ಆನೆಗುಡ್ಡೆಯಲ್ಲಿ ಬಹುನಿರೀಕ್ಷಿತ ಕಾಂತಾರ ಚಿತ್ರದ ಮುಹೂರ್ತ

Spread the love

ಆನೆಗುಡ್ಡೆಯಲ್ಲಿ ಬಹುನಿರೀಕ್ಷಿತ ಕಾಂತಾರ ಚಿತ್ರದ ಮುಹೂರ್ತ

ತಾಂತ್ರಿಕ ತಂಡದಲ್ಲಿ ಬದಲಾವಣೆ ಇಲ್ಲ. ಹೊಸ ರಂಗನಟಕರಿಗೆ ಅವಕಾಶ. ಮುಂದಿನ ತಿಂಗಳು ಕರಾವಳಿಯಲ್ಲಿ ಶೂಟಿಂಗ್ ಆರಂಭ

ಕುಂದಾಪುರ: ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿ ಯಶಸ್ವಿ ಪ್ರದರ್ಶನ ಕಂಡ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಿತ್ರತಂಡವು ಸೋಮವಾರ ಆನೆಗುಡ್ಡೆ ವಿನಾಯಕನ ಸನ್ನಿಧಾನದಲ್ಲಿ ಮುಹೂರ್ತ ನಡೆಸಿ ಚಿತ್ರದ ಪೋಸ್ಟರ್ ನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

ಕಳೆದ ವರ್ಷದ ಬ್ಲಾಕ್ ಬಾಸ್ಟರ್ ಚಿತ್ರ ಕಾಂತಾರ ಎಲ್ಲರ ನಿರೀಕ್ಷೆಯನ್ನು ಮೀರಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದಾದ ಒಂದು ವರ್ಷದ ನಂತರ ಡಿವೈನ್ ಸ್ಟಾರ್ ರಿಷಬ್ ಸುಮಾರು ಆರು ತಿಂಗಳು ಸ್ಕ್ರಿಪ್ಟ್ ಕೆಲಸ ಪೂರೈಸಿ ಸೋಮವಾರ ಕುಂದಾಪುರದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ಮಹೂರ್ತ ನೆರವೇರಿಸಿದೆ.

ನಟ ರಿಷಬ್ ಶೆಟ್ಟಿ ಪತ್ನಿ, ಇಬ್ಬರು ಮಕ್ಕಳು ಮಹೂರ್ತ ಸಂದರ್ಭದಲ್ಲಿ ಹಾಜರಿದ್ದರು. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು ನಿರ್ಮಾಪಕ ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಡಿಒಪಿ ಅರವಿಂದ ಕಶ್ಯಪ್ ಕ್ಯಾಮೆರಾ ಆನ್ ಮಾಡಿ ಶ್ರೀ ವಿನಾಯಕ ದೇವರ ದೃಶ್ಯ ಸೆರೆಹಿಡಿದರು. ವಿಜಯ್ ಕಿರಗಂದೂರ್ ಹಿರಿಯ ಸಹೋದರ ಮಂಜುನಾಥ್ ಕಿರಗಂದೂರು ಕ್ಲ್ಯಾಪ್ ಮಾಡಿದರು.

ಮುಹೂರ್ತ ವಿಶೇಷ ಪೂಜೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕಾಂತಾರದ ಪೂರ್ವ ಅಧ್ಯಾಯವನ್ನು ಈ ಬಾರಿ ನಾವು ತೆರೆದಿಡುತ್ತೇವೆ. ಸಿನೆಮಾದ ಬಗ್ಗೆ ನಾನೇನು ಹೇಳುವುದಿಲ್ಲ. ಸಾಗುತ್ತಾ ಸಾಗುತ್ತಾ ಸಿನಿಮಾನೇ ಮಾತನಾಡುತ್ತದೆ. ಹೊಂಬಾಳೆ ದೇಶದ ಪವರ್ ಹೌಸ್ ನಮ್ಮ ಚಿತ್ರಕ್ಕೆ ದೊಡ್ಡ ಶಕ್ತಿ ಎಂದರು.

ಹಳೆ ಕಾಂತಾರದಂತೆ ಹೊಸ ಕಾಂತಾರಕ್ಕೂ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿ ಆಗಲಿದ್ದಾರೆ. ಹಿಂದಿನ ಚಿತ್ರದಲ್ಲಿ ಪಾತ್ರ ಮಾಡಿದ ಹಲವಾರು ಕಲಾವಿದರು ಇಂದಿನ ಮಹೂರ್ತ ಸಂದರ್ಭದಲ್ಲಿ ಹಾಜರಿದ್ದರು. ಶೈನ್ ಶೆಟ್ಟಿ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ. ಒತ್ತಡ ಜಾಸ್ತಿಯಾದಾಗ ಒಳ್ಳೆಯ ಫಲಿತಾಂಶ ಕೊಡಲು ಸಾಧ್ಯವಾಗುತ್ತದೆ ಎಂದರು.

ಶ್ರೀವಿನಾಯಕ ದೇಗುಲಕ್ಕೆ ಹರಕೆ ಹೊತ್ತು ಬಂದವರಿಗೆ ಮನಸ್ಸಿನ ಇಷ್ಟಾರ್ಥ ಸಿದ್ಧಿಸುವ ಕ್ಷೇತ್ರ. ರಿಷಬ್ ಮತ್ತು ವಿಜಯ್ ಕಿರಗಂದೂರು ನಿರಂತರವಾಗಿ ಕ್ಷೇತ್ರಕ್ಕೆ ಬಂದು ದೇವರ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ದೇವಳದ ಅರ್ಚಕರಾದ ರವಿರಾಜ್ ಉಪಾಧ್ಯಾಯ ಹೇಳಿದರು.

ಮುಂದಿನ ತಿಂಗಳಿಂದ ಉಡುಪಿ-ಮಂಗಳೂರಿನಲ್ಲಿ ಶೂಟಿಂಗ್ ಶುರುವಾಗಲಿದೆ. ಮುಂದಿನ ನವಂಬರ್ ಡಿಸೆಂಬರ್ ಒಳಗೆ ಬಿಗ್ ಸ್ಕ್ರೀನ್ನಲ್ಲಿ ಕಾಂತಾರ ಸ್ಟೋರಿ ದರ್ಶನ ಆಗಲಿದೆ.


Spread the love