ಅಮಾನವೀಯವಾಗಿ ಸರಪಳಿಯಿಂದ ಕೈಕಾಲು ಕಟ್ಟಿದ ವ್ಯಕ್ತಿಯನ್ನು ಬಂಧ ಮುಕ್ತಗೊಳಿಸಿದ ಬೈಂದೂರು ಪೊಲೀಸರು

Spread the love

ಅಮಾನವೀಯವಾಗಿ ಸರಪಳಿಯಿಂದ ಕೈಕಾಲು ಕಟ್ಟಿದ ವ್ಯಕ್ತಿಯನ್ನು ಬಂಧ ಮುಕ್ತಗೊಳಿಸಿದ ಬೈಂದೂರು ಪೊಲೀಸರು

ಕುಂದಾಪುರ: ಕೇರಳ ಮೂಲದ ವ್ಯಕ್ತಿಯೋರ್ವನ ಕಾಲಿಗೆ ಸರಪಳಿಯಿಂದ ಸುತ್ತಿ ಬೀಗ ಜಡಿದು ಗಿಡವೊಂದಕ್ಕೆ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಬೈಂದೂರಿನ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಕಿರಿಮಂಜೇಶ್ವರ ಆಸ್ಪತ್ರೆಯ ಅನತಿ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವ್ಯಕ್ತಿಯೋರ್ವನನ್ನು ಸರಪಳಿಯಿಂದ ಕಾಲಿಗೆ ಬಿಗಿದು ಗಿಡವೊಂದಕ್ಕೆ ಕಟ್ಟಿರುವುದನ್ನು ನೋಡಿದ ವಾಹನ ಸವಾರರು ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಸರಪಳಿಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಬೀಗ ಹಾಕಿದ್ದರಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಗಿಡವನ್ನು ಮುರಿದು ಸರಪಳಿ ಸಮೇತವಾಗಿ ವ್ಯಕ್ತಿಯನ್ನು ಪೊಲೀಸ್ ಜೀಪಿನಲ್ಲಿ ಕೂರಿಸಿ ಸಮೀಪದ ವರ್ಕ್ ಶಾಪ್ಗೆ ಕರೆದುಕೊಂಡು ಹೋಗಿ ವ್ಯಕ್ತಿಯನ್ನು ಸರಪಳಿಯ ಬಂಧನದಿಂದ ಮುಕ್ತಿಗೊಳಿಸಿದ್ದಾರೆ.

ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಮಲೆಯಾಳಂ ಭಾಷೆಯಲ್ಲೇ ವಿಚಾರಣೆ ನಡೆಸಿದಾಗ ಈತನು ಕೇರಳದ ಕೊಲಿಕೊಡ್ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಕೊಲಿಕೊಡ್ ಜಿಲ್ಲೆಯ ಕಲ್ಲಾಚಿ ನಿವಾಸಿ ಕುನ್ಝಿ ಕೊಯ ಎಂಬವರ ಪುತ್ರ ಸಯ್ಯದ್ ಕೊಯ(50) ಎಂದು ವ್ಯಕ್ತಿ ತನ್ನ ಪರಿಚಯ ಮಾಡಿಕೊಂಡಿದ್ದಾನೆ.

ಇದೀಗ ಬೈಂದೂರು ಪೊಲೀಸರು ಕೇರಳ ಪೊಲೀಸರ ನೆರವು ಕೋರಿದ್ದು ಸಯ್ಯದ್ನನ್ನು ಮನೆಗೆ ವಾಪಾಸು ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಮೇಲ್ನೋಟಕ್ಕೆ ಸಯ್ಯದ್ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದು, ಕಳೆದ ಎರಡು ಮೂರು ದಿನಗಳಿಂದ ಕಿರಿಮಂಜೇಶ್ವರ ಪರಿಸರದಲ್ಲಿ ತಿರುಗಾಡುತ್ತಿದ್ದುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಸಯ್ಯದ್ ಸ್ಥಳೀಯರಿಗೆ ತೊಂದರೆ ಮಾಡಿದ್ದರಿಂದ ಈ ರೀತಿಯಾಗಿ ಸರಪಳಿಯಿಂದ ಕಟ್ಟಿಹಾಕಿರಬಹುದೆಂದು ಶಂಕಿಸಲಾಗಿದೆ.


Spread the love