ಸಮಾನ ನಾಗರೀಕ ಸಂಹಿತೆಯ ಕಾನೂನು ಬೆಂಬಲಿಸಿ: ಸುಲೋಚನಾ ಭಟ್

Spread the love

ಸಮಾನ ನಾಗರೀಕ ಸಂಹಿತೆಯ ಕಾನೂನು ಬೆಂಬಲಿಸಿ: ಸುಲೋಚನಾ ಭಟ್
ಮಂಗಳೂರು: ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಅದರ ಹಿಂದಿರುವ ಹಲಾಲ ಮತ್ತು ಹಿಂದೂ ಮೈತ್ರಿಕರಾರು, ಕ್ರಿಶ್ಚಿಯನ್‍ರಲ್ಲಿ ಚಾಲ್ತಿಯಲ್ಲಿರುವ ವಿಚ್ಚೇದನ ಕಾಯ್ದೆ ಹೀಗೆ ಹಲವು ರೀತಿಯ ಸುಧಾರಣಾ ಕಾಯ್ದೆಗಳಿಗಾಗಿ ಕೇಂದ್ರ ಸರಕಾರದ ಅಭಿಪ್ರಾಯ ಕೇಳಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಫಿದವತ್ ಸಲ್ಲಿಸಿದ ಪರಿಣಾಮ ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಕಾನೂನು ಜಾರಿ ಮಾಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಒಂದು ದೇಶಕ್ಕೆ ಒಂದೇ ಕಾನೂನು ಇರಬೇಕು. ಇಲ್ಲಿ ಯಾವುದೇ ಮತ, ಧರ್ಮ ಸಮುದಾಯಗಳ ಹಿನ್ನೆಲೆಯಲ್ಲಿ ಕಾನೂನುಗಳಿಗೆ ಅವಕಾಶವಿರಬಾರದು. ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್‍ರವರು ಪರಿಚ್ಚೇದನ 44ರಲ್ಲಿ ಉಲ್ಲೇಖಿಸಿದಂತೆ ಸಂವಿಧಾನ ಆಶಯಗಳಿಗೆ ಅನುಗುಣವಾಗಿ ಸಮಾನ ನಾಗರೀಕ ಸಂಹಿತೆ ಇರಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾನೂನು ಆಯೋಗದ ಮೂಲಕ ಮೊದಲ ಬಾರಿಗೆ ನಾಗರೀಕರ, ಜನ ಸಾಮಾನ್ಯರ ಅಭಿಪ್ರಾಯ ಕೇಳಿರುವುದು ಸಂಚಲನವನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಪೂರ್ಣ ಚರ್ಚೆಯಾಗಬೇಕು.
ಆದರೆ ಇಂದು ನಮ್ಮ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ದ.ಕ ಜಿಲ್ಲೆಯ ಹಂಗಾಮಿ ಅಧ್ಯಕ್ಷರು ಪುರುಷರ ಲೈಂಗಿಕ ಆಸಕ್ತಿ ಶಮನ ಮಾಡಲು ಬಹುಪತ್ನಿತ್ವ ಆಗತ್ಯವಾಗಿದೆ ಎನ್ನುವ ಮೂಲಕ ಚರ್ಚೆಗೆ ಅಹಿತಕರ ವಾತಾವರಣವನ್ನು ಸೃಷ್ಠಿಸುತ್ತಿದ್ದಾರೆ. ಹೆಣ್ಣು ಕೇವಲ ಲೈಂಗಿಕ ತ್ರಷೆಯನ್ನು ತೀರಿಸಲು ಇರುವ ಭಾವನೆಯೇ ಇಲ್ಲದ, ಸ್ವಂತ ವ್ಯಕ್ತಿತ್ವವೇ ಇಲ್ಲದ ಒಂದು ಪ್ರಾಣಿ ಎಂದು ಬಿಂಬಿಸುತ್ತಿದ್ದಾರೆ. ಲೈಂಗಿಕ ತೃಪ್ತಿಗೋಸ್ಕರ ಗಂಡಸರು ಎಷ್ಟು ಬೇಕಾದರೂ ಮದುವೆ ಆಗಬಹುದು ಎನ್ನುವ ಮೂಲಕ ಸಮಸ್ತ ಮಹಿಳಾ ಸಮುದಾಯಕ್ಕೆ ಘೋರ ಅವಮಾನ ಮಾಡುತ್ತಿದ್ದಾರೆ. ಮಹಿಳೆಯರನ್ನು ಗೌರವಯುತವಾಗಿ ರಕ್ಷಿಸಬೇಕು, ಘೋಷಿಸಬೇಕು ಎನ್ನುವ ಕುರಾನ್ ತತ್ವವನ್ನು ತಮಗೆ ಬೇಕಾದ ರೀತಿ ಅರ್ಥೈಸಿಕೊಳ್ಳುತಿದ್ದಾರೆ. ಅವರ ಹೇಳಿಕೆಯನ್ನ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನೂ ಇದುವರೆಗೆ ಟೀಕಿಸದಿರುವುದು ಕಾಂಗ್ರೆಸ್‍ನ ಹೀನ ಸಂಸ್ಕ್ರತಿಯನ್ನ ಬಿಂಬಿಸುತ್ತಿದೆ.
