ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ

Spread the love

ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ

ಮ್ಯಾಂಗಲೋರಿಯನ್ ಸುದ್ದಿಲೋಕ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಸಲು ತೆರಳಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಹಾಗೂ ಇತರರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯತ್ನದಿಂದ ಸ್ವಲ್ಪವೂ ಜಿಲ್ಲಾಧಿಕಾರಿಯವರು ವಿಚಲಿತರಾಗಿಲ್ಲ ಎನ್ನುವುದು ಅವರ ದಿಟ್ಟತನ ಹಾಗೂ ಧ್ಯೆರ್ಯದ ಮಾತುಗಳಿಂದ ಎದ್ದು ಕಾಣುತ್ತದೆ.

ಭಾನುವಾರ ಮಧ್ಯರಾತ್ರಿ ಜಿಲ್ಲಾಧಿಕಾರಿ ಹಾಗೂ ಇತರರ ಮೇಲೆ ಹಲ್ಲೆ ಯತ್ನ ನಡೆದು ಅದಕ್ಕೆ ಸಂಬಂಧಿಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಹಾಗೂ ಇತರ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಕ್ಕೆ ಆಗಮಿಸಿದ ಅವರು ದಿನವಿಡೀ ಬಿಡುವಿಲ್ಲದ ಕೆಲಸಗಳಲ್ಲಿ ಮಗ್ನವಾಗಿ ಏನೂ ಆಗದಂತೆ ಇದ್ದಿರುವುದು ಅವರ ಧ್ಯೇರ್ಯವನ್ನು ಎತ್ತಿ ತೋರಿಸುತ್ತಿತ್ತು.

ಈ ನಡುವೆ ಬೆಳಿಗ್ಗೆ ಅವರನ್ನು ಭೇಟಿ ಮಾಡಲು ಬಂದ ಪತ್ರಕರ್ತರ ಬಳಿ ಹಿಂದಿನ ರಾತ್ರಿ ನಡೆದ ಘಟನೆಯ ಸಂಪೂರ್ಣ ವಿವರ ನೀಡುವುದರೊಂದಿಗೆ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಮರಳು ಮಾಫಿಯಾಯನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಅವರು ಆಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಘಟನೆ ನನ್ನ ಮುಂದಿನ ಹೋರಾಟದ ಅಂತ್ಯವಾಗದೇ ಅದು ಆರಂಭವಾಗಲಿದೆ. ಜೀವ ಭಯವಿದ್ದರೂ ಕೂಡ ಹಲವರಿಂದ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ತಡೆಯಲು ವಿಫವಾಗಿದೆ ಎಂಬ ಮಾಧ್ಯಮ ವರದಿ ಅವರನ್ನು ಸದಾ ಕಾಡುತ್ತಿದ್ದ ಪರಿಣಾಮ ಕೇವಲ ತನ್ನ ಗನ್ ಮ್ಯಾನ್ ಹಾಗೂ ಜಿಪಂನ ಹೊರಗುತ್ತಿಗೆ ಕಾರಿನ ಚಾಲಕನೊಂದಿಗೆ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಅವರ ಪತಿ ಹಾಗೂ ಅವರ ಡ್ರೈವರ್ ಜೊತೆ ಅಕ್ರಮ ಮರಳುಗಾರಿಕೆ ನಡೆಯುವಲ್ಲಿ ಸ್ವತಃ ಯಾರಿಗೂ ಮಾಹಿತಿ ನೀಡದೆ ತೆರಳಿದ್ದರು. ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅದು ಎಲ್ಲಿ ಸೋರಿಕೆಯಾಗುತ್ತದೆ ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಆಲೋಚಿಸಿ ಬಂದ ಜಿಲ್ಲಾಧಿಕಾರಿ ತಂಡಕ್ಕೆ ಕಂಡ್ಲೂರಿನಲ್ಲಿ ನಡೆದ ಘಟನೆ ಒಂದು ರೀತಿಯಲ್ಲಿ ಆಘಾತವನ್ನು ತಂದಿದೆ ಆದರೂ ಕೂಡ ಅದನ್ನು ಸಾವರಿಸಿಕೊಂಡು ವಾಪಾಸ್ ಅಲ್ಲಿಂದ ಹೋಗವಾಗಲೇ ಅವರೊಂದು ಧೃಢ ನಿರ್ದಾರದೊಂದಿಗೆ ಉಡುಪಿ ನಗರ ಠಾಣೆಗೆ ಆಗಮಿಸಿದ್ದರು. ಅವರ ಚಾಲೆಂಜ್ ಪ್ರಕಾರ ಈ ಹೋರಾಟ ಯಾವುದೇ ಅಂತ್ಯವಾಗಲ್ಲ ಬದಲಾಗಿ ಮರಳುಗಾರಿಕೆಯ ವಿರುದ್ದ ಹೋರಾಟ ತೀವೃಗೊಳಿಸಲು ದಾರಿ ಮಾಡಿಕೊಟ್ಟಂತಾಗಿದೆ.

