ಅಲ್‍ಜೈಮರ್ಸ್ ಕ್ಲಿನಿಕ್ ಆರಂಭಿಸಿದ ಮಂಗಳೂರಿನ ಕೆಎಂಸಿ ಆಸ್ಪತ್ರೆ

Spread the love

ಅಲ್‍ಜೈಮರ್ಸ್ ಕ್ಲಿನಿಕ್ ಆರಂಭಿಸಿದ ಮಂಗಳೂರಿನ ಕೆಎಂಸಿ ಆಸ್ಪತ್ರೆ

ಮಂಗಳೂರು: ಮಂಗಳೂರಿನಲ್ಲಿ ಅನನ್ಯ ಮತ್ತು ತನ್ನ ರೀತಿಯ ಮೊದಲ ಅಲ್‍ಜೈಮರ್ಸ್ ಕ್ಲಿನಿಕ್ ಆರಂಭಿಸುವುದರೊಂದಿಗೆ ಕೆಎಂಸಿ ಮಂಗಳೂರು ಆಸ್ಪತ್ರೆ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಜೋಡಿಸಿಕೊಂಡಿದೆ. ನೆನಪಿನ ಶಕ್ತಿ ಕಳೆದುಕೊಳ್ಳುತ್ತಾ ಸಾಗುವಂಥ ಅತ್ಯಂತ ಸಾಮಾನ್ಯ ರೀತಿಯ ಡಿಮೆನ್ಷಿಯಾ ಅಲ್‍ಜೈಮರ್ಸ್ ಆಗಿದ್ದು, ಈ ಡಿಮೆನ್ಷಿಯಾ ಮಾನಸಿಕ ಕಾರ್ಯಕ್ಕೆ ಹಾನಿ ಉಂಟು ಮಾಡುವ ತೊಂದರೆಗಳ ಸಮೂಹವಾಗಿದೆ. ಪ್ರತಿ ಮೂರು ಸೆಕೆಂಡಿಗೊಂದರಂತೆ ಡಿಮೆನ್ಷಿಯಾದ ಹೊಸ ಪ್ರಕರಣಗಳು ಜಗತ್ತಿನಲ್ಲಿ ಕಂಡು ಬರುತ್ತವೆ. ನೆನಪಿನ ಶಕ್ತಿ ಕಡಿಮೆಯಾಗುವುದು, ವಿಶೇಷವಾಗಿ ಅಲ್ಪ ಕಾಲದ ನೆನಪಿನ ಶಕ್ತಿ ಕುಗ್ಗುವುದು ಡಿಮೆನ್ಷಿಯಾದ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಪ್ರಸ್ತುತ ಈ ರೋಗವನ್ನು ಗುಣಪಡಿಸುವ ಯಾವುದೇ ಚಿಕಿತ್ಸೆ ಇರುವುದಿಲ್ಲ ಅಲ್ಲದೆ ನಿಕಟ ಭವಿಷ್ಯದಲ್ಲಿ ಇದನ್ನು ನಿರೀಕ್ಷಿಸಲು ಆಗದು.

