ಆರ್.ಎಸ್.ಎಸ್. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ – ದಿನೇಶ್ ಅಮೀನ್ ಮಟ್ಟು

Spread the love

ಆರ್.ಎಸ್.ಎಸ್. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ – ದಿನೇಶ್ ಅಮೀನ್ ಮಟ್ಟು

ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಸಂಘಟನೆಯಾಗಿದ್ದು ಎಂದೂ ಕೂಡ ತನ್ನ ಸಂಘದ ಮಂಚೂಣಿ ಹುದ್ದೆಗಳಲ್ಲಿ ದಲಿತರನ್ನು ಹಿಂದುಳಿದ ವರ್ಗದವರನ್ನು ಸೇರಿಸುವ ಕೆಲಸವನ್ನು ಮಾಡಿಲ್ಲ ಎಂದು ಸಾಮಾಜಿಕ ಚಿಂತಕರೂ ಹಾಗೂ ಪತ್ರಕರ್ತರೂ ಆಗಿರುವ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅವರು ಭಾನುವಾರ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಸಹಬಾಳ್ವೆ ಉಡುಪಿ ಸಂಘಟನೆಯ ವತಿಯಿಂದ ಆಯೋಜಿಸಿದ ಸರ್ವಜನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಶಾಂತಿ ಸಹಬಾಳ್ವೆಗೆ ಮಾದರಿಯಾದ ಜಿಲ್ಲೆಗಳಾಗಿದ್ದು ಎಲ್ಲಾ ಧರ್ಮಗಳ ಜನರು ಒಗ್ಗಟ್ಟಾಗಿ ಬಾಳಿ ಬದುಕಿದ ಉದಾಹರಣೆಗಳು ಒಂದು ಕಾಲದಲ್ಲಿ ದೇಶಕ್ಕೆ ಸಹಬಾಳ್ವೆಯ ಸಂದೇಶವನ್ನು ನೀಡಿದ್ದವು. ಆದರೆ ಇತ್ತೀಚೆಗೆ ಕೂಡಿ ಬಾಳುವ ಸೌಹಾರ್ದತೆಯನ್ನು ಒಡೆದು ಹಾಕುವ ಪ್ರಯತ್ನಗಳು ನಡೆದಿವೆ. ಇಂದು ಒಂದು ಧರ್ಮವನ್ನು ಮಾತ್ರ ಹೇರುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದ್ದು ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪಬೇಕು ಎನ್ನುವ ದಬ್ಬಾಳಿಕೆ ನಡೆಯುತ್ತಿದೆ. ಇಂದು ದೇಶದಲ್ಲಿ ಮುಖವಾಡ ಹಾಕಿಕೊಂಡು ರಾಜಕೀಯ ಮಾಡುವುದು ಹೆಚ್ಚಾಗುತ್ತಿದೆ.

ದೇವಸ್ಥಾನಗಳಿಗೆ ಹೋಗುವಾಗ ಮೀನು ತಿಂದು ಹೋದರೆ ಅದನ್ನೆ ವಿಷಯವ್ನಾಗಿಸುವ ಸಮಾಜದಲ್ಲಿ ಬದುಕುತ್ತೇವೆ ಆದರೆ ದೇವರು ಸಹ ಮೀನು ಮಾಂಸವನ್ನು ಪ್ರಸಾದವನ್ನಾಗಿಸುವ ವ್ಯವಸ್ಥೆ ಕರಾವಳಿಯಲ್ಲಿ ಇಂದಿಗೂ ಚಾಲ್ತಿಯಲ್ಲಿದೆ ಎನ್ನುವುದನ್ನು ಆರ್ ಎಸ್ ಎಸ್ ಸಿದ್ದಾಂತದವರು ಮರೆಯುತ್ತಿದ್ದಾರೆ. ಕೇವಲ ರಾಮಮಂದಿರದ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಪಕ್ಷಗಳ ಬಗ್ಗೆ ಜನತೆ ಎಚ್ಚರವಹಿಸಬೇಕಾಗಿದೆ. ಇಂದು ನಮ್ಮ ಮನೆಯಾದ ದೇಶಕ್ಕೆ ಬೆಂಕಿ ಬಿದ್ದಿದ್ದು, ಅದನ್ನು ಆರಿಸುವ ಕೆಲಸ ನಡೆಯಬೇಕು. ಮುಂದಿರುವ ಲೋಕಸಭೆಯಲ್ಲಿ ಮುಖವಾಡ ಧರಿಸಿದ ವ್ಯಕ್ತಿಗಳನ್ನು ದೂರವಿಟ್ಟು ನೈಜ ಮುಖಗಳಿಗೆ ಮತದಾನ ಮಾಡುವ ಮೂಲಕ ಸಂವಿಧಾನದ ಆಶಯವನ್ನು ಉಳಿಸಬೇಕಾಗಿದೆ.

