ಯಕ್ಷ ವೇದಪ್ರಕಾಶ್ ಎಂ. ಶ್ರೀಯಾನ್, ಉಪಾಧ್ಯಕ್ಷ ವಿಶ್ವನಾಥ ಬೆಳ್ಚಡ ಪಂದುಬೆಟ್ಟು, ಆದಿ ಉಡುಪಿ, ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಸುಕುಮಾರ ಯು, ದಿನೇಶ್ ಧರ್ಮಸ್ಥಳ, ಮೋಹನ್ ಕೋಟ್ಯಾನ್ ಮುಂಬಯಿ, ಪದ್ಮನಾಭ ಬಂಗೇರ, ಶಾಸಕ ಯಶ್ಪಾಲ್ ಸುವರ್ಣ, ವೇದಮೂರ್ತಿ ಶ್ರೀಪತಿ ಭಟ್ ಹೊಯ್ಗೆಗುಡ್ಡೆ, ಸೋಂದ ಭಾಸ್ಕರ ಭಟ್, ಸದಾಶಿವ ಶೆಟ್ಟಿ ಮುರ ವೇದಿಕೆಯಲ್ಲಿ ಉಪಸ್ಥಿದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಮುಂಬಯಿಯ ಖ್ಯಾತ ಉದ್ಯಮಿ, ಮಹಾದಾನಿ ಸದಾಶಿವ ಶೆಟ್ಟಿ ಕನ್ಯಾನ, ಸಂಸದರಾದ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಡಾ. ಯು. ಟಿ. ಖಾದರ್, ಸದಾಶಿವ ಉಳ್ಳಾಲ್ ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪಮನೆ ಕಟೀಲು ಚಂದ್ರಶೇಖರ ಬೆಳ್ಚಡ ಮತ್ತು ಅವರ ಸುಪುತ್ರ ಮೇಹುಲ್ ಚಂದ್ರಶೇಖರ ಬೆಳ್ಚಡ, ವಾಮನ ಇಡ್ಯಾ ದಂಪತಿ, ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ದಂಪತಿ, ಮಹಾ ದಾನಿಗಳನ್ನು, ಆಡಳಿತ ಸಮಿತಿ, ಉಪಸಮಿತಿಗಳ ಇತರ ಪ್ರಮುಖರನ್ನು ಸನ್ಮಾನಿಸಲಾಯಿತು.

ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿಯವರು ಮಾತನಾಡುತ್ತಾ ಇಬ್ಬರು ಮಹಾದಾನಿಗಳು ವಿದೇಶಗಳಲ್ಲಿದ್ದು ಅವರ ಕೊಡುಗೆಯನ್ನು ಸ್ಮರಿಸುತ್ತ ಮುಂದಿನ ನಾಲ್ಕು ವರ್ಷಗಳಲ್ಲಿ ದೇವಸ್ಥಾನದ ಹಾಗೂ ಪರಿಸರದ ಕೆಲಸ ಹಾಗೂ ದೇವಸ್ಥಾನದ ಇತರ ಕಾರ್ಯಗಳು ಮಾತೆಯ ಅನುಗ್ರಹದಿಂದ ದಾನಿಗಳ ಹಾಗೂ ಎಲ್ಲಾ ಕಾರ್ಯಕರ್ತರ ಸಹಾಯದಿಂದ ಸಂಪೂರ್ಣಗೊಳ್ಳಲಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮಾತೆ ಭಗವತಿ ಅನುಗ್ರಹಿಸಲಿ ಎಂದರು.
ದೇವಸ್ಥಾನದ ಜತೆ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮವನ್ನು ನಿರ್ವಹಿಸಿದರು.
ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥನೆ ಮಾಡಿದ್ದು, ದೇವಸ್ಥಾನದ ಸಮಿತಿಯ ಕಾರ್ಯಾಧ್ಯಕ್ಷ ವಾಮನ ಇಡ್ಯಾ ಸ್ವಾಗತಿಸಿದರು.
ಬೆಳಿಗ್ಗೆ ಚಂಡಿಕಾ ಯಾಗ ನಂತರ ವೇದಮೂರ್ತಿ ಶ್ರೀಪತಿ ಭಟ್ ಹೊಯ್ಗೆಗುಡ್ಡೆ ಮತ್ತು ವೇದಮೂರ್ತಟ್ ಕೃಷ್ಣಮೂರ್ತಿ ಭಟ್ ಹೊಯ್ಗೆಗುಡ್ಡೆ ಇವರ ನೇತೃತ್ವದಲ್ಲಿ ವೆಂಕಟೇಶ ತಂತ್ರಿ ಇವರ ಮಾರ್ಗದರ್ಶನದಲಿ ಬ್ರಹ್ಮಕಲಶಾಭಿಷೇಕ ನಡೆಯಿತು. ನಂತರ ಮಹಾಪೂಜೆ, ಪಲ್ಲಪೂಜೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು ಸಂಜೆ ದೀಪಾರಾಧನೆ ಭಂಡಾರ ನಿರ್ಗಮನ. ಮಧ್ಯಾಹ್ನ ಶಿವಪ್ರಣಮ್ (ರಿ) ಮೂಲ್ಕಿ ಸ್ಕೂಲ್ ಆಫ್ ಡ್ಯಾನ್ಸ್ ಇವರಿಂದ ನೃತ್ಯ ವೈಭವ ನಡೆಯಿತು. ಸಂಜೆ ಸಭಾಕಾರ್ಯಕ್ರಮದ ನಂತರ ಸಮುದ್ರ ತೀರದಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆ ಇವರಿಂದ ಗಂಗೆಗೆ ನುಡಿ ನಮನ ನಡೆಯಿತು, ರಾತ್ರಿ ಅದ್ದೂರಿಯ ವೈಭವದ ಗಂಗಾರತಿ ನಡೆಯಿತು. ಆ ನಂತರ ಗಂಗಾ ಗಾಯನ – ಕಲಾಸಿರಿ ಬಳಗ ಮಂಗಳೂರು ಇದರ ಖ್ಯಾತ ಗಾಯಕರಿಂದ “ಭಕ್ತಿ ಭಾವ ಗಾನ” ನಡೆಯಿತು.