ಮುಂದಿನ ದಿನಗಳಲ್ಲಿ ಜೀವದ ಭಯದಿಂದಾಗಿ ಏಕಾಂಗಿಯಾಗಿ ನಡೆಸುವ ಧಾಳಿಯನ್ನು ಸಂಘಟಿತವಾಗಿ ಮಾಡಲು ನಿರ್ಧರಿಸಿರುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ವಿಶೇಷ ಸ್ವ್ಯಾಡ್ ಒಂದನ್ನು ಸಿದ್ದಪಡಿಸಿ ಅದರ ಮೂಲಕ ಹೋರಾಟದ ರೂಪುರೇಷೆ ನಡೆಸಲಾಗುವುದು ಅಲ್ಲದೆ ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುವ ಚಿಂತನೆ ಅವರು ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಧಾಳಿ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಎಳ್ಳು ನೀರು ಬಿಡಬೇಕು ಎಂಬ ಚಿಂತನೆ ಅವರಲ್ಲಿದೆ. ಅವರ ಕನಸಿಗೆ ಅಧಿಕಾರಿ ವರ್ಗ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ವಿಶ್ವಾಸವನ್ನು ಅರು ಹೊಂದಿದ್ದು ಇದರಿಂದ ಅವರ ಸಾಧನೆಗೆ ಇನ್ನಷ್ಟು ಬಲ ಬರಲಿದೆ.

ಈ ನಡುವೆ ಸರಕಾರದ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೂಡ ಜಿಲ್ಲಾಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿದಿದ್ದಾರೆ ಅಲ್ಲದೆ ಜಿಲ್ಲಾಧಿಕಾರಿಗಳ ಧ್ಯೇರ್ಯ ಮತ್ತು ಸಾಹಸವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕುರಿತು ಆಶ್ವಾಸನೆ ನೀಡಿದ್ದರೆ. ಈ ನಡುವೆ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಪ್ರಮೋದ್ ಅವರು  ಜಿಲ್ಲಾಧಿಕಾರಿ ಮತ್ತು ಕಮೀಷನರ್ ಇಬ್ಬರೂ ತೋರಿದ ಧೈರ್ಯವನ್ನು ಶ್ಲಾಘಿಸಿದ್ದಾರೆ ಅಲ್ಲದೆ ಆರೋಪಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಸ್ಪಿಯವರಿಗೆ ಸೂಚನೆ ನೀಡಿದ್ದಾರೆ ಆದರೆ ಅಧಿಕಾರಿಗಳ ಧೈರ್ಯವನ್ನು ಶ್ಲಾಘಿಸುವ ಭರದಲ್ಲಿ ಇಂತಹ ಕಾರ್ಯಾಚರಣೆ ಮಾಡುವಾಗ ಪೋಲಿಸ್ ರಕ್ಷಣೆ ಪಡೆಯಬೇಕಿತ್ತು ಎಂಬ ಮಾತನ್ನು ಕೂಡ ಆಡಿರುವುದು ಒಂದು ರೀತಿಯಲ್ಲಿ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಆಗಿದೆ. ಒಂದು ಕಡೆಯಿಂದ ಡಿಸಿಯವರ ಕಾರ್ಯಾಚರಣೆಯನ್ನು ಶ್ಲಾಘಿಸಿದಂತೆ ಮಾಡಿ ಅತ್ತ ಕಡೆಯಿಂದ ಕಾರ್ಯಾಚರಣೆ ಮಾಡಿದ್ದೇ ತಪ್ಪು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಚರಣೆಗೆ ಶ್ಲಾಘನೆ

ಒಂದು ಕಡೆಯಿಂದ ಜಿಲ್ಲಾಧಿಕಾರಿ ಮತ್ತು ಸಹಾಯಕ ಕಮೀಷನರ್ ಅವರ ಕಾರ್ಯಚರಣೆಯ ಬಗ್ಗೆ ಜನಪ್ರತಿನಿಧಿಗಳು ರಾಜಕೀಯ ಲಾಭದ ಮಾತುಗಳನ್ನು ಆಡಿದರೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕ ವರ್ಗ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಅಲ್ಲದೆ ಅಧಿಕಾರಿಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. ಸುಶಿಕ್ಷಿತ ಜಿಲ್ಲೆಯೆಂದು ಹೆಸರು ಪಡೆದ ಉಡುಪಿ ಜಿಲ್ಲೆಯಲ್ಲಿ ನಡೆದ ಇಂತಹ ಘಟನೆಯ ಬಗ್ಗೆ ಮತ್ತು ಮರಳು ನೀತಿಯನ್ನು ರೂಪಿಸುವಲ್ಲಿ ಸರಕಾರ ತೋರುತ್ತಿರುವ ಅಸಡ್ಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಬೇಕಾಗಿದೆ ಅಧಿಕಾರಿಗಳಿಗೆ ಸಾರ್ವಜನಿಕರ ಮುಕ್ತವಾದ ಬೆಂಬಲ