ತ್ರಿವಳಿ ತಲಾಖ್ ಮತ್ತು ಅದರ ಹಿಂದಿರುವ ಹಲಾಲದಂತ ಅಮಾನವೀಯ ಪದ್ದತಿಯಿಂದ ಅದೆಷ್ಟು ಮುಸ್ಲಿಂ ಹೆಣ್ಣು ಮಕ್ಕಳು ನಿತ್ಯ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಶಾಯಾರಾ ಬಾನು, ಜೈಪುರದ ಅಪ್ತೀನ್ ರೆಹಮಾನ್, ಪುಣೆಯ ಪರ್ಷಿಯಾ ಬಾಗ್ವಾನ್‍ರವರ ನೋವಿನ ಕತೆಯಲ್ಲಿದೆ. ಇವರೆಲ್ಲಾ ಇಂದು ಕೋರ್ಟಿನ ಮೆಟ್ಟಿಲೇರಿದ್ದಾರೆ. ದೇಶದ 7 ವಿವಿಧ ಮಹಿಳಾ ಸಂಘಟನೆಗಳು ತಾವಾಗಿಯೇ ಇಂದು ಮಧ್ಯ ಪ್ರವೇಶಿಸುವುದನ್ನು ಕಂಡಾಗ ತೀವ್ರತೆಯ ಅರಿವು ಅಗುತ್ತದೆ. “ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ್” ನಡೆಸಿರುವ ಸಮೀಕ್ಷೆ ಪ್ರಕಾರ ಶೇಕಡಾ 92 ಮಹಿಳೆಯರು ತಲಾಖ್ ರದ್ದತಿಯನ್ನು ಬಯಸುತ್ತಾರೆ. ಶೇ.97ರಷ್ಟು ಮಹಿಳೆಯರು. ತನ್ನ ಗಂಡನ 2ನೇ ವಿವಾಹವನ್ನು ಒಪ್ಪುವುದಿಲ್ಲ. ಶೇ.83ರಷ್ಟು ಮಹಿಳೆಯರು ಅನಕ್ಷರಸ್ಥರಾಗಿದ್ದು ತಮ್ಮ ಮತ್ತು ಮಕ್ಕಳ ಪೋಷಣೆಗಾಗಿ ನಿರಂತರ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಮುಸ್ಲಿಂ ಮಹಿಳಾ ಹೋರಾಟಗಾರ್ತಿ ನಾ.ಜಿ.ಅನ್ನಾರಿ ಹೇಳುವ ಪ್ರಕಾರ ಮುಸ್ಲಿಂ ವೈಯುಕ್ತಿಕ ಕಾನೂನು ಶರಿಯತ್‍ನಿಂದ ಎಂದೂ ಮಹಿಳೆಯರ ಮೇಲಾದ ದೌರ್ಜನ್ಯ, ಅತ್ಯಾಚಾರ ನಡೆದಾಗ ನ್ಯಾಯ ಸಿಗುವುದಿಲ್ಲ ಬದಲಿಗೆ ಪುರುಷರ ದಬ್ಬಾಳಿಕೆಯನ್ನು ಪೋಷಣೆ ಮಾಡುತ್ತಿದೆ. ತನ್ನ ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ತಿರುಚಲಾಗುತ್ತಿದೆ ಎಂದು ಅಪಾದಿಸುತ್ತಾರೆ.
ಮುಸ್ಲಿಂ ರಾಷ್ಟ್ರಗಳಾದ ಪಾಕ್, ಬಾಂಗ್ಲಾದಲ್ಲ್ಲಿ ತಲಾಖ್ ಪದ್ದತಿ ಇಲ್ಲ. ಹಾಗಾಗಿ ನಮ್ಮ ದೇಶದಲ್ಲೂ ಒಂದು ಆರೋಗ್ಯ ಪೂರ್ಣ ಚರ್ಚೆಯಾಗಬೇಕು. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಸ್ಲಿಂ ಮಹಿಳೆಯರಿಗೂ ಸಂಪೂರ್ಣ ಸುರಕ್ಷತೆಯ ಬದುಕನ್ನು ನೀಡುವ ನಿಟ್ಟಿನಲ್ಲಿ ದೇಶದ ಜನತೆಯಲ್ಲಿ ಸಮಾನ ನಾಗರೀಕ ಸಂಹಿತೆಯ ಚರ್ಚೆಯ ಅವಶ್ಯಕತೆಯನ್ನು ಮುಂದಿಟ್ಟಿದ್ದಾರೆ. ರಾಷ್ಟೀಯ ಕಾನೂನು ಆಯೋಗ 16 ಪ್ರಶ್ನೆಗಳನ್ನು ಈ ನಿಟ್ಟಿನಲ್ಲಿ ಸಿದ್ದಪಡಿಸಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯವನ್ನು ನೀಡುವ ಮೂಲಕ ಮುಸ್ಲಿಂ ಮಹಿಳೆಯರ ವಿಕಾಸಕ್ಕೆ ಅವಕಾಶವನ್ನು ನೀಡೋಣ ಎಂದು ಸುಲೋಚನಾ ಭಟ್ ಬಿಜೆಪಿ ರಾಜ್ಯ ಸಹವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೆಳಗಿನ ವಿಳಾಸಕ್ಕೆ ತಮ್ಮ ಅಭಿಪ್ರಾಯವನ್ನು ನೀಡಬೇಕಾಗಿ ವಿನಂತಿ.
ಭಾರತೀಯ ಕಾನೂನು ಆಯೋಗ,
14ನೇ ಮಹಡಿ, ಎಚ್.ಟಿ.ಹೌಸ್,
ಕಸ್ತೂರಬಾ ಗಾಂಧಿ ಮಾರ್ಗ,
ಹೊಸದಿಲ್ಲಿ-110 001


Spread the love