ಮಂಗಳೂರಿನ ಜನಸಂಖ್ಯೆಯಲ್ಲಿ ಶೇ. 10ರಷ್ಟು ಜನರು 60 ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದು, ನಗರದಲ್ಲಿ ಇಂದು ಯಾವುದೇ ಆಸ್ಪತ್ರೆಯ ಹೊರರೋಗ ವಿಭಾಗವನ್ನು ಭೇಟಿ ನೀಡುವವರಲ್ಲಿ ಶೇ. 40-50ರಷ್ಟು ಈ ವರ್ಗದವರೇ ಆಗಿರುತ್ತಾರೆ. ನಾವು ಡಿಜಿಟಲೀಕರಣದ ಕಡೆಗೆ ಸಾಗುತ್ತಿರುವಂತೆ, ಮಂಗಳೂರು ಭೂತದ ನಗರವಾಗುತ್ತಿದೆ. ಎಲ್ಲ ಯುವ ಜನತೆ ಮತ್ತು ಮಕ್ಕಳು ಬೆಂಗಳೂರು ಮತ್ತಿತರೆ ಮೆಟ್ರೊ ಪಾಲಿಟನ್ ನಗರಗಳಲ್ಲಿ ಕೆಲಸ ಮಾಡುತ್ತಾರೆ, ಇಲ್ಲವಾದಲ್ಲಿ ವಿದೇಶಗಳಲ್ಲಿ ವಾಸಿಸುತ್ತಾರೆ. ವಯಸ್ಸಾದ ಜನಸಂಖ್ಯೆಯನ್ನು ಮಾತ್ರ ಈ ನಗರದಲ್ಲಿ ಬಿಟ್ಟುಬಿಡುತ್ತಾರೆ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಪ್ರಮುಖ ಕೇಂದ್ರವಾಗಿದ್ದರೂ ಕೂಡ ಮಂಗಳೂರಿನಲ್ಲಿ ವಯಸ್ಸಾದವರಿಗೆ ಅಗತ್ಯವಾದ ವಿಶೇಷ ಆರೋಗ್ಯ ಶುಶ್ರೂಷೆ ಸೇವೆಗಳ ಲಭ್ಯತೆ ಕಡಿಮೆಯೇ ಆಗಿದೆ. ಹಿರಿಯ ವಯಸ್ಕರು ಬಹುರೋಗಗಳಿಂದ ಬಳಲುತ್ತಾರಲ್ಲದೇ ದೊಡ್ಡ ಪ್ರಮಾಣದಲ್ಲಿ ಔಷಧಗಳನ್ನು ಸೇವಿಸುತ್ತಾರೆ. ಇವರಲ್ಲಿ ನೆನಪಿನ ಶಕ್ತಿಯ ಕೊರತೆ ಅಥವಾ ನೆನಪಿನ ಹಾನಿಯ ಆರಂಭ ಲಕ್ಷಣಗಳು ವೈದ್ಯಕೀಯ ಹೊರರೋಗ ವಿಭಾಗದಲ್ಲಿನ ಸಾಮಾನ್ಯ ಪರೀಕ್ಷೆಗಳ ಸಂದರ್ಭ ನಿರ್ಲಕ್ಷಿತವಾಗಿರುತ್ತವೆ.

ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳು ರೋಗದ ಪ್ರಗತಿಯನ್ನು 6ರಿಂದ 18 ತಿಂಗಳುಗಳವರೆಗೆ ನಿಧಾನಗೊಳಿಸಬಲ್ಲವು. ಇಂತಹ ಕಾಂಪೌಂಡ್‍ಗಳ ಮುಖ್ಯ ವರ್ಗ ಎಂದರೆ ಕೋಲಿನೆಸ್ಟರೇಸ್ ಇನ್‍ಹಿಬಿಟರ್‍ಗಳಾಗಿವೆ. ಕೆಎಂಸಿಯಲ್ಲಿ ಅಲ್‍ಜೈಮರ್ಸ್ ಕ್ಲಿನಿಕ್ ಹಲವಾರು ಪರೀಕ್ಷೆಗಳು ಮತ್ತು ಸಮಗ್ರ ಗೆರಿಯಾಟ್ರಿಕ್ ಮೌಲ್ಯೀಕರಣವನ್ನು ಒಳಗೊಂಡಿರುತ್ತವೆ. ಈ ಮೌಲ್ಯೀಕರಣವನ್ನು ಗೆರಿಯಾಟ್ರಿಕ್ ವಿಶೇಷ ತಜ್ಞರು, ಮಾನಸಿಕ ತಜ್ಞರು ಮತ್ತು ಮಾನಸಿಕ-ಸಾಮಾಜಿಕ ಸಲಹಾ ತಜ್ಞರನ್ನು ಒಳಗೊಂಡ ಸಮಿತಿ ನಡೆಸುತ್ತದೆ. ಅಪಾಯಿಂಟ್‍ಮೆಂಟ್‍ಗಾಗಿ ಸಂಪರ್ಕಿಸಿ: ಹೆಲ್ತ್ ಚೆಕ್ ಲಾಂಜ್/94482 54700, ಕೆಎಂಸಿ ಆಸ್ಪತ್ರೆ, ಅಂಬೇಡ್ಕರ್ ವೃತ್ತ, ಮಂಗಳೂರು.