ಮಠಾಧಿಪತಿಗಳಿಗೆಲ್ಲಾ ಹಿರಿಯರಾಗಿರುವ ಪೇಜಾವರ ಹಿರಿಯ ಸ್ವಾಮೀಜಿಗಳು ಮೊದಲು ಹಿಂದುತ್ವದ ನಿಜವಾದ ಅರ್ಥವನ್ನು ಸಮಾಜಕ್ಕೆ ತಿಳಿಹೇಳಬೇಕಾಗಿದೆ. ಕೇವಲ ಒಂದು ಪಕ್ಷ ಪರವಾಗಿರುವ ಅಭ್ಯರ್ಥಿಗಳನ್ನು ಬೆಂಬಲಿಸುವುದು ನಿಜವಾದ ಹಿಂದು ಧರ್ಮವಲ್ಲ ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವನೆಯನ್ನು ಅವರು ಬೆಳೆಸಿಕೊಳ್ಳಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರ್ಗಿ ಮರುಳಕಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ, ಎಲ್ಲ ಧರ್ಮಗಳನ್ನೂ ಪ್ರೀತಿಸಿ ಸರ್ವರಲ್ಲೂ ಸೋದರತ್ವವನ್ಬು ಕಾಣುವುದೇ ದೊಡ್ಡ ಧರ್ಮ ಎಂದರು. ನೆಲಕ್ಕೆ ಬಿದ್ದವರನ್ನು ಮೇಲಕ್ಕೆತ್ತುವ, ಶಾಂತಿ ಮಂತ್ರವನ್ನು ಸಾರುವ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳಬೇಕು ಎಂಬುದನ್ನು ಎಲ್ಲ ಧರ್ಮಗಳು ಸಾರುತ್ತವೆ.

ಆದರೆ, ಈಚಿನ ದಿನಗಳಲ್ಲಿ ಖಾವಿಧಾರಿಗಳು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬಂತಾಗಿದೆ. ಖಾವಿಯ ಮೂಲಕ ಕ್ರಾಂತಿಯ ಸಂದೇಶ ಸಾರಬೇಕಾದ ಅಗತ್ಯವಿದೆ ಎಂದರು.

ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದ್ದ ನಾಡಿನಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಯಾರನ್ನೋ ಕೊಲೆಗೈದು ದೇಶೋದ್ಧಾರದ ಮಾತನಾಡುವ ದಿನಗಳು ಬಂದಿವೆ ಎಂದು ವಿಷಾದಿಸಿದರು. ಆಹಾರ ಸ್ವಾತಂತ್ರ್ಯವನ್ನು ಅವರಿಗೇ ಬಿಟ್ಟುಬಿಡುವಂತೆ ಸಲಹೆ ನೀಡಿದರು. ಮೂಲಭೂತವಾದಿಗಳಿಗೆ ಸೂಕ್ತ ಉತ್ತರ ನೀಡುವಂತೆ ಸೂಚಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಅಂಕಣಕಾರ ಶಿವಸುಂದರ್, ಸಮಾನತೆ, ಸಹೋದರತೆ ಪ್ರತಿಯೊಬ್ಬರ ಹಕ್ಕು. ಯಾವುದೇ ಸರ್ಕಾರಗಳು ಬಂದರೂ ಅವುಗಳ ವಿರುದ್ಧ ಪ್ರಶ್ನೆ ಮಾಡುವ ಹಕ್ಕು ರೂಢಿಸಿಕೊಳ್ಳಬೇಕು ಎಂದರು.
ಕಳೆದ ಐದು ವರ್ಷದಿಂದ ಭಯಾನಕ ವಾತಾವರಣ ದೇಶದಲ್ಲಿದೆ. ಗಡಿ ಕಾಯುವ ಸೈನಿಕರ ಸಾವಿಗಿಂತ ಆಂತರಿಕ ಭಯೋತ್ಪಾದನೆಯಿಂದಾಗಿ ಸತ್ತವರ ಸಂಖ್ಯೆ ಹೆಚ್ಚು ಎಂದು ಅಂಕಿಅಂಶದೊಂದಿಗೆ ವಿಶ್ಲೇಷಿಸಿದರು.

