ಸರಕಾರಗಳು ಆಲ್ಕೋಹಾಲಿನ ಆರ್ಥಿಕ ವ್ಯವಸ್ಥೆ ನಂಬಿರುವುದು ಸಮಾಜದ ಅವ್ಯವಸ್ಥೆಗೆ ಕಾರಣ – ಪುತ್ತಿಗೆ ಸ್ವಾಮೀಜಿ

Spread the love

ಸರಕಾರಗಳು ಆಲ್ಕೋಹಾಲಿನ ಆರ್ಥಿಕ ವ್ಯವಸ್ಥೆ ನಂಬಿರುವುದು ಸಮಾಜದ ಅವ್ಯವಸ್ಥೆಗೆ ಕಾರಣ – ಪುತ್ತಿಗೆ ಸ್ವಾಮೀಜಿ

ಉಡುಪಿ: ಸರಕಾರ, ಸಮಾಜ ಹಾಲಿನ ಆರ್ಥಿಕ ವ್ಯವಸ್ಥೆ ಬದಲು ಆಲ್ಕೋಹಾಲಿನ ಆರ್ಥಿಕ ವ್ಯವಸ್ಥೆಯನ್ನು ನಂಬಿದ್ದೇ ಇಂದಿನೆಲ್ಲಾ ಅನರ್ಥ, ಅವ್ಯವಸ್ಥೆಗೆ ಕಾರಣ ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಬಿ. ಸಿ. ಟ್ರಸ್ಟ್) ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಗಾಂಧಿ ಸ್ಕೃತಿ ಅಂಗವಾಗಿ ಜೋಡುಕಟ್ಟೆಯಿಂದ ಜನಜಾಗೃತಿ ಜಾಥಾ ಬಳಿಕ ರಾಜಾಂಗಣದಲ್ಲಿ ನಡೆದ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮದ್ಯ ಸೃಷ್ಟಿಗೆ ಅನುಮತಿ ನೀಡದಿರುವ ಮೂಲಕ ಸರಕಾರ ಮದ್ಯಪಾನ ತಡೆಯುವ ನಿರ್ಧಾರ ಮಾಡಬೇಕು ಎಂದ ಪುತ್ತಿಗೆ ಶ್ರೀಪಾದರು, ಜಗತ್ತಿನ ರಾಷ್ಟ್ರಗಳಲ್ಲೇ ಭಾರತಕ್ಕೆ ಅಹಿಂಸೆಯಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಭಗವದ್ಗೀತೆಯಲ್ಲಿ ಶ್ರದ್ಧೆ, ನಂಬಿಕೆಯಿಟ್ಟು ಅಹಿಂಸೆಯ ಸ್ಫೂರ್ತಿ ಪಡೆದಿದ್ದಾರೆ. ವೈದ್ಯರು ದೊಡ್ಡ ಹಿಂಸೆ ತಪ್ಪಿಸಲು ಕನಿಷ್ಠ ಹಿಂಸೆಯ ಧರ್ಮ ಪಾಲಿಸುವಂತೆ ಜಗತ್ತಿನ ಶಾಂತಿಗಾಗಿ ಕನಿಷ್ಠ ಹಿಂಸೆ ಪ್ರತಿಪಾದಿಸಿದ ಶ್ರೀಕೃಷ್ಣ ಮಹಾ ಹಿಂಸೆ ತಪ್ಪಿಸಿದ್ದಾನೆ ಎಂದರು.

ಧಾರ್ಮಿಕ ಚಿಂತಕ ದಾಮೋದರ ಶರ್ಮಾ ಬಾರ್ಕೂರು ದಿಕ್ಸೂಚಿ ಮಾತುಗಳನ್ನಾಡಿ, ಬಿದ್ದವರನ್ನು ಎಬ್ಬಿಸಿ ಕೈಹಿಡಿದು ನಿನ್ನ ಬದುಕಿನ ದಾರಿ ಇದೆಂದು ಮದ್ಯ ವರ್ಜನ ಶಿಬಿರ ತೋರಿಸಿದೆ. ಬದುಕಿನಲ್ಲಿ ಗೆದ್ದವರಿಗಿಂತ ಸೋತವರ ಕಣ್ಣೀರು ಒರೆಸಿ ಕೈ ಹಿಡಿದು ಮುನ್ನಡೆಸೋದು ಸಾಧನೆ. ವ್ಯಕ್ತಿಗಳು ಯಾರೂ ಕೆಟ್ಟವರಲ್ಲ, ವ್ಯಸನಗಳು ಕೆಟ್ಟದು, ಅದರಿಂದ ಹೊರಬರಬೇಕು, ಸ್ವಸ್ಥ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಸ್ವಾಮೀಜಿ, ಎಸ್ಕೆಡಿಆರಿಪಿ ಬಿಸಿ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಮುಂಬೈ ಉದ್ಯಮಿ ಆರ್. ಬಿ. ಹೆಬ್ಬಳ್ಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ನವೀನ್ ಅಮೀನ್, ದುಗ್ಗೇ ಗೌಡ, ದಯಾನಂದ ಹೆಜಮಾಡಿ, ಉದಯ ಕುಮಾರ್ ಹೆಗ್ಡೆ, ಶಿವ ಕುಮಾರ್ ಅಂಬಲಪಾಡಿ, ನೀರೆ ಕೃಷ್ಣ ಶೆಟ್ಟಿ,ಉಮೇಶ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಸತ್ಯಾನಂದ ನಾಯಕ್ ಸನ್ಮಾನ ಪತ್ರ ವಾಚಿಸಿದರು. ದೀಪಾ ಅಜೆಕಾರು, ಆನಂದ ದೇವಾಡಿಗ ಮದ್ಯವರ್ಜನ ಶಿಬಿರದಿಂದ ತಮ್ಮ ಬದುಕಿನಲ್ಲಾದ ಬದಲಾವಣೆ ಬಗ್ಗೆ ತಿಳಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆನ್ಲೈನ್ ಸಂದೇಶ ನೀಡಿದರು.

ನೇತ್ರಾವತಿ ಅಂಬಾಗಿಲು ಪ್ರಾರ್ಥಿಸಿದರು. ನಾಗರಾಜ ಶೆಟ್ಟಿ ಸ್ವಾಗತಿಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಿವೇಕ್ ಪಾಯಸ್ ಪ್ರಾಸ್ತಾವಿಕ ಮಾತನಾಡಿದರು. ಅಲ್ಪಬೀನ ವೈಷ್ಣವ ಜನತೋ ಹಾಡಿದರು. ಗಣೇಶ್ ಆಚಾರ್ಯ ನಿರೂಪಿಸಿ, ನವೀನ್ಚಂದ್ರ ಶೆಟ್ಟಿ ರಟ್ಟಾಡಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments