‘ಅಗತ್ಯಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣ ಬಳಸದಿರಿ’; ಕೆ.ಅಣ್ಣಾಮಲೈ

Spread the love

‘ಅಗತ್ಯಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣ ಬಳಸದಿರಿ’; ಕೆ.ಅಣ್ಣಾಮಲೈ

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣಗಳ ಅಧಿಕ ಬಳಕೆಯಿಂದ ವ್ಯಕ್ತಿತ್ವ ಬದಲಾಗುತ್ತದೆ. ಖಿನ್ನತೆಗೆ ಒಳಪಡುತ್ತಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು.

ಐಡಿಎಸ್​ಜಿ ಸರ್ಕಾರಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸೈಬರ್ ಅಪರಾಧ: ಇತ್ತೀಚಿನ ಮಾದರಿ ಮತ್ತು ಸವಾಲುಗಳು’ ಕುರಿತಂತೆ ಉಪನ್ಯಾಸ ನೀಡಿ, ಸಂವಾದ ನಡೆಸಿದರು.

ಕೃತಕ ಬುದ್ಧಿವಂತಿಕೆಯಿಂದ ನಮ್ಮ ಡಾಟಾಗಳನ್ನು ವಿಂಗಡಿಸಿ, ವಿಶ್ಲೇಷಿಸಿ, ವಿಮಶಿಸುವ ರೋಬೋಟ್​ಗಳು ನಮ್ಮ ಅಭ್ಯಾಸ, ಹವ್ಯಾಸ, ಖರೀದಿಯನ್ನು ನಿಯಂತ್ರಿಸುವ ಅಪಾಯಕ್ಕೆ ಸಿಲುಕಿದ್ದೇವೆ ಎಂದರು.

ಸೈಬರ್ ಅಪರಾಧದ ಮೂಲ ಜಾಗತಿಕ ಮಟ್ಟದಲ್ಲಿರುವುದರಿಂದ ಪತ್ತೆ ಕಾರ್ಯ ತುಂಬಾ ಕಷ್ಟ. ಬಹುತೇಕ ವ್ಯಕ್ತಿಗಳ ತಂತ್ರಾಂಶಗಳು ಹ್ಯಾಕ್ ಆಗಿರುತ್ತವೆ. ಒಂದು ಮೂಲದ ಪ್ರಕಾರ ಭಾರತೀಯ ಸೇನೆ, ಬಹುತೇಕ ಬ್ಯಾಂಕ್​ಗಳು, ಸಿಬಿಐ, ಟಿಆರ್​ಎಐ, ಇಸ್ರೋ, ಆಧಾರ್ ಅಷ್ಟೇ ಅಲ್ಲ, ನೋಂದಣಿ ಮಾಡಿಕೊಳ್ಳುವ ಐಆರ್​ಐಎನ್​ಎನ್ ಖಾತೆಗಳು ಹ್ಯಾಕ್ ಆಗಿವೆ. ಖಾತೆಗಳು ಹ್ಯಾಕ್ ಆದ ಮೇಲೆ 200 ದಿನಗಳ ನಂತರ ಗಮನಕ್ಕೆ ಬರುತ್ತದೆ. ಕೆಲ ತಂತ್ರಾಂಶಗಳು ಅಷ್ಟರಲ್ಲಿ ನಶಿಸಿರುತ್ತವೆ. ಸೈಬರ್ ಅಪರಾಧ ಊಹೆಗೂ ಮೀರಿದ್ದು ಎಂದು ಹೇಳಿದರು.

ಕಂಪ್ಯೂಟರ್, ಮೊಬೈಲ್, ಟ್ವಿಟರ್, ಫೇಸ್​ಬುಕ್, ವಾಟ್ಸ್​ಆಪ್ ಅಗತ್ಯಕ್ಕಿಂತ ಹೆಚ್ಚು ಬಳಕೆಯಾಗುತ್ತಿವೆ. ಆಚಾರ-ವಿಚಾರ, ಗುಣ-ಸ್ವಭಾವ, ಆಸಕ್ತಿ, ವಸ್ತ್ರ ವಿನ್ಯಾಸ, ಭಾವಚಿತ್ರ ಸೇರಿ ನಮ್ಮೆಲ್ಲ ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳುವ ಅಭ್ಯಾಸ ರೂಢಿಯಾಗಿದೆ. ಇದು ಸೈಬರ್ ಅಪರಾಧಗಳಿಗೆ ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.

