ಸಿಎಂ ಆಗಲು ಅರ್ಜೆಂಟ್ ಇಲ್ಲ, 20 ವರ್ಷ ನಂತರ ನೋಡೋಣಾ – ಸ್ಪೀಕರ್ ಯು. ಟಿ. ಖಾದರ್

Spread the love

ಸಿಎಂ ಆಗಲು ಅರ್ಜೆಂಟ್ ಇಲ್ಲ, 20 ವರ್ಷ ನಂತರ ನೋಡೋಣಾ – ಸ್ಪೀಕರ್ ಯು. ಟಿ. ಖಾದರ್

ಮಂಗಳೂರು: ರಾಜಕಾರಣದಲ್ಲಿ ಸಿನಿಮೀಯ ಶೈಲಿಯ ಕಚ್ಚಾಟ, ದ್ವೇಷ ರಾಜಕಾರಣ ಸರಿಯಲ್ಲ. ಇಂತಹ ಕೃತ್ಯಗಳಿಂದಾಗಿಯೇ ಜನರಿಗೆ ಜನಪ್ರತಿನಿಧಿಗಳ ಮೇಲಿನ ಗೌರವ ಕಡಿಮೆಯಾಗಿದೆ. ಶಾಸಕರಾಗಿದ್ದುಕೊಂಡು ಒಬ್ಬರಿಗೊಬ್ಬರು ಪರಸ್ಪರ ಬೆದರಿಕೆ ಹಾಕುವುದು ತಪ್ಪು ನಡವಳಿಕೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಸುದ್ದಿಗೋಷ್ಠಿಯ ವೇಳೆ ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.

ಮುಖ್ಯಮಂತ್ರಿ ಹುದ್ದೆಗಾಗಿನ ಆಕಾಂಕ್ಷಿಗಳ ಪಟ್ಟಿಯಲ್ಲಿ ನೀವು ಇದ್ದೀರಾ ಎಂಬ ಪ್ರಶ್ನೆಗೆ, ಅಷ್ಟು ಅರ್ಜೆಂಟ್ ನನಗಿಲ್ಲ. ಇನ್ನೂ 20 ವರ್ಷ ಕಳೆಯಲಿ. ನನ್ನ ಕ್ಷೇತ್ರದಲ್ಲಿ ಮತ್ತೆ ನಾಲ್ಕು ಬಾರಿ ಗೆಲ್ಲಿಸಿ ಕಳುಹಿಸಲಿ ಎಂದು ಅವರು ಹೇಳಿದರು.

ತುಳುನಾಡಿನಲ್ಲಿ ಜಾತ್ರೆಗಳಲ್ಲಿ ಕೋಳಿ ಅಂಕಕ್ಕೆ ಅವಕಾಶ ನೀಡಬೇಕೆಂಬ ಆಗ್ರಹದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಈ ಬಗ್ಗೆ ದೀರ್ಘವಾದ ಚರ್ಚೆ ಆಗಿದೆ. ಜಾತ್ರೆಗಳಲ್ಲಿ ಕೋಳಿ ಅಂಕ ಇಲ್ಲಿನ ಸಂಪ್ರದಾಯ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ನಡೆಯುತ್ತಿದ್ದರೆ ಅದರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಂಘಟಕರೇ ಹೇಳುತ್ತಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ನಿಯಮತವಿತವಾಗಿ ವ್ಯವಸ್ಥಿತ ನಿಯಮಗಳನ್ನು ರೂಪಿಸುವ ಅಗತ್ಯವಿದೆ. ಈ ಬಗ್ಗೆ ಕಾನೂನು ಸಚಿವರು, ಸಲಹಾ ಮಂಡಳಿ ಜತೆ ಮಾತನಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ ಎಂದರು.

ಯಾರು ದ್ವೇಷ ಭಾಷಣ ಮಾಡುತ್ತಾರೆಯೋ ಅವರ ಮೇಲೆ ಕ್ರಮ ಆಗಬೇಕು. ದೇಶ ಬಲಿಷ್ಠವಾಗಬೇಕಾದರೆ ಪ್ರತಿಯೊಬ್ಬರು ತಾವು ಆಡುವ ಮಾತು, ಮಾಡುವ ಕೆಲಸದ ಬಗ್ಗೆ ನಿಗಾ ಇರಿಸಬೇಕು. ಕಾನೂನಿನಲ್ಲಿ ಲೋಪ ದೋಷ ಇದ್ದಲಿ ಅದರ ಬಗ್ಗೆ ಲಿಖಿತವಾಗಿ ನೀಡಿದರೆ ಅದನ್ನು ಸರಿಪಡಿಸಬಹುದು. ಅದು ಬಿಟ್ಟು ವಿನಾ ಕಾರಣ ವಿರೋಧಿಸುವುದು ಸರಿಯಲ್ಲ ಎಂದು ದ್ವೇಷ ಭಾಷಣ ತಡೆ ಕಾನೂನಿನ ಕುರಿತು ಬಿಜೆಪಿ ವಿರೋಧದ ಪ್ರಶ್ನೆಗೆ ಅವರು ಉತ್ತರಿಸಿದರು.

ಕೋಗಿಲು ಬಡಾವಣೆ ಪ್ರಕರಣ ಸರಕಾರಕ್ಕೆ ಸಂಬಂಧಿಸಿದ್ದು. ಸರಕಾರ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಸ್ಪೀಕರ್ ಆಗಿ ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.


Spread the love
Subscribe
Notify of

0 Comments
Inline Feedbacks
View all comments