ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ಮೂವರು ವಶಕ್ಕೆ; ಮಂಗಳೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ

Spread the love

 ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ಮೂವರು ವಶಕ್ಕೆ; ಮಂಗಳೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ
 

ಮಂಗಳೂರು: ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಮೂವರನ್ನು ಗುರುವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಉಳ್ಳಾಲ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಬಿ.ಕೆ. ರಾಜು ಮತ್ತು ಸರ್ವೆ ಸುಪರ್‌ವೈಸರ್ ಎಸ್. ಧನಶೇಖರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

ತನ್ನ ಬಾಕಿ ಇರುವ ಸಂಬಳದ ಬಿಲ್ ಮಾಡಿಕೊಡಲು ಮತ್ತು ತನ್ನನ್ನು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಸಿಕೊಡಲು ಕೃಷ್ಣಮೂರ್ತಿ 50,000 ರೂ, ಬಿ.ಕೆ.ರಾಜು 10,000 ರೂ., ಎಸ್.ಧನಶೇಖರ 10,000 ರೂ. ಎಂಬವರು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಯುಪಿಒಆರ್‌ನಲ್ಲಿ ಹೊರಗುತ್ತಿಗೆ ನೌಕರರಾಗಿರುವ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಅದರಂತೆ ಕಾರ್ಯಾಚರಣೆ ನಡೆಸಿದ ಮಂಗಳೂರು ಲೋಕಾಯುಕ್ತ ಪೊಲೀಸರು ಕೃಷ್ಣಮೂರ್ತಿ 20,000 ರೂ., ಧನಶೇಖರ ಮತ್ತು ಬಿ.ಕೆ. ರಾಜು ತಲಾ 5,000 ರೂ. ಲಂಚ ಸ್ವೀಕರಿಸುವಾಗ ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಂತೆ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್., ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love
Subscribe
Notify of

0 Comments
Inline Feedbacks
View all comments