ಜಿಲ್ಲಾಧಿಕಾರಿ ಮತ್ತು ಸಹಾಯಕ ಕಮೀಷನರ್ ಅವರ ಮೇಲೆ ನಡೆದ ಹಲ್ಲೆಯನ್ನು ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರಶಂಸಿದ್ದಾರೆ ಆದರೆ ನೇರವಾಗಿ ಬೀದಿಗಿಳಿದು ಅಕ್ರಮ ಮರಳು ದಂಧೆಕೋರರ ವಿರುದ್ದ ದನಿ ಎತ್ತುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.  ಕೆಲವೊಂದು ಸಂಘಟನೆಗಳು ಹಲ್ಲೆಯ ವಿರುದ್ದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಹಾಗೂ ಇತರ ಅಧಿಕಾರಿಗಳಿಗೆ ಬೆಂಬಲ ನೀಡಿವೆ ಆದರೆ ಕೆಲವೊಮ್ಮೆ ಸಣ್ಣ ವಿಷಯಕ್ಕೂ ಕೂಡ ಬೀದಿಗಿಳಿಯುವ ಸೋಕಾಲ್ಡ್ ಸಂಘಟನೆಗಳು ಮಾತ್ರ ಮೌನವಹಿಸಿವೆ. ಹಾಗೆ ಮೌನವಹಿಸಿರುವುದು ತಪ್ಪು ಎನ್ನುವ ವಾದವಲ್ಲ ಬದಲಾಗಿ ಇಂತಹ ಘಟನೆಗಳು ನಡೆದಾಗ ಅಧಿಕಾರಿಗಳೊಂದಿಗೆ ಜನ ನಿಂತಿದ್ದಾರೆ ಇದರಿಂದ ಇನ್ನೂ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬ ಭಾವನೆ ಅವರಲ್ಲಿ ಮೂಡಿಸಿದಾಗ ಇಂತಹ ಅಕ್ರಮಗಳನ್ನು ಮಟ್ಟಹಾಕುವಲ್ಲಿ ಅವರುಗಳು ಇನ್ನಷ್ಟು ಪ್ರಯತ್ನ ಮಾಡುತ್ತಾರೆ.

 ಇನ್ನಾದರೂ ಎಚ್ಚೆತ್ತು ಕೊಳ್ಳಲಿದೆಯೇ ಸರಕಾರ

ಜಿಲ್ಲೆಯ ಉನ್ನತ ಸ್ಥಾನದಲ್ಲಿರುವ ಜಿಲ್ಲಾ ಡಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರ ಮೇಲೇಯೆ ಅಕ್ರಮ ಮರಳು ದಂಧೆಕೋರರು ಕೊಲೆ ಯತ್ನ ನಡೆಸಿದ್ದು, ಇಡೀ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಸುದ್ದಿಯ ವಿಷಯವಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಕುರಿತು ಜಿಲ್ಲಾಪಂಚಾಯತ್ ಸಭೆ, ಕೆಡಿಪಿ ಸಭೆಗಳಲ್ಲಿ ವ್ಯಾಪಕ ಚರ್ಚೆಗಳು ಕೂಡ ನಡೆದಿವೆ. ರಾಜ್ಯಕ್ಕೆ ಸೂಕ್ತವಾದ ಮರಳು ನೀತಿಯನ್ನು ರೂಪಿಸುತ್ತೇವೆ ಎಂಬ ಸರಕಾರ ನಾಲ್ಕು ವರ್ಷಗಳನ್ನು ಪೋರೈಸಿ ಐದನೇ ವರ್ಷದತ್ತ ಸಾಗುತ್ತಿದೆ ಆದರೆ ಮರಳು ನೀತಿಯನ್ನು ರೂಪಿಸುವಲ್ಲಿ ಮಾತ್ರ ಇನ್ನೂ ಕೂಡ ಕಾರ್ಯಪ್ರವೃತ್ತವಾಗಿಲ್ಲ. ಅಕ್ರಮ ಮರಳುಗಾರಿಕೆಯ ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಕೂಡ ಕೆಲವೊಂದು ಅಧಿಕಾರಿಗಳ ಕೊಲೆ ಯತ್ನ ನಡೆದ ಉದಾಹರಣೆಗಳಿದ್ದರೂ ಕೂಡ ರಾಜ್ಯ ಸರಕಾರ ಮಾತ್ರ ಘಾಡ ನಿದ್ರೆಯನ್ನು ಮಾಡುತ್ತಿದೆ. ಈ ಘಟನೆಯಿಂದಾದರೂ ಪಾಠ ಕಲಿತು ಸರಕಾರ ಸೂಕ್ತ ಮರಳು ನೀತಿಯನ್ನು ರೂಪಿಸುವಂತಾಗಬೇಕು ಇಲ್ಲವಾದರೆ ಮುಂದೆ  ಉತ್ತರ ಭಾರತದ ಘಟನೆಗಳು ಇಲ್ಲಿಯೂ ಕೂಡ ನಡೆದು ಅಧಿಕಾರಿಗಳು ಇನ್ನೂ ಹೆಚ್ಚಿನ ಅಪಾಯ ಎದುರಿಸಬೇಕಾದಿತು.


Spread the love