ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮೃತದೇಹ ಹುಟ್ಟೂರಿಗೆ; ಕೆಲವೆಡೆ ಕಲ್ಲುತೂರಾಟ

Spread the love

ಆರ್‌ಎಸ್‌ಎಸ್ ಕಾರ್ಯಕರ್ತ  ಶರತ್ ಮೃತದೇಹ ಹುಟ್ಟೂರಿಗೆ; ಕೆಲವೆಡೆ ಕಲ್ಲುತೂರಾಟ

ಮಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ  ಶರತ್ ಮಡಿವಾಳರ ಶವಯಾತ್ರೆ ಬಿ.ಸಿ.ರೋಡ್ ಸಮೀಪಿಸುತ್ತಲೇ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಶರತ್ ಅವರ ಮೃತದೇಹ ವಾಹನದಿಂದ ಇಳಿಸುವ ಹೊತ್ತಿಗೆ ಸಂಘಪರಿವಾರ ಕಾರ್ಯಕರ್ತರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರು ಲಾಠಿಚಾರ್ಜ್ ನಡೆಸಿದ್ದಾರೆ ಎಂಬ ವರದಿಗಳು ಬಂದಿವೆ.

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಇದೇ 4ರಂದು ಹಲ್ಲೆಗೊಳಗಾಗಿ, ಶುಕ್ರವಾರ ಸಂಜೆ ನಗರದ ಎ.ಜೆ.ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್‌ ಮಡಿವಾಳ (28) ಅವರ ಮೃತದೇಹವನ್ನು ಅವರ ಕುಟುಂಬಕ್ಕೆ ಶನಿವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.

ಎಜೆ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹವನ್ನು ಭಾರೀ ಪೊಲೀಸ್‌ ಭದ್ರತೆಯೊಂದಿಗೆ ಹಸ್ತಾಂತರ ಮಾಡಲಾಯಿತು. ಶವವನ್ನು ಶರತ್‌ ಅವರ ಸ್ವಗ್ರಾಮಕ್ಕೆ 25 ಪೊಲೀಸ್‌ ವಾಹನಗಳ ಬೆಂಗಾವಲಿನಲ್ಲಿ ತೆಗೆದುಕೊಂಡು ಹೋಗಲಾಗುತ್ತಿದೆ.

ಶವ ಹಸ್ತಾಂತರಕ್ಕೂ ಮುನ್ನ ಆರ್‌ಎಸ್‌ಎಸ್‌ ಕಾರ್ಯಕರ್ತರು ಬೆಳಿಗ್ಗೆ 8ರಿಂದಲೇ ಆಸ್ಪತ್ರೆ ಆವರಣಕ್ಕೆ ತಂಡೋಪ ತಂಡವಾಗಿ ಆಗಮಿಸಿದ್ದರು.  ಶವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದರು.

ಬಂಟ್ವಾಳ, ಬಿಸಿ ರಸ್ತೆ ಹಾಗೂ ಶರತ್‌ ಅವರ ಗ್ರಾಮದಲ್ಲಿ ವಾತಾವರಣ ಬಿಗುವಿನಿಂದ ಕೂಡಿದೆ.

ಶರತ್‌ ಅವರ ಮೃತದೇಹವನ್ನು ಹೊತ್ತು ಸಾಗುತ್ತಿರುವ ವಾಹನದ ಹಿಂದೆ ನೂರಾರು ಮಂದಿ ಸಂಘ ಪರಿವಾರದ ಕಾರ್ಯಕರ್ತರು ಕಪ್ಪು ಭಾವುಟ ಹಿಡಿದು ಬೈಕ್‌ಗಳಲ್ಲಿ ಸಾಗುತ್ತಿದ್ದ ದೃಶ್ಯ ಕಂಡು ಬಂತು.


Spread the love