ವಾಯುಸೇನೆಯ ವಿಮಾನ ಅಪಘಾತಗಳು ಹೆಚ್ಚಾಗುತ್ತಿದ್ದು ಇದಕ್ಕೆ ವಿಮಾನ ಚಾಲಕರು ಅರ್ಧರಾತ್ರಿವರೆಗೂ ಅಂತರ್ಜಾಲದಲ್ಲಿ ಕಾಲ ಕಳೆಯುತ್ತಿರುವುದು ಪ್ರಮುಖ ಕಾರಣ ಎಂದು ಭಾರತೀಯ ವಾಯುಸೇನೆಯ ಮುಖಸ್ಥರೇ ಹೇಳಿದ್ದಾರೆ. ಕರ್ನಾಟಕದ ವಿದ್ಯುಚ್ಛಕ್ತಿಯ ಪೂರೈಕೆ ಮತ್ತು ವಿತರಣೆಯ ಜಾಲ ಸಂಪೂರ್ಣವಾಗಿ ಉಪಗ್ರಹ ನಿಯಂತ್ರಣಕ್ಕೊಳಪಟ್ಟಿದೆ. ನಮ್ಮ ನಿತ್ಯಜೀವನ ಬಹುತೇಕ ರಿಮೋಟ್ ಕಂಟ್ರೋಲರ್​ನಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಹೇಳಿದರು.

ಅಂತರ್ಜಾಲದ ಮೂಲಕ ವ್ಯವಹರಿಸುವ ಬಿಟ್​ಕಾಯಿನ್ ಹೊಸ ತಾಂತ್ರಿಕತೆಯ ಕರೆನ್ಸಿಯ ಎಲೆಕ್ಟ್ರಾನಿಕ್ ರೂಪವಾಗಿದ್ದು, ಜಗತ್ತಿನ ಹಲವು ದೇಶಗಳಲ್ಲಿ ದುರುದ್ದೇಶದ ಮಾಹಿತಿ ಕಳವಿಗೆ ಬಳಕೆಯಾಗುತ್ತಿವೆ. ದೇಶ-ದೇಶಗಳ ನಡುವೆ ಯುದ್ಧಗಳು ದುಬಾರಿಯಾಗಿರುವುದರಿಂದ ಸೈಬರ್ ಅಪರಾಧದ ಮೂಲಕ ಇನ್ನೊಂದು ದೇಶವನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಜಾಹೀರಾತು ನೀಡುವ ತಾರೆಗಳಿಗೆ, ರಾಜಕೀಯ ಮುಖಂಡರನ್ನು ಹೊರತುಪಡಿಸಿದರೆ ಸಾಮಾನ್ಯ ಜನ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಮ್ಮ ವರ್ತನೆಯಿಂದ ಯಾವುದೋ ಸಂಸ್ಥೆ ಅಥವಾ ವ್ಯಕ್ತಿಗಳು ವಾಣಿಜ್ಯ ಕಾರಣಗಳಿಗಾಗಿ ನಮ್ಮ ಮೇಲೆ ಪ್ರಭಾವ ಬೀರಲು ಇದು ಸಹಕಾರಿಯಾಗುತ್ತಿದೆ. ಯುವಜನರಿಗೆ ಅಂತರ್ಜಾಲ ಅತ್ಯಾಸಕ್ತಿಯ ಫಲವಾಗಿ ಸೈಬರ್ ಅಪರಾಧಗಳಿಗೆ ಸಹಾಯವಾಗುತ್ತಿದೆಎಂದು ಹೇಳಿದರು.

ಪ್ರಾಚಾರ್ಯ ಪ್ರೊ. ಟಿ.ಸಿ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಸಂಯೋಜಕಿ ಡಾ. ಡಿ.ಎ.ಪ್ರತಿಮಾ ಮಥಾಯಸ್ ಪ್ರಾಸ್ತಾವಿಕ ಮಾತನಾಡಿದರು. ಡಾ. ಸೋಮಶೇಖರ್, ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರೊ. ಗಣೇಶಾಚಾರ್ಯ, ವಿಭಾಗದ ಮುಖ್ಯಸ್ಥ ಡಾ. ಎಸ್.ಇ.ನಟರಾಜ, ಬಿಂದು ಇತರರಿದ್ದರು.


Spread the love