ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಕೊರೊನಾ ಹರಡುವಿಕೆಯ ಬಗ್ಗೆ ಸ್ಪಷ್ಟ ಜಾಗೃತಿ ನೀಡಿ – ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Spread the love

ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಕೊರೊನಾ ಹರಡುವಿಕೆಯ ಬಗ್ಗೆ ಸ್ಪಷ್ಟ ಜಾಗೃತಿ ನೀಡಿ – ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ: ವಿಷಯದ ಬಗ್ಗೆ ಸ್ವಷ್ಟತೆ ಇರದೆ ಇದ್ದಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣವಾಗುತ್ತದೆ, ಇದಕ್ಕೆ ಕೋವಿಡ್-19 ಕೂಡ ಹೊರತಾಗಿಲ್ಲ. ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ಸ್ವಷ್ಟ ಹಾಗೂ ನಿರ್ದಿಷ್ಟ ಅಭಿಪ್ರಾಯಗಳನ್ನು ಪಡೆದುಕೊಂಡ ಅಧಿಕಾರಿಗಳು ಅದನ್ನು ಗ್ರಾಮ ಪಂಚಾಯಿತಿ ಹಂತದವರೆಗೂ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ಕುಂದಾಪುರ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಜೊತೆ ಕೊರೋನಾ ಜಾಗೃತಿ ಹಾಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಲಾಕ್ಡೌನ್ ಮುಂದುವರಿಸುವ ಅಗತ್ಯ. ಈ ಅವಧಿಯಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು. ದಿನ ನಿತ್ಯದ ಜೀವನದಲ್ಲಿ ಯಾವುದು ಅವಶ್ಯಕ, ಯಾವುದು ಬೇಡ ಎನ್ನುವ ಕುರಿತಾದ ಸ್ವಷ್ಟ ಅಭಿಪ್ರಾಯಗಳು ಜನರಿಗೆ ತಲುಪಬೇಕು. ಹೊರ ಗಡಿಯಿಂದ ಬರುವ ಸರಕು ಸಾಗಟು ಹಾಗೂ ಇತರ ವಾಹನ ಚಾಲಕರ ಆರೋಗ್ಯ ಸ್ಥಿರತೆ ಪರೀಕ್ಷಿಸಿ ಒಳಕ್ಕೆ ಬಿಡಬೇಕು. ಕೃಷಿಗೆ ಅಗತ್ಯವಾದ ವಸ್ತುಗಳ ಹಾಗೂ ದಿನಬಳಕೆ ವಸ್ತುಗಳ ಸಾಗಾಟ ವಾಹನಗಳ ಸಂಚಾರಕ್ಕೆ ಸಮಸ್ಯೆ ಮಾಡಬಾರದು. ಸರ್ಕಾರದ ಮಾರ್ಗದರ್ಶಿ ಸೂಚನೆಗಳಿಗೆ ಧಕ್ಕೆಯಾಗದಂತೆ ಕೃಷಿ ಚುಟುವಟಿಕೆ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕೃಷಿಕರ ಗೊಂದಲ ಪರಿಹಾರಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು.

ತೆಂಗು, ಅಡಿಕೆ ಸುಲಿಯುವುದಕ್ಕೆ ಮನೆ ಮನೆ ಕೊಡುವ ಪದ್ದತಿಯಿದ್ದು, ಅದರ ಸಾಗಾಟಕ್ಕೆ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದ ಶಾಸಕರು, ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಪಡೆಯಬೇಕು. ಪ್ರತಿದಿನ ಸಗಟು ಹಾಗೂ ತರಕಾರಿ ಮಾರಾಟ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಭೆಯಲ್ಲಿ ಮಾತನಾಡಿದ ಡಾ.ನಾಗರತ್ನ ಅವರು, ಕೊರೋನಾ ಬಾದಿತ ಪ್ರದೇಶದಿಂದ ಬಂದ ವ್ಯಕ್ತಿಗಳಿಗೆ ಹೋಮ್ ಕ್ವಾರಂಟೈನ್ ವಿಧಿಸಲಾಗುತ್ತದೆ. ಕುಂದಾಪುರ ಹೋಬಳಿಯಲ್ಲಿ 11530 ಹಾಗೂ ಕೋಟ ಹೋಬಳಿಯಲ್ಲಿ 4124 ಹೊರಗಿನಿಂದ ಬಂದವರು ಇದ್ದಾರೆ. ಕೊರೋನಾ ಹಾಗೂ ಸಾಮಾನ್ಯ ಜ್ವರ ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದು, ಕುಂದಾಪುರ, ಕಾರ್ಕಳ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಈ ಸೌಲಭ್ಯವಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ ಉಪವಿಭಾಗಾಧಿಕಾರಿ ಕೆ.ರಾಜು, ಎಎಸ್ಪಿ ಹರಿರಾಮ್ ಶಂಕರ್ ಲಾಕ್ ಡೌನ್ ಅವಧಿಯಲ್ಲಿ ಪಾಲಿಸಬೇಕಾದ ಮುಂಜಾಗರೂಕತೆ, ಹಾಗೂ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತು ಇಒ ಕೇಶವ ಶೆಟ್ಟಿಗಾರ್ ಇದ್ದರು.


Spread the love