ಹಿಂದೆ ಅನ್ನ ಕಸಿಯುತ್ತಿದ್ದರೆ, ಇಂದು ಅನ್ನಕ್ಕೇ ವಿಷವಿಕ್ಕಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕೇವಲ ಸುಳ್ಳು ಹೇಳಲಾಗುತ್ತಿದೆ. ಕಳೆದ 45 ವರ್ಷದಲ್ಲಿ ಇಲ್ಲದಷ್ಟು ಪ್ರಮಾಣದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ನೋಟು ಅಮಾನ್ಯೀಕರಣಕ್ಕೆ ನೀಡಿದ ಯಾವುದೇ ಆಶಯಗಳೂ ಈಡೇರಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ವೈ. ಎಸ್. ವಿ. ದತ್ತ, ಕಳೆದ 5 ವರ್ಷದಲ್ಲಿ ಸಂವಿಧಾನ ರಕ್ಷಣೆ ಬದಲಿಗೆ ಬದಲಾಯಿಸುವ ಬಗ್ಗೆ ಹೆಚ್ಚಾಗಿ ಕೇಳುತ್ತಿದೆ. ಸಂವಿಧಾನ ದತ್ತ ಸ್ವಾಯತ್ತ ಸಂಸ್ಥೆಗಳು ಒಬ್ಬ ವ್ಯಕ್ತಿಯ ಕೈಯಲ್ಲಿರುವುದು ವಿಷಾದನೀಯ ಎಂದರು.

ಉಡುಪಿ ಧರ್ಮಪ್ರಾಂತ್ಯದ ಉಜ್ವಾಡ್ ಪತ್ರಿಕೆಯ ಸಂಪಾದಕ ವಂ|ಚೇತನ್ ಲೋಬೊ ಮಾತನಾಡಿ ಇಂದು ನಮ್ಮಲ್ಲಿ ಬೂಟಾಟಿಕೆಯ ಧಾರ್ಮಿಕತೆಯ ಅಮಲು ಮಿತಿಮೀರುತ್ತಿದ್ದು,ಅದರಲ್ಲಿ ಯಾವುದೇ ರೀತಿಯ ಮನುಷತ್ವ ಎನ್ನುವುದು ಕಾಣುವುದಿಲ್ಲ. ಧಾರ್ಮಿಕತೆ ಎನ್ನುವುದು ಕೇವಲ ಪ್ರದರ್ಶನದ ವಿಚಾರವಾಗಿ ಬೆಳೆಯುತ್ತಿದ್ದು, ಪ್ರೀತಿ, ಕ್ಷಮೆ ಸಹಬಾಳ್ವೆಯ ವಿಚಾರಗಳನ್ನು ಗಾಳಿಗೆ ತೂರುತ್ತಿದ್ದೇವೆ. ದೇಶದಲ್ಲಿ ಪ್ರಶ್ನಿಸುವವರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ದೇಶದ ಮಾಧ್ಯಮಗಳು ಆಡಳಿತ ಪಕ್ಷದ ಮನೆಗಳನ್ನು ಕಾಯುವ ಕಾವಲು ನಾಯಿಗಳಾಗಿ ವರ್ತಿಸುತ್ತಿದ್ದು, ಅವುಗಳು ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ. ಒಂದು ವರ್ಗದ ಜನರನ್ನು ಮತಾಂತರ, ಲವ್ ಜಿಹಾದ್ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಅವಹೇಳನ ಮಾಡುವ ಕೆಲಸ ದೇಶದಲ್ಲಿ ನಡೆಯುತ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ನಮ್ಮ ಕಣ್ಣ ಮುಂದೆ ಏನು ನಡೆಯುತ್ತಿದೆ ಎನ್ನುವುದನ್ನು ಅರಿತು ಮತದಾನ ಮಾಡಬೇಕು ಎಂದರು.

ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಲಿತ ಮತ್ತು ನೊಂದ ಸಮಾಜದವರ ವಿರೋಧಿಯಾಗಿದ್ದು ಎಂದೂ ಕೂಡ ಅಂತ ಸಮುದಾಯದ ಏಳಿಗೆಗೆ ದನಿ ಎತ್ತಿಲ್ಲ. ದೇಶದ ಜನರಿಗೆ ಸುಳ್ಳನ್ನು ಹೇಳಿ ಒಡೆದು ಆಳುವ ಕೆಲಸವನ್ನು ಆರ್ ಎಸ್ ಎಸ್ ಮಾಡುತ್ತಿದ್ದು, ಅದರ ವೈಯುಕ್ತಿಕ ಲಾಭಕ್ಕೆ ದೇಶವನ್ನು ಬಲಿ ಕೊಡುವ ಕೆಲಸ ನಡೆಯುತ್ತಿದೆ. ಸಂಘಟನೆಗಳ ಹೆಸರಿನಲ್ಲಿ ಅಮಾಯಕ ಯುವಕರನ್ನು ದಾರಿ ತಪ್ಪಿಸುವ ಕೆಲಸ ದೇಶವನ್ನು ಆಳುವ ಸರಕಾರದಿಂದ ಕಳೆದ 5 ವರ್ಷಗಳಲ್ಲಿ ನಡೆದಿದೆ. ಇದಕ್ಕೆಲ್ಲಾ ಹಿಂದಿನ ಕಾಂಗ್ರೆಸ್ ಸರಕಾರಗಳ ಅದರ ಪಕ್ಷದ ಸಂಘಟನಾ ಕೊರತೆ ಸಹ ಕಾರಣವಾಗಿದ್ದು ಅದರ ಪರಿಣಾಮವಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆ ನಡೆಯುತ್ತಿದೆ ಎಂದರು.

ಸ್ವಾಗತಿಸಿ ಪ್ರಸ್ತಾವನೆಗೈದ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ ಶೆಣೈ, ಸಹೋದರತೆ, ಸೌಹಾರ್ದತೆ ಮತ್ತು ಶಾಂತಿ ಸ್ಥಾಪನೆಯ ಆಶಯದೊಂದಿಗೆ ಈ ಸಮಾವೇಶ ಆಯೋಜಿಸಲಾಗಿದೆ. ಕರಾವಳಿಯ ಯುವಕರಿಗೆ ಜಾತ್ಯತೀತತೆ ಮತ್ತು ಧರ್ಮಾತೀತತೆಯ ಅರ್ಥ ಗೊತ್ತಿಲ್ಲ ಎಂದರು.ಧರ್ಮ ಎಂಬುದು ಖಾಸಗಿ ವಿಷಯ. ರಾಷ್ಟ್ರಧ್ವಜವೇ ಧರ್ಮ, ಸಂಸತ್ ದೇವಸ್ಥಾನ, ಸಂವಿಧಾನವೇ ನಮ್ಮ ಗ್ರಂಥವಾಗಬೇಕು ಎಂದು ಆಶಿಸಿದರು.

ದಲಿತ ಚಿಂತಕ ಇಂದೂಧರ ಹೊನ್ನಾಪುರ, ಪತ್ರಕರ್ತ ಅಬ್ದುಸ್ಸಲಾಂ ಪುತ್ತಿಗೆ, ಫಾ. ಚೇತನ್ ಲೋಬೊ, ಜೆಡಿಎಸ್ ನ ಮಹೇಂದ್ರಕುಮಾರ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ. ಆರ್. ಸುದರ್ಶನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಉದ್ಯಮಿ ಜೆರ್ರಿ ಡಯಾಸ್, ಚಿಂತಕ ಜಿ. ರಾಜಶೇಖರ್, ದಲಿತ ಮುಂದಾಳುಗಳಾದ ಪುತ್ರನ್ ಮತ್ತು ಬೊಗ್ರ ಕೊರಗ, ಸುಗಮ್ಯ ಅಧ್ಯಕ್ಷೆ ಜಾನೆಟ್ ಬರ್ಬೋಜ, ವಿವಿಧ ಘಟಕಗಳ ಅಧ್ಯಕ್ಷರಾದ ಪ್ರಶಾಂತ ಜತ್ತನ್ನ ಮತ್ತು ಅನಿತಾ ಡಿ’ಸೋಜ ಕಾರ್ಕಳ, ದಸಂಸ ಮೈಸೂರು ವಿಭಾಗ ಸಂಚಾಲಕ ಶೇಖರ ಹೆಜಮಾಡಿ ಮೊದಲಾದವರಿದ್ದರು.

ಆಲ್ವಿನ್ ದಾಂತಿ, ವೆರೋನಿಕಾ ಕರ್ನೆಲಿಯೋ, ಡಾ|ಸುನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Photo Album


Spread the love