2015ರ ಹೊತ್ತಿಗೆ ವಿಶ್ವವ್ಯಾಪಿಯಾಗಿ ಡಿಮೆನ್ಷಿಯಾದಿಂದ ಬಳಲುತ್ತಿರುವ 46 ದಶಲಕ್ಷ ಜನರಿದ್ದರು. ಅವರಲ್ಲಿ ಶೇ.58ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಾರೆ. ಈ ಅಂಕಿಅಂಶ 2050ರ ಹೊತ್ತಿಗೆ 131 ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯನ್ನು ದಾಟುವ ನಿರೀಕ್ಷೆ ಇದೆ. ಇದನ್ನು ತಡೆಯುವ ಯಾವುದೇ ನಿರ್ದಿಷ್ಟ ಕ್ರಮಗಳು ಇಲ್ಲವಾಗಿದ್ದರೂ ಆರೋಗ್ಯಕರ ಜೀವನಶೈಲಿಯ ಶಿಫಾರಸ್ಸು ಮಾಡಬಹುದಾಗಿದೆ. ಇದರಲ್ಲಿ ಆರೋಗ್ಯಕರ ಆಹಾರಕ್ರಮದ ಸೇವನೆ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಕ್ರಿಯವಾಗಿರುವುದು ಸೇರಿದೆ. ಆರೋಗ್ಯಕರ ಜೀವನಶೈಲಿ ಹೊಂದುವುದರಿಂದ ವ್ಯಕ್ತಿಗೆ ಈ ತೊಂದರೆ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂಬುದನ್ನು ತೋರಿಸುವ ಸಂಶೋಧನಾ ಸಾಕ್ಷಿಗಳು ಹೆಚ್ಚಿವೆ’’ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮಾನಸಿಕ ರೋಗಶಾಸ್ತ್ರದ ಮುಖ್ಯಸ್ಥರಾದ ಡಾ. ಕೇಶವ ಪೈ ಅವರು ಹೇಳಿದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಗೆರಿಯಾಟ್ರಿಕ್ ವಿಶೇಷ ತಜ್ಞರಾದ ಡಾ. ಶೀತಲ್ ರಾಜ್ ಅವರು ಮಾತನಾಡಿ, “ಸಮಗ್ರ ಗೆರಿಯಾಟ್ರಿಕ್ ಮೌಲ್ಯೀಕರಣ(ಸಿಜಿಎ)ವಯಸ್ಸಾದ ವ್ಯಕ್ತಿಯೊಬ್ಬರ ಸಂಪೂರ್ಣ ಮೌಲ್ಯೀಕರಣ ನಡೆಸಲು ಬಳಸುವ ಕ್ರಮವಾಗಿದೆ. ಸಾಮಾನ್ಯ ವೈದ್ಯಕೀಯ ಮೌಲ್ಯೀಕರಣ ತೀವ್ರ ವೈದ್ಯಕೀಯ ತೊಂದರೆಯ ಮೌಲ್ಯೀಕರಣಕ್ಕೆ ಸೀಮಿತವಾಗಿರುತ್ತದೆ. ಆದರೆ, ಸಿಜಿಎ ನಡೆಸುವಾಗ ಗೆರಿಯಾಟ್ರಿಷಿಯನ್ ಆದವರು ರೋಗಿಯ ತೀವ್ರ ವೈದ್ಯಕೀಯ ತೊಂದರೆಗಳ ಜೊತೆಗೆ ಗೆರಿಯಾಟ್ರಿಕ್ ತೊಂದರೆಗಳಾದ ಬೀಳುವ ಅಪಾಯಗಳು, ಮೂತ್ರ ಮತ್ತು ಮಲದ ನಿಗ್ರಹವಿಲ್ಲದಿರುವುದು, ಖಿನ್ನತೆ, ನೆನಪಿನ ತೊಂದರೆಗಳು, ದೃಷ್ಠಿ, ಶ್ರವಣ ತೊಂದರೆಗಳು ಮತ್ತು ಬಹು ಔಷಧಿಗಳ ಬಳಕೆ(ಪಾಲಿಫಾರ್ಮಸಿ)ಯಿಂದ ಕಂಡುಬರುವ ತೊಂದರೆಗಳ ಸರಿಪಡಿಸುವಿಕೆ ಮುಂತಾದ ವಿಷಯಗಳನ್ನು ಗಮನಿಸುತ್ತಾರೆ. ರೋಗಿ ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಬಲ್ಲ ಸಾಮಥ್ರ್ಯ ಅಲ್ಲದೆ, ಸ್ವತಂತ್ರವಾಗಿ ಬದುಕುವ ಸಾಮಥ್ರ್ಯವನ್ನು ಕೂಡ ಸಿಜಿಎ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಗೆರಿಯಾಟ್ರಿಕ್ ಮೌಲ್ಯೀಕರಣಕ್ಕೆ ಒಳಗಾಗುವುದರಿಂದ ಅಸ್ವಸ್ಥರಾಗುವ ಅಪಾಯ ಕಡಿಮೆಯಾಗುತ್ತದೆ. ಮತ್ತು ವಯಸ್ಸಾದವರಲ್ಲಿ ಆಸ್ಪತ್ರೆಗೆ ಸೇರಿಸಬೇಕಾದ ದರವನ್ನು ಕಡಿಮೆ ಮಾಡುತ್ತದೆ. ಗೆರಿಯಾಟ್ರಿಕ್ ಮೌಲ್ಯೀಕರಣ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಅಲ್ಲದೆ, ಆರೈಕೆ ನೀಡುವವರ ಅಥವ ದಾದಿಯ ಬೆಂಬಲದ ಅಗತ್ಯವನ್ನು ಹಾಸಿಗೆ ಹಿಡಿದಿರುವ ವಯಸ್ಸಾದವರಲ್ಲಿ ಕಡಿಮೆ ಮಾಡುತ್ತದೆ. ಜೊತೆಗೆ ಇದು ಕಾರ್ಯ ಸ್ವತಂತ್ರ್ಯತೆಯನ್ನು ಸುಧಾರಿಸಲು ಹೆಸರಾಗಿದೆ’’ ಎಂದರು.

ಡೆಮೆನ್ಷಿಯಾವನ್ನು ಶೀಘ್ರ ಪತ್ತೆ ಮಾಡಿ ತಡೆಯುವುದರಿಂದ ಹೃದಯ ರಕ್ತನಾಳಗಳ ಆರೋಗ್ಯ ಸುಧಾರಿಸುವುದು, ಮಧುಮೇಹದ ನಿರ್ವಹಣೆ ಉತ್ತಮವಾಗಿಸುವುದು ಮತ್ತು ಇತರೆ ಸಹ ರೋಗಗಳ ನಿರ್ವಹಣೆಯನ್ನು ಉತ್ತಮವಾಗಿಸುವುದು, ದೈಹಿಕ ದೃಢತೆ ಉತ್ತಮಪಡಿಸುವುದು, ಮಾನಸಿಕ ಮತ್ತು ಸಾಮಾಜಿಕ ಬೆಂಬಲದ ವ್ಯವಸ್ಥೆ ಕೈಗೊಳ್ಳುವುದು ಮುಂತಾದ ಕಾರ್ಯಗಳು ಸಾಧ್ಯವಿರುತ್ತವೆ. ಹೀಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿನ ಅಲ್ಜೈಮರ್ಸ್ ಕ್ಲಿನಿಕ್ ಈ ಎಲ್ಲಾ ಮೇಲೆ ಹೇಳಿದ ನೀತಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಸಾದರಪಡಿಸುವುದಲ್ಲದೆ, ಸಮಗ್ರ ಆರೈಕೆಯನ್ನು ಪೂರೈಸುವ ಯುಗಕ್ಕೆ ರೋಗಿಯನ್ನು ಮರಳಿ ಕೊಂಡ್ಯೊಯುತ್ತದೆ’’ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಘಟಕದ ಮುಖ್ಯಸ್ಥರಾದ ಸಗೀರ್ ಸಿದ್ದಿಕಿ ಹೇಳಿದರು.

ಅತ್ತಾವರದ ಕೆಎಂಸಿ ಆಸ್ಪತ್ರೆಯ ಮಾನಸಿಕ ರೋಗಶಾಸ್ತ್ರ ವಿಭಾಗ `ಡೆಮೆನ್ಷಿಯಾಗೆ ಆರೈಕೆ ನೀಡುವುದು’ ಎಂಬ ವಿಷಯದಲ್ಲಿ ಅತಿಥಿ ಉಪನ್ಯಾಸವನ್ನು ಆಯೋಜಿಸುತ್ತಿದ್ದು ಉಡುಪಿಯ ಡಾ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಮಾನಸಿಕ ರೋಗಶಾಸ್ತ್ರ ವಿಭಾಗದ ವೈದ್ಯಕೀಯ ನಿರ್ದೇಶಕರು ಮತ್ತು ಮಾನಸಿಕ ರೋಗತಜ್ಞರಾದ ಡಾ. ಪಿ.ವಿ. ಭಂಡಾರಿ ಅವರು ಉಪನ್ಯಾಸ ನೀಡಲಿದ್ದಾರೆ. ಈ ಉಪನ್ಯಾಸ ಸೆಪ್ಟೆಂಬರ್ 22, ಶುಕ್ರವಾರದಂದು ಬೆಳಿಗ್ಗೆ 10ಗಂಟೆಯಿಂದ ನಡೆಯಲಿದ್ದು ಆಸಕ್ತಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.


